ಶಿವಮೊಗ್ಗ: ಜಿಲ್ಲೆಯಲ್ಲಿ ಗುರುವಾರ 37 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಈವರೆಗೆ 141 ಮಂದಿ ಗುಣಮುಖರಾಗಿದ್ದು 227 ಸಕ್ರಿಯ ಪ್ರಕರಣಗಳಿವೆ. ಗಾಂಧಿ ನಗರ ನಿವಾಸಿ ಪಿ-14381 ಜತೆ ಪ್ರಾಥಮಿಕ ಸಂಪರ್ಕ ಹೊಂದಿರುವ ಇಬ್ಬರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.
ಪಿ-18070 ಗೋಪಾಳದ ವ್ಯಕ್ತಿಯೊಬ್ಬರೊಂದಿಗೆ ಸಂಪರ್ಕ ಹೊಂದಿದ್ದ ಎರಡು ವರ್ಷದ ಮಗು ಸೇರಿದಂತೆ 30 ವರ್ಷದ ಮಹಿಳೆಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಉಪ್ಪಾರ ಕೇರಿಗೆ ಬಂದಿದ್ದ ಪಿ-21631ಗೆ ಕೋವಿಡ್ ಪಾಸಿಟಿವ್ ಬಂದ ನಂತರ ಗಾಂಧಿ ಬಜಾರ್‌ನಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಜನನಿಬಿಡ ಪ್ರದೇಶ ಆಗಿರುವುದರಿಂದ ಮುತುವರ್ಜಿ ವಹಿಸಲಾಗಿತ್ತು. ಆದರೀಗ, ವ್ಯಕ್ತಿ ಜತೆಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 22 ವರ್ಷದ ಮಹಿಳೆಯಲ್ಲೂ ಸೋಂಕು ದೃಢಪಟ್ಟಿದೆ. ಹೀಗಾಗಿ, ಬಡಾವಣೆಯಲ್ಲಿ ಜನರು ಭೀತಿಗೀಡಾಗಿದ್ದಾರೆ. ಇತ್ತೀಚೆಗೆ ಟ್ಯಾಂಕ್ ಮೊಹಲ್ಲಾದ 70 ವರ್ಷದ (ಪಿ-18073) ವೃದ್ಧೆ ಮೃತಪಟ್ಟಿದ್ದರು. ಈಕೆಯೊಂದಿಗೆ ಸಂಪರ್ಕ ಹೊಂದಿದ್ದ 1 ವರ್ಷದ ಮಗುವಿನಲ್ಲಿ ಕೋವಿಡ್ ಪಾಸಿಟಿವ್ ಬಂದಿದೆ. ಟ್ಯಾಂಕ್ ಮೊಹಲ್ಲಾದಲ್ಲೂ ವೃದ್ಧೆಯ ಸಾವು ಜನರು ಧೃತಿಗಡುವಂತೆ ಮಾಡಿದೆ. ಪಿ-25799 ಜತೆ ಸಂಪರ್ಕ ಹೊಂದಿದ್ದ ಮೂವರಿಗೆ ಸೋಂಕು ತಗುಲಿದೆ.
10 ಮಂದಿಯಲ್ಲಿ ರೋಗದ ಲಕ್ಷಣಗಳು ಪತ್ತೆಯಾಗಿವೆ. ಏಳು ಜನರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿದ್ದರೂ ಸೋಂಕು ಹೇಗೆ ತಗುಲಿದೆ ಎಂಬುದೇ ಜಿಲ್ಲಾಡಳಿತದ ಪಾಲಿಗೆ ದೊಡ್ಡ ಸವಾಲಾಗಿದೆ. ಇವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಬೆಂಗಳೂರಿನಿಂದ ಆಗಮಿಸಿದ್ದ ಎಂಟು ಮಂದಿ ಮತ್ತು ಆಂಧ್ರ ಪ್ರದೇಶದಿಂದ ಬಂದಿದ್ದ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಬೆಂಗಳೂರಿನಿಂದ ತೀರ್ಥಹಳ್ಳಿ ತಾಲೂಕು ಮಂಡಗದ್ದೆಯ ಸಿಂದೋಡಿ ಗ್ರಾಮಕ್ಕೆ ಬಂದಿದ್ದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿತ್ತು. ಆತನಿಗೆ ಮೆಗ್ಗಾನ್ ಆಸ್ಪತ್ರೆಯ ಕ್ವಾರಂಟೈನ್ ವಾರ್ಡ್ ನಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಆತ ಗುಣಮುಖನಾಗಿ ಬಿಡುಗಡೆ ಕೂಡ ಆಗಿದ್ದಾನೆ. ಆದರೀಗ, ಪ್ರಾಥಮಿಕ ಸಂಪರ್ಕ ಹೊಂದಿದ್ದ ಆತನ ಅತ್ತೆಗೂ ಕೋವಿಡ್ ಪಾಸಿಟಿವ್ ಬಂದಿದೆ. ರೋಗದ ಲಕ್ಷಣಗಳು ಕಂಡುಬಂದಿದ್ದರಿಂದ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು, ಸೋಂಕಿರುವುದು ದೃಢಪಟ್ಟಿದೆ.
ಕಂಟೈನ್‌ಮೆಂಟ್ ಝೋನ್ ಏರಿಕೆ: ನಗರದ ನಾನಾ ಕಡೆ ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಹಲವೆಡೆ ಸೀಲ್ ಡೌನ್ ಮಾಡಲಾಗಿದೆ. ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅವರ ಮನೆ ಒ.ಟಿ. ರಸ್ತೆಯಲ್ಲಿದ್ದು, ನೂರು ಮೀಟರ್ ವ್ಯಾಪ್ತಿಯಲ್ಲಿ ಸೀಲ್‌ಡೌನ್ ಮಾಡಲಾಗಿದೆ. ಮಧ್ಯಾಹ್ನ ಒ.ಟಿ. ರಸ್ತೆಯನ್ನು ಬಂದ್ ಮಾಡಲಾಗಿದೆ. ಹೀಗಾಗಿ, ಈ ಭಾಗದಲ್ಲಿರುವ ಅಂಗಡಿ, ಮುಂಗಟ್ಟು ಮಾಲೀಕರಿಗೆ ಭೀತಿ ಶುರುವಾಗಿದೆ. ಗಾಂಧಿ ಬಜಾರ್, ಮಿಳಘಟ್ಟ, ಓಲ್ಡ್ ಬಾರ್ ಲೈನ್ ರೋಡ್, ಶರಾವತಿ ನಗರ, ಕುಂಬಾರಗುಂಡಿ, ನ್ಯೂಮಂಡ್ಲಿ, ನಿರ್ಮಲ ನರ್ಸಿಂಗ್ ಹೋಂ ರಸ್ತೆ ಸೇರಿದಂತೆ ಹಲವೆಡೆ ರಸ್ತೆಗಳಿಗೆ ಅಡ್ಡಲಾಗಿ ಬ್ಯಾರಿಕೇಡ್‌ಗಳನ್ನು ಹಾಕಿ ಕಂಟೈನ್‌ಮೆಂಟ್ ಝೋನ್‌ಗಳೆಂದು ಘೋಷಿಸಲಾಗಿದೆ.