Advertisement

ಕೆಎಫ್‌ಡಿ ಆತಂಕ ತಗ್ಗಿಸಿದ ಕೊರೊನಾ!

03:51 PM Mar 15, 2020 | Naveen |

ಶಿವಮೊಗ್ಗ: ದೇಶದೆಲ್ಲೆಡೆ ಕೊರೋನಾ ವೈರಸ್‌ ಆತಂಕ ಸೃಷ್ಟಿಸುತ್ತಿದ್ದರೆ, ಮಲೆನಾಡಲ್ಲಿ ಮಾತ್ರ ಕೊರೊನಾದೊಂದಿಗೆ ಕೆಎಫ್‌ಡಿ ವೈರಸ್‌ ಆತಂಕ ಮನೆಮಾಡಿದೆ. ಆದರೆ ಪ್ರತಿ ವರ್ಷ ಕಾಡುವ ಕೆಎಫ್‌ಡಿ ವೈರಸ್‌ (ಮಂಗನ ಕಾಯಿಲೆ) ರುದ್ರನರ್ತನ ಈ ಬಾರಿ ತಗ್ಗಿದ್ದು ಸಮಾಧಾನದ ಸಂಗತಿಯಾಗಿದೆ. ಕಳೆದ ಬಾರಿ ಮಾರ್ಚ್‌ ಆರಂಭದೊಳಗೆ 10 ಮಂದಿ ಈ ಮಹಾಮಾರಿಗೆ ಬಲಿಯಾಗಿದ್ದರು.

Advertisement

ಈ ವರ್ಷ ಈ ವರೆಗೆ ಶಿವಮೊಗ್ಗ ಜಿಲ್ಲೆಯ ಒಬ್ಬರು ಹಾಗೂ ಉತ್ತರ ಕನ್ನಡದಲ್ಲಿ ಒಬ್ಬರು ಸಾವಿಗೀಡಾಗಿದ್ದು, ಕಾಯಿಲೆ ಪ್ರಮಾಣ ತಗ್ಗಿದೆ. ಪ್ರತಿ ವರ್ಷ ನವೆಂಬರ್‌ನಿಂದ ಜೂನ್‌ವರೆಗೆ ಕಾಡುವ ಭಯಾನಕ ವೈರಸ್‌ಗೆ ಈ ಬಾರಿ ಸರಕಾರ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳು ಫಲ ಕೊಟ್ಟಿವೆ. ಈ ಬಾರಿ ಜೂನ್‌ ತಿಂಗಳಿಂದಲೇ ವೈರಸ್‌ ಬಾ ಧಿತ ಪ್ರದೇಶಗಳಲ್ಲಿ ವ್ಯಾಕ್ಸಿನೇಷನ್‌ ಕಾರ್ಯಕ್ರಮಕ್ಕೆ ಚಾಲನೆ ನೀಡ ಲಾಗಿತ್ತು. ಶೇ. 70ರಷ್ಟು ಜನ ಲಸಿಕೆ ಪಡೆದಿದ್ದಾರೆ.

ಕೆಲವರು ಒಂದು, ಎರಡು, ಮೂರು ಬಾರಿ ಲಸಿಕೆ ಪಡೆದಿದ್ದಾರೆ. ಎರಡು ಮತ್ತು ಮೂರು ಬಾರಿ ಲಸಿಕೆ ಪಡೆದವರಲ್ಲಿ ವೈರಸ್‌ ಆಕ್ರಮಣವನ್ನು ತಡೆಯುವ ಚೈತನ್ಯ ಬಂದಿದ್ದು ಮರಣ ಪ್ರಮಾಣ ಮತ್ತು ಆಸ್ಪತ್ರೆಯಲ್ಲಿ ನರಳುವವರ ಸಂಖ್ಯೆ ಕಡಿಮೆಯಾಗಿದೆ.

97 ಮಂದಿಯಲ್ಲಿ ಪಾಸಿಟಿವ್‌: ವೈರಸ್‌ ಪೀಡಿತ ಐದು ಜಿಲ್ಲೆಗಳಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡದಲ್ಲಿ ಶಂಕಿತ ವ್ಯಕ್ತಿಗಳಿಂದ ರಕ್ತದ ಮಾದರಿ ಪಡೆಯಲಾಗಿದ್ದು ಈವರೆಗೆ 97 ಮಂದಿಯಲ್ಲಿ ಕೆಎಫ್‌ಡಿ ಪಾಸಿಟಿವ್‌ ಬಂದಿದೆ. ಇವರಲ್ಲಿ ಶಿವಮೊಗ್ಗದ 83, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರಿನ ತಲಾ ಏಳು ಮಂದಿಗೆ ಪಾಸಿಟಿವ್‌ ಬಂದಿದೆ. ಉಡುಪಿ, ಹಾಸನದಲ್ಲಿ ಯಾವುದೇ ಪ್ರಕರಣ ಕಂಡುಬಂದಿಲ್ಲ.

ಕಳೆದ ವರ್ಷ ಇದೇ ವಾರದಲ್ಲಿ (ಮಾ.7) 243 ಪಾಸಿಟಿವ್‌ ಕೇಸ್‌ಗಳಿದ್ದವು. 10 ಮಂದಿ ಮೃತಪಟ್ಟಿದ್ದರು. 2020 ಮಾ.7ರವರೆಗೆ
3790 ಮಂದಿಯ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದ್ದು 97 ಪಾಸಿಟಿವ್‌ ಬಂದಿದೆ. ರಕ್ತದ ಮಾದರಿ ಪರೀಕ್ಷೆಯಲ್ಲೂ ಈ ಬಾರಿ ಉತ್ತಮ ಸಾಧನೆ ಮಾಡಲಾಗಿದ್ದು ಕಳೆದ ಬಾರಿಗಿಂತ ದ್ವಿಗುಣಗೊಂಡಿದೆ. ಈವರೆಗೆ ಶಿವಮೊಗ್ಗದಲ್ಲಿ 2.20 ಲಕ್ಷ, ಉತ್ತರ ಕನ್ನಡ 50 ಸಾವಿರ, ಚಿಕ್ಕಮಗಳೂರು 24 ಸಾವಿರ, ಉಡುಪಿಯಲ್ಲಿ 30 ಸಾವಿರ ಮಂದಿಗೆ ವ್ಯಾಕ್ಸಿನೇಷನ್‌ ಮಾಡಲಾಗಿದೆ.

Advertisement

ಕಳೆದ ಬಾರಿಯ ಪೂರ್ವಸಿದ್ಧತೆ ಕೊರತೆಯಿಂದ ಪಾಠ ಕಲಿತಿರುವ ಆರೋಗ್ಯ ಇಲಾಖೆ, ಚಿಕಿತ್ಸಾ ಕ್ರಮವನ್ನು ಬದಲಾಯಿಸಿದೆ. ಜ್ವರ ಕಂಡುಬಂದಲ್ಲಿ ರಕ್ತದ ಮಾದರಿ ಕೊಡಲು ತಾಲೂಕು ಆಸ್ಪತ್ರೆಗೇ ಬರಬೇಕಿತ್ತು. ಈ ಬಾರಿ ಇದನ್ನು ತಪ್ಪಿಸುವ ಉದ್ದೇಶದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ.

ಆರು ಗಂಟೆ ಅವಧಿಯಲ್ಲಿ ವರದಿ ಸಹ ಕೈಸೇರುತ್ತಿದೆ. ಈ ಕಾರಣದಿಂದಲೂ ಪೀಡಿತರನ್ನು ಬಹುಬೇಗ ಪತ್ತೆ ಹಚ್ಚಲು ನೆರವಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ಕಡಿಮೆಯಾದ ಮಂಗಗಳ ಸಾವು: ಕಳೆದ ವರ್ಷ ಸತ್ತ 41 ಮಂಗಗಳಲ್ಲಿ ಕೆಎಫ್‌ಡಿ ವೈರಸ್‌ ಕಾಣಿಸಿಕೊಂಡಿತ್ತು. ಈ ಬಾರಿ ಮಾ.7ರ ಒಳಗೆ ಮೂರು ಮಂಗಗಳಲ್ಲಿ (ಶಿವಮೊಗ್ಗದಲ್ಲಿ 2, ಉತ್ತರ ಕನ್ನಡದಲ್ಲಿ 1 ಮಂಗ) ಮಾತ್ರ ವೈರಸ್‌ ಕಾಣಿಸಿಕೊಂಡಿದೆ.

ಬಹುತೇಕ ಮಂದಿ ಚೇತರಿಕೆ
97 ಮಂದಿಯಲ್ಲಿ ಕೆಎಫ್‌ಡಿ ಪಾಸಿಟಿವ್‌ ಬಂದಿದ್ದರೂ ಬಹುತೇಕ ಮಂದಿ ಚೇತರಿಸಿಕೊಂಡು ಮನೆಯಲ್ಲಿ ಇದ್ದಾರೆ. ಸಾಗರ ತಾಲೂಕು ಆಸ್ಪತ್ರೆಯಲ್ಲಿ ಒಂದು, ತೀರ್ಥಹಳ್ಳಿಯಲ್ಲಿ 6, ಮೆಗ್ಗಾನ್‌ 2, ಮಣಿಪಾಲದಲ್ಲಿ 3 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಕಿ ಮಂದಿ ಚೇತರಿಸಿಕೊಂಡು ಮನೆಯಲ್ಲಿದ್ದು, ಮನೆಯಲ್ಲೇ ನಿಗಾ ಮುಂದುವರಿಸಲಾಗಿದೆ. ಪಾಸಿಟಿವ್‌ ಬಂದ ವ್ಯಕ್ತಿಗಳನ್ನು ಕಡ್ಡಾಯ ಒಂದು ವಾರ ಆಸ್ಪತ್ರೆಯಲ್ಲಿ ಉಳಿಸಿಕೊಂಡು ಚೇತರಿಸಿಕೊಂಡ ಮೇಲೆ ಮನೆಗೆ ಕಳುಹಿಸಲಾಗುತ್ತದೆ. ವ್ಯಾಕ್ಸಿನೇಷನ್‌ ಒಂದು, ಎರಡು ಡೋಸ್‌ ತೆಗೆದುಕೊಂಡ ಕಾರಣ ವೈರಸ್‌ ವಿರುದ್ಧ ಹೋರಾಡುವ ಶಕ್ತಿ ಕೆಲವರಲ್ಲಿ ಬಂದಿದೆ ಎನ್ನುತ್ತಾರೆ ವೈದ್ಯಾಧಿಕಾರಿಗಳು.

ಈ ಬಾರಿ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಲಸಿಕೆ, ರಕ್ತ ಮಾದರಿ ಪರೀಕ್ಷೆ ಅನೇಕ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕೆಎಫ್‌ಡಿ ವೈರಸ್‌ ಬಾ ಧಿತರು, ಸಾವಿಗೀಡಾದವರ ಪ್ರಮಾಣ ಕಡಿಮೆ ಇದೆ. ಜೂನ್‌ವರೆಗೂ ಇಲಾಖೆ ಮುನ್ನೆಚ್ಚರಿಕೆ ವಹಿಸಲಿದೆ.
ಡಾ|ಕಿರಣ್‌,
ನಿರ್ದೇಶಕರು, ವಿಡಿಎಲ್‌ ಲ್ಯಾಬ್‌

„ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next