Advertisement

ಪ್ಲಾಸ್ಟಿಕ್‌ ನಿಷೇಧ ಕಟ್ಟುನಿಟ್ಟಿನ ಜಾರಿಗೆ ಸೂಚನೆ

03:06 PM Dec 06, 2019 | Naveen |

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಸಹ ಪ್ಲಾಸ್ಟಿಕ್‌ ನಿಷೇಧವನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ನ್ಯಾಯಮೂರ್ತಿ ಸುಭಾಷ್‌ ಬಿ. ಅಡಿ ಅವರು ಸೂಚನೆ ನೀಡಿದರು.

Advertisement

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ನ್ಯಾಯಾಧಿಕರಣದ ಮಾರ್ಗಸೂಚಿ ಅನುಷ್ಠಾನದ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.

ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್‌ ಬಳಕೆ ಮಾಡಲು ಅವಕಾಶ ನೀಡಬಾರದು. ಪ್ಲಾಸ್ಟಿಕ್‌ ಬಳಕೆ ವಿರುದ್ಧ ನಿರಂತರ ದಾಳಿ ನಡೆಸಿ ಸಂಪೂರ್ಣ ಪ್ಲಾಸ್ಟಿಕ್‌ ಮುಕ್ತಗೊಳಿಸಬೇಕು. ಹೊಟೇಲ್‌ಗ‌ಳಲ್ಲಿ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣ ನಿಯಂತ್ರಿಸಬೇಕು. ತಮ್ಮ ಉತ್ಪನ್ನಗಳ ಪ್ಯಾಕಿಂಗ್‌ನಲ್ಲಿ ಪ್ಲಾಸ್ಟಿಕ್‌ ಬಳಸುವ ಎಲ್ಲಾ ಉತ್ಪಾದಕರನ್ನು ಕರೆಸಿ ಪ್ಲಾಸ್ಟಿಕ್‌ ವಿಲೇವಾರಿಗೆ ತಗಲುವ ವೆಚ್ಚವನ್ನು ಅವರಿಂದ ಭರಿಸಿಕೊಳ್ಳಬೇಕು. ಆನ್‌ಲೈನ್‌ ಮಾರ್ಕೆಟಿಂಗ್‌ ಕಂಪೆನಿಗಳು ಪ್ಯಾಕಿಂಗ್‌ನಲ್ಲಿ ಬಳಸುವ ಪ್ಲಾಸ್ಟಿಕ್‌ ವಿಲೇವಾರಿಗೆ ಅವರೇ ಘಟಕವನ್ನು ತೆರೆಯಬೇಕು ಅಥವಾ ಅದಕ್ಕಾಗಿ ಅವರಿಗೆ ಶುಲ್ಕ ನಿಗದಿಪಡಿಸಬೇಕು.

ಸ್ಯಾನಿಟರಿ ನ್ಯಾಪ್‌ಕಿನ್‌ ಮಾರ್ಕೆಟಿಂಗ್‌ ಮಾಡುವವರು ಅದನ್ನು ವಿಲೇವಾರಿ ಮಾಡಲು ಉತ್ಪನ್ನದೊಂದಿಗೆ ಸೂಕ್ತ ಕಾಗದದ ಕವರ್‌ ಒದಗಿಸುವುದು ಕಡ್ಡಾಯ. ಅದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.

ಮನೆ ಹಂತದಲ್ಲಿ ವಿಂಗಡಿಸದ ತ್ಯಾಜ್ಯವನ್ನು ಯಾವುದೇ ಕಾರಣಕ್ಕೂ ಪಡೆಯಬಾರದು. ಪೈಪ್‌ ಕಂಪೋಸ್ಟಿಂಗ್‌ ಪದ್ಧತಿಯನ್ನು ಎಲ್ಲಾ ವಾರ್ಡ್‌ಗಳಲ್ಲಿ ಜನಪ್ರಿಯಗೊಳಿಸಬೇಕು. ಇದಕ್ಕಾಗಿ ಪ್ರತಿ ವಾರ್ಡ್ನಲ್ಲಿ ಜನರನ್ನು ಸೇರಿಸಿ ಪ್ರಾತ್ಯಕ್ಷಿಕೆ ಮಾಡಬೇಕು.

Advertisement

ಪೈಪ್‌ ಕಂಪೋಸ್ಟಿಂಗ್‌ ಸೇರಿದಂತೆ ಸ್ಥಳೀಯವಾಗಿ ವಾರ್ಡ್‌ವಾರು ಹಸಿ ಕಸವನ್ನು ವಿಲೇವಾರಿ ಮಾಡಲು ಯೋಜನೆ ರೂಪಿಸಿ. ಇದರಿಂದ ತ್ಯಾಜ್ಯ ಸಾಗಾಟ ಕಾರ್ಯ ಉಳಿಯಲಿದೆ. ಇಂದೋರ್‌ ನಗರದಲ್ಲಿ ಈ ಪ್ರಯೋಗ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.

ಹಸಿ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸಿ  ರೈತರಿಗೆ ಸಬ್ಸಿಡಿ ದರದಲ್ಲಿ ಮಾರಾಟ ಮಾಡಬಹುದಾಗಿದೆ. ಭದ್ರಾವತಿ ನಗರಸಭೆಯಲ್ಲಿ ಪ್ರಸ್ತುತ 27 ಟ್ರ್ಯಾಕ್ಟರ್‌ನಷ್ಟು ತ್ಯಾಜ್ಯ ಗೊಬ್ಬರವನ್ನು ರೈತರಿಗೆ ಮಾರಾಟ ಮಾಡಿರುವ ರೀತಿ ಇತರ ಸ್ಥಳೀಯ ಸಂಸ್ಥೆಗಳು ತಮ್ಮಲ್ಲಿ ಸಿದ್ಧವಾಗುವ ತ್ಯಾಜ್ಯಗಳಿಗೆ ಬ್ರ್ಯಾಂಡ್ ರೂಪಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು.

ಬೈಲಾ ಸಿದ್ಧ: ಜಿಲ್ಲಾ ಧಿಕಾರಿ ಕೆ.ಬಿ. ಶಿವಕುಮಾರ್‌ ಅವರು ಮಾತನಾಡಿ, ಕಳೆದ ತಿಂಗಳು ತಮ್ಮ ಭೇಟಿ ಸಂದರ್ಭದಲ್ಲಿ ಸೂಚಿಸಿರುವ ರೀತಿಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ತ್ಯಾಜ್ಯ ವಿಲೇವಾರಿಗಾಗಿ ಬೈಲಾ ಅಂತಿಮಪಡಿಸಿದ್ದು, ಮುಂದಿನ ಸಾಮಾನ್ಯ ಸಭೆಯಲ್ಲಿ ಅದಕ್ಕೆ ಅನುಮೋದನೆ ದೊರೆಯಲಿದೆ. ಪ್ರಸ್ತುತ ಒಟ್ಟು 190 ವಾರ್ಡ್‌ಗಳ ಪೈಕಿ 165 ವಾರ್ಡ್‌ಗಳಲ್ಲಿ ಮನೆ ಹಂತದಲ್ಲಿ ವಿಂಗಡನೆ ಮಾಡಿದ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಟನ್‌ ಪ್ಲಾಸ್ಟಿಕ್‌ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಪೊಲೀಸ್‌ ವರಿಷ್ಠಾಧಿಕಾರಿ ಶಾಂತರಾಜು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್‌. ವೈಶಾಲಿ, ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next