ಶಿವಮೊಗ್ಗ: ಈ ಚುನಾವಣೆಯಲ್ಲಿ ಸಂಸದ, ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರಿಂದ ಷಡ್ಯಂತ್ರ ನಡೆದಿದೆ. ವಾಮಾಚಾರ, ಸಭೆ ನಡೆಸಲು ಬಿಡದೆ ಇರುವ ಕೆಲಸ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಿರುಚಿದ ವಿಡಿಯೋ ಮಾಡಿದ್ದಾರೆ. ನನ್ನ ಪರವಾಗಿ ಬಿಜೆಪಿಗೆ ಮತ ಹಾಕಿ ಎನ್ನುವ ರೀತಿಯಲ್ಲಿ ಸುದ್ದಿ ಹಬ್ಬಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳದೆ ಇದ್ದರೆ ಹೋರಾಟ ಮಾಡುತ್ತೇನೆ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಡಿಸಿ,ಎಸ್ಪಿಗೆ ನಾನು ದೂರು ನೀಡಿದ್ದೇನೆ. ಈ ಸುಳ್ಳು ಸುದ್ದಿಯಿಂದ ನನಗೆ ಅನೇಕ ವೋಟ್ ಅನ್ಯಾಯ ಆಗಿದೆ. ನನಗೆ ಮತ ನೀಡಲು ಬಂದವರಿಗೆ ಗೊಂದಲವಾಗಿದೆ. ಸುಳ್ಳು ಸುದ್ದಿಯಿಂದ ನನಗೆ ಮತದಾನ ಕಡಿಮೆಯಾಗಿದೆ. ಇದು ರಾಘವೇಂದ್ರ ಅವರ ಕುತಂತ್ರ, ಷಡ್ಯಂತ್ರ. ತಕ್ಷಣ ಸಂಸದ ರಾಘವೇಂದ್ರ ಅವರನ್ನು ಬಂಧಿಸಬೇಕು. ಒಂದು ವಾರ ಗಡುವು ನೀಡುತ್ತೇನೆ. 15 ನೇ ತಾರೀಖಿನೊಳಗೆ ಕ್ರಮ ಕೈಗೊಳ್ಳದೆ ಹೋದರೆ ಹೋರಾಟ ಮಾಡುತ್ತೇವೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು, ರಾಘವೇಂದ್ರ ಮೇಲೆ ಎಫ್ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದರು.
ಹಿಂದೂ ಸಮಾಜ ಗಮನಿಸಬೇಕು: ಇಡೀ ಮುಸ್ಲಿಮ್ ಸಮುದಾಯದ ಜಾಗೃತವಾಗಿದೆ. ಅತಿ ಹೆಚ್ಚು ಮುಸ್ಲಿಮರು ಈ ಬಾರಿ ಮತದಾನ ಮಾಡಿದ್ದಾರೆ. ಇದನ್ನು ಹಿಂದೂ ಸಮಾಜ ಗಮನಿಸಬೇಕು. ಹಿಂದೂ ಸಮಾಜವನ್ನು ಜಾತಿ ಹೆಸರಿನಲ್ಲಿ ರಾಷ್ಟ್ರೀಯ ಪಕ್ಷಗಳು ಹೊಡೆಯುತ್ತಿದೆ. ಮುಸ್ಲಿಮ್ ಸಮುದಾಯದ ಒಂದಾಗಿ ಮತದಾನ ಮಾಡಿದ್ದು ಈ ಬಾರಿಯ ವಿಶೇಷ ಎಂದರು.
ಕಾಂಗ್ರೆಸ್, ಬಿಜೆಪಿ ಜಾತಿ ಹೆಸರಲ್ಲಿ ಚುನಾವಣೆ ಮಾಡಿದೆ. ಎಲ್ಲಾ ಸಮುದಾಯಗಳು ನನಗೆ ಬೆಂಬಲ ನೀಡಿದೆ. ಭಾರತೀಯ ಜನತಾ ಪಾರ್ಟಿ ಶುದ್ಧೀಕರಣ ಮಾಡಲು ನನಗೆ ಮತಹಾಕಿದ್ದಾರೆ. ನನ್ನ ವಿಚಾರ ಈ ಚುನಾವಣೆಯಲ್ಲಿ ಯಶಸ್ವಿಯಾಗಿದೆ. ನಾನು ಈ ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನ್ನ ಚುನಾವಣೆಯ ಉದ್ದೇಶ ಯಶಸ್ವಿಯಾಗಿದೆ. ಜಿಲ್ಲೆಯ ಮತದಾರರಿಗೆ ಧನ್ಯವಾದ ತಿಳಿಸುತ್ತೇನೆ. ಬೇರೆ ಪಕ್ಷ ಕಟ್ಟಲು ನಾನು ಯಡಿಯೂರಪ್ಪ ಅಲ್ಲ. ಪಕ್ಷ ಶುದ್ದೀಕರಣದ ಸಿದ್ದಾಂತ ಮುಂದುವರಿಸುತ್ತೇನೆ. ಸಿದ್ಧಾಂತ, ಹಿಂದುತ್ವದ ಮುಂದೆ ಯಾರು ದೊಡ್ಡವರಲ್ಲ. ಸಿದ್ದಾಂತಕ್ಕೆ ಪೆಟ್ಟದಾಗ ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆ. ಸಿಟಿ ರವಿ, ಪ್ರತಾಪ್ ಸಿಂಹ, ಅನಂತ್ ಕುಮಾರ್ ಅವರ ಧ್ವನಿಯಾಗಿ ನಾನು ನಿಂತಿದ್ದೇನೆ. ಒಂದೇ ತಿಂಗಳಲ್ಲಿ ನಾನು ಸಾಕಷ್ಟು ಪರಿವರ್ತನೆ ತಂದಿದ್ದೇನೆ ಎಂದು ಈಶ್ವರಪ್ಪ ಹೇಳಿದರು.
ಪ್ರಜ್ವಲ್ ರೇವಣ್ಣ ಪ್ರಕರಣ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ನಾನು ಏನು ಮಾತನಾಡಲ್ಲ. ಈ ಪ್ರಕರಣವನ್ನು ಸಿಬಿಐಗೆ ನೀಡಲಿ. ದೇಶದ ಹೆಣ್ಣಿನ ಕುಲಕ್ಕೆ ಅಪಮಾನ ಆಗಿದೆ. ಕರ್ನಾಟಕ ರಾಜ್ಯದ ಮೂಲಕ ಅಪಮಾನ ಆಗಿದೆ. ಸಿಎಂ, ಗೃಹ ಸಚಿವರಿಗೆ ನಾನು ಒತ್ತಾಯ ಮಾಡುತ್ತೇನೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕುಮಾರಸ್ವಾಮಿ ಇದ್ದಾರೋ, ಡಿ.ಕೆ ಶಿವಕುಮಾರ್ ಇದ್ದಾರೋ ಗೊತ್ತಿಲ್ಲ. ಕೂಡಲೇ ಸಿಬಿಐಗೆ ಈ ಪ್ರಕರಣ ನೀಡಬೇಕು ಎಂದರು.
ಕರ್ನಾಟಕ ಗೂಂಡಾಗಳ ರಾಜ್ಯವಾಗಿದೆ. ರಾಜ್ಯದ ಮುಸ್ಲಿಂ ಗೂಂಡಾಗಳ ಸಂಖ್ಯೆ ಹೆಚ್ಚಾಗಿದೆ. ಮಹಿಳೆಯರ ದುರ್ಬಳಕೆ ಆಗಿರುವ ದುಷ್ಕೃತ್ಯ ಇದು. ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿದೆ ಎಂದು ಈಶ್ವರಪ್ಪ ಹೇಳಿದರು.