Advertisement

ಜಿಲ್ಲಾದ್ಯಂತ ಸರಳ ಬಸವ ಜಯಂತಿ

01:19 PM Apr 27, 2020 | Naveen |

ಶಿವಮೊಗ್ಗ: ಲಂಡನ್‌ನಿಂದ ಶಿವಮೊಗ್ಗಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಅನಾವರಣಗೊಳ್ಳದ ಬಸವೇಶ್ವರರ ಪ್ರತಿಮೆಗೆ ಮಹಾನಗರ ಪಾಲಿಕೆ ವತಿಯಿಂದ ಭಾನುವಾರ ಪುಷ್ಪನಮನ ಸಲ್ಲಿಸಿ ಗೌರವಿಸಲಾಯಿತು.

Advertisement

2018ರ ನ. 22ರಂದು ಲಂಡನ್‌ನಿಂದ ಶಿವಮೊಗ್ಗಕ್ಕೆ ತರಲಾದ ಪುತ್ಥಳಿಯನ್ನು ಅನಾವರಣಗೊಳಿಸುವಂತೆ 2018ರ ಮಾರ್ಚ್‌ನಲ್ಲಿ ಮಂಡನೆಯಾದ ಬಜೆಟ್‌ನಲ್ಲಿ 25 ಲಕ್ಷ ರೂ. ಮಂಜೂರು ಮಾಡಲಾಗಿತ್ತು. 2018ರಲ್ಲೇ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಪುತ್ಥಳಿ ಅನಾವರಣಕ್ಕೆ ಅವಕಾಶವಿಲ್ಲ ಎಂಬ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನ ಹಿನ್ನೆಲೆ ಪ್ರಸ್ತಾವನೆ ವಾಪಸ್‌ ಬಂದಿತ್ತು.

ಅದಾದ ಬಳಿಕವೂ ಸಾಕಷ್ಟು ಪ್ರಯತ್ನಗಳು ನಡೆಯುತ್ತಲೇ ಇವೆ. ಇತ್ತೀಚೆಗೆ ಮಹಾನಗರ ಪಾಲಿಕೆ ಸಭೆಯಲ್ಲಿ ಇದಕ್ಕಾಗಿ ದೊಡ್ಡ ಕೋಲಾಹಲವೇ ಸೃಷ್ಟಿಯಾಗಿತ್ತು. ಪಾಲಿಕೆಯ ಈಗಿನ ಪ್ರತಿಪಕ್ಷ ನಾಯಕ ಎಚ್‌.ಸಿ.ಯೋಗೀಶ್‌ ಅವರು ಬಸವೇಶ್ವರರ ಪೋಷಾಕಿನಲ್ಲಿ ಸಭೆಯಲ್ಲೇ ಪುತ್ಥಳಿಗೆ ಕಾಯಕಲ್ಪ ನೀಡುವಂತೆ ಆಗ್ರಹಿಸಿದ್ದರು. ಆಗಿನ ಮೇಯರ್‌ ಲತಾ ಗಣೇಶ್‌ ಅವರು ಒಂದು ತಿಂಗಳಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರಿನ್ನೂ ಪುತ್ಥಳಿ ಅನಾವರಣ ಆಗಿಲ್ಲ. 2020ರಲ್ಲಿ ನಡೆದ ಪಾಲಿಕೆ ಸಭೆಯಲ್ಲಿ ಬಸವ ಜಯಂತಿ
ಮುನ್ನವೇ ಅನಾವರಣಗೊಳಿಸುವುದಾಗಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಈ ಬಗ್ಗೆ ಯಾವುದೇ ಪ್ರಗತಿ ಕಾರ್ಯಗಳು ನಡೆದಿಲ್ಲ. ಸರಕಾರಕ್ಕೆ ಮತ್ತೂಮ್ಮೆ ಪ್ರಸ್ತಾವನೆ ಕಳುಹಿಸಬೇಕಾಗಿದ್ದು, ಇದುವರೆಗೆ ಕಳುಹಿಸಿಲ್ಲ.

ನಗರದ ಗಾಂಧಿ ಪಾರ್ಕ್‌ ಮುಂಭಾಗದ ಟಿಕೆಟ್‌ ಕೌಂಟರ್‌ ಇರುವ ಜಾಗ ತೆರವುಗೊಳಿಸಿ ಆ ಜಾಗದಲ್ಲಿ ಪ್ರತಿಷ್ಠಾಪಿಸುವ ಬಗ್ಗೆ ನಿರ್ಧಾರ ಮಾಡಲಾಗಿದೆ. ಜತೆಗೆ, ಹೊಸದಾಗಿ ಕಳುಹಿಸಲು ಉದ್ದೇಶಿಸಿರುವ ಪ್ರಸ್ತಾವನೆಯಲ್ಲಿ ಇದರಿಂದ ಸಾರ್ವಜನಿಕರಿಗೆ ಹಾಗೂ ಕಾನೂನು ಸುವ್ಯವಸ್ಥೆಗೆ ತೊಂದರೆ ಆಗುವುದಿಲ್ಲ ಎಂಬ ವಿಚಾರಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಅಖೀಲ ಭಾರತ ವೀರಶೈವ ಮಹಾಸಭಾದಿಂದಲೂ ಪಾಲಿಕೆಗೆ ಮನವಿ ಮಾಡಲಾಗಿದ್ದು, ಆದಷ್ಟು ಬೇಗ ಪುತ್ಥಳಿಗೆ ಕಾಯಕಲ್ಪ ಒದಗಿಸುವಂತೆ ಕೋರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next