Advertisement
ಕ್ಷೇತ್ರ ದರ್ಶನಶಿವಮೊಗ್ಗ: ಈ ಜಿಲ್ಲೆ ರಾಜ್ಯ ರಾಜಕಾರಣದ ಶಕ್ತಿ ಕೇಂದ್ರ. ಈವರೆಗೆ ನಾಲ್ವರು ಮುಖ್ಯಮಂತ್ರಿಗಳನ್ನು ಕೊಟ್ಟ ಜಿಲ್ಲೆ. ಒಂದು ಕಾಲದಲ್ಲಿ ಸಮಾಜವಾದಿ ರಾಜಕಾರಣಕ್ಕೆ ಹೆಸರುವಾಸಿಯಾಗಿದ್ದ ಜಿಲ್ಲೆ ಈಗ ಬಿಜೆಪಿ ಭದ್ರಕೋಟೆ. ಕಾಂಗ್ರೆಸ್, ಬಿಜೆಪಿ ನಡುವೆ ನೇರಾನೇರ ಹಣಾಹಣಿ ಇದ್ದರೂ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಾಬಲ್ಯ ಇದೆ. ಒಟ್ಟು ಏಳು ತಾಲೂಕುಗಳಿದ್ದು ಒಂದು ಮೀಸಲು ಕ್ಷೇತ್ರವಾಗಿದೆ. ಶಿವಮೊಗ್ಗ, ಭದ್ರಾವತಿ, ಸಾಗರ, ಸೊರಬ, ಶಿಕಾರಿಪುರ, ತೀರ್ಥಹಳ್ಳಿ ಸಾಮಾನ್ಯ ಕ್ಷೇತ್ರಗಳಾಗಿದ್ದು, ಶಿವಮೊಗ್ಗ ಗ್ರಾಮಾಂತರ ಎಸ್‌ಸಿ ಮೀಸಲು ಕ್ಷೇತ್ರವಾಗಿದೆ.
Related Articles
Advertisement
ಶಿವಮೊಗ್ಗಶಿವಮೊಗ್ಗ ವಿಧಾನಸಭಾ ಕ್ಷೇತ್ರ ಈಚೆಗೆ ಕೋಮು ಸಂಘರ್ಷಗಳಿಂದ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈವರೆಗೆ ನಡೆದಿರುವ 15 ಚುನಾವಣೆಯಲ್ಲಿ ಕಾಂಗ್ರೆಸ್ 9 ಬಾರಿ, ಬಿಜೆಪಿ 5 ಬಾರಿ ಅಧಿಕಾರ ಹಿಡಿದಿದೆ. 1978ರವರೆಗೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರ ಅನಂತರ ಬಿಜೆಪಿಗೆ ಒಲಿಯಿತು. 1983ರಲ್ಲಿ ಆನಂದರಾವ್ ಬಿಜೆಪಿಯ ಗೆಲುವಿನ ಖಾತೆ ತೆರೆದರು. ಜೆಡಿಎಸ್‌ಗೆ ಈ ಕ್ಷೇತ್ರ ಒಮ್ಮೆಯೂ ಒಲಿದಿಲ್ಲ. 1989ರಿಂದ ಇಲ್ಲಿಯವರೆಗೆ ಕೆ.ಎಸ್.ಈಶ್ವರಪ್ಪ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಐದು ಬಾರಿ ಗೆಲುವು ಸಾಧಿಸಿರುವ ಅವರು ಎರಡು ಬಾರಿ ಮಾತ್ರ ಸೋತಿದ್ದಾರೆ. ಕೋಮು ಸಂಘರ್ಷಗಳ ಅನಂತರ ಬಿಜೆಪಿಗೆ ಇದು ಭದ್ರಕೋಟೆಯಾಗಿದೆ. ಹಿಂದುತ್ವದ ಮತಗಳ ಕ್ರೋಡೀಕರಣದಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಶಿವಮೊಗ್ಗ ಗ್ರಾಮಾಂತರ
ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರ ಹೊಳೆಹೊನ್ನೂರು. ಪ್ರಸ್ತುತ ಇದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವಾಗಿ ಮಾರ್ಪಟ್ಟಿದೆ. 1978ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕ್ಷೇತ್ರವನ್ನು ಮಾಜಿ ಸಚಿವ ದಿ|ಜಿ.ಬಸವಣ್ಣೆಪ್ಪ 5 ಬಾರಿ ಆಳಿದ್ದರು. ಶಿಕಾರಿಪುರ ಮೀಸಲು ಕ್ಷೇತ್ರವಾಗಿದ್ದಾಗ ಅಲ್ಲಿಯೂ ವಿಜಯ ಪಾತಕೆ ಹಾರಿಸಿದ್ದರು. 1989, 1999ರಲ್ಲಿ ಕಾಂಗ್ರೆಸ್‌ನ ಕರಿಯಣ್ಣ ಜಯ ಸಾಧಿಸಿದ್ದರು. 2004ರಲ್ಲಿ ಬಸವಣ್ಣೆಪ್ಪ ಬಿಜೆಪಿಯಿಂದ ಗೆಲ್ಲುವ ಮೂಲಕ ಬಿಜೆಪಿಗೆ ಕ್ಷೇತ್ರದಲ್ಲಿ ಅಸ್ತಿತ್ವ ತಂದುಕೊಟ್ಟರು 2013 ಹೊರತುಪಡಿಸಿದರೆ ಬಿಜೆಪಿ ನಿರಂತರವಾಗಿ ಗೆಲುವು ಸಾಧಿಸುತ್ತಿದೆ. ಶಿವಮೊಗ್ಗ ನಗರಕ್ಕೆ ಹೊಂದಿಕೊಂಡಂತಿರುವ ಈ ಕ್ಷೇತ್ರವು ಮೂರು ಪಕ್ಷಗಳಿಗೂ ಪ್ರತಿಷ್ಠಿತ ಕ್ಷೇತ್ರ. ಶಿಕಾರಿಪುರ
ನಾಲ್ಕು ಬಾರಿ ಸಿಎಂ ಆದ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಹಗಲಿರುಳು ಶ್ರಮಿಸಿದ ಬಿ.ಎಸ್. ಯಡಿಯೂರಪ್ಪ ಇದೇ ಶಿಕಾರಿಪುರ ಕ್ಷೇತ್ರದಿಂದ 8 ಬಾರಿ ಗೆಲುವು ಸಾಧಿಸಿದ್ದಾರೆ. 1952ರಲ್ಲಿ ಸೊರಬ-ಶಿಕಾರಿಪುರ ಸೇರಿ ಒಂದು ವಿಧಾನಸಭಾ ಕ್ಷೇತ್ರ ಮಾಡಲಾಗಿತ್ತು. 1962, 1967, 1972ರಲ್ಲಿ ಇದು ಎಸ್‌ಸಿ ಮೀಸಲು ಕ್ಷೇತ್ರವಾಗಿತ್ತು. 1983ರಿಂದ ಇಲ್ಲಿ ಬಿಎಸ್‌ವೈ ಗೆಲುವು ಸಾಧಿಸಿದ್ದು, ಒಮ್ಮೆ ಮಾತ್ರ ಸೋತಿದ್ದರು. ಬಂಗಾರಪ್ಪನವರಿಗೂ ಸೋಲಿನ ರುಚಿ ತೋರಿಸಿದ ಕೀರ್ತಿ ಈ ಕ್ಷೇತ್ರಕ್ಕೆ ಇದೆ. 2014ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ರಾಜೀನಾಮೆ ನೀಡಿದ್ದರು. ನಂತರ ನಡೆದ ಉಪಚುನಾವಣೆಯಲ್ಲಿ ಪುತ್ರ ಬಿ.ವೈ.ರಾಘವೇಂದ್ರ ಗೆಲುವು ಸಾಧಿಸಿದ್ದರು. ಈವರೆಗೆ ಬಿಎಸ್‌ವೈ ಕುಟುಂಬವನ್ನು ಕ್ಷೇತ್ರದ ಜನ ಕೈಬಿಟ್ಟಿಲ್ಲ. ಭದ್ರಾವತಿ
ಇಡೀ ಜಿಲ್ಲೆಯಲ್ಲಿ ವಿಶಿಷ್ಟ ರಾಜಕಾರಣ ಇರುವ ಕ್ಷೇತ್ರ ಭದ್ರಾವತಿ. ಇಲ್ಲಿ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ. ಒಮ್ಮೆಯೂ ಬಿಜೆಪಿಗೆ ಈ ಕ್ಷೇತ್ರ ಗೆಲ್ಲಲು ಸಾಧ್ಯವಾಗದಿರುವುದು ಈ ಕ್ಷೇತ್ರದ ವಿಶೇಷತೆ. ವಿಐಎಸ್‌ಎಲ್, ಎಂಪಿಎಂ ಕಾರ್ಖಾನೆ ಕೆಲಸಕ್ಕೆ ಬಂದ ಸಾವಿರಾರು ಕುಟುಂಬಗಳು ಇಲ್ಲಿಯೇ ನೆಲೆ ನಿಂತಿವೆ. ನಾಲ್ಕು ಬಾರಿ ಇಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆದ್ದಿರುವುದು ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎಂದು ತೋರಿಸಿದೆ. 1994ರಿಂದ ಇಲ್ಲಿವರೆಗೆ ಮಾಜಿ ಶಾಸಕ ದಿ|ಎಂ.ಜೆ.ಅಪ್ಪಾಜಿ ಹಾಗೂ ಹಾಲಿ ಶಾಸಕ ಬಿ.ಕೆ.ಸಂಗಮೇಶ ವಿರುದ್ಧ ನೇರ ಹಣಾಹಣಿ ನಡೆಯುತ್ತಿದ್ದು ಬೇರೆ ಅಭ್ಯರ್ಥಿಗಳು ಕಡೆಗಣಿಸಲ್ಪಟ್ಟಿದ್ದರು. ಇಬ್ಬರೂ ತಲಾ ಮೂರು ಬಾರಿ ಜಯ ಸಾಧಿಸಿದ್ದಾರೆ. ಸದ್ಯ ಬಿ.ಕೆ. ಸಂಗಮೇಶ ಹಾಲಿ ಶಾಸಕರಾಗಿದ್ದಾರೆ. ಸಾಗರ
ಪಕ್ಕಾ ಮಲೆನಾಡು ವಾತಾವರಣದ ಸಾಗರ ತಾಲೂಕು ಕಾಗೋಡು ಚಳವಳಿಯಿಂದ ದೇಶದಲ್ಲಿ ಹೆಸರು ಮಾಡಿತ್ತು. ಇದರ ಪರಿಣಾಮವಾಗಿ 1952ರಲ್ಲಿ ನಡೆದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಸ್ಪಧಿìಸಿ ಶಾಂತವೇರಿ ಗೋಪಾಲಗೌಡರು ಇಲ್ಲಿ ಗೆಲುವು ಸಾಧಿಸಿದರು. ಗೇಣಿ ಹೋರಾಟದಲ್ಲಿ ಭಾಗವಹಿಸಿದ್ದ ಡಿ.ಮೂಕಪ್ಪನವರು 1957ರಲ್ಲಿ ಕಾಂಗ್ರೆಸ್‌ನಿಂದ ಜಯ ಗಳಿಸಿದರು. 1972 ರಲ್ಲಿ ಕಾಗೋಡು ತಿಮ್ಮಪ್ಪ ಸಂಯುಕ್ತ ಸಮಾಜವಾದಿ ಪಕ್ಷದಿಂದ ಗೆಲುವು ಸಾಧಿಸಿದರು.1989, 1994, 1999ರ ಮೂರು ಅವಧಿಗೆ ಕಾಗೋಡು ತಿಮ್ಮಪ್ಪ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದರು. 2004, 2008ರಲ್ಲಿ ಬೇಳೂರು ಗೋಪಾಲಕೃಷ್ಣ ಬಿಜೆಪಿಯಿಂದ ಗೆಲುವು ಸಾಧಿಸುವ ಮೂಲಕ ಹೊಸ ಶಕೆ ಆರಂಭಿಸಿದರು. 2013ರಲ್ಲಿ ಕಾಗೋಡು ತಿಮ್ಮಪ್ಪ ಗೆಲುವು ಸಾಧಿಸಿದ್ದರಲ್ಲದೇ, 2018ರಲ್ಲಿ ಸೊರಬ ಕ್ಷೇತ್ರದಿಂದ ಬಂದ ಹರತಾಳು ಹಾಲಪ್ಪ ಇಲ್ಲಿ ಗೆಲುವು ಸಾಧಿಸಿದ್ದು ವಿಶೇಷ. ತೀರ್ಥಹಳ್ಳಿ
ಮಲೆನಾಡು ಸೀಮೆಯ ತೀರ್ಥಹಳ್ಳಿ ತಾಲೂಕು ಮೌಲ್ಯಯುತ ರಾಜಕಾರಣಕ್ಕೆ ಹೆಸರುವಾಸಿ. ಶಾಂತವೇರಿ ಗೋಪಾಲಗೌಡ, ಕಡಿದಾಳ್ ಮಂಜಪ್ಪನವರು ಇಲ್ಲಿಯವರೆ. ಗೇಣಿ ಹೋರಾಟದ ಮೂಲಕ ಇಲ್ಲಿನ ರಾಜಕೀಯ ಪ್ರಜ್ಞೆ ಜಾಗೃತವಾಯಿತು. ಸಂಯುಕ್ತ ಸಮಾಜವಾದಿ ಪಕ್ಷ, ಸಮಾಜವಾದಿ ಪಕ್ಷ, ಸಂಗತ ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಇಲ್ಲಿ ಗೆದ್ದಿರುವುದು ವಿಶೇಷ. 1989ರವರೆಗೂ ಇಲ್ಲಿ ಸಮಾಜವಾದಿ ಹೋರಾಟದ ಪ್ರಭಾವ ಇತ್ತು. 1989ರಲ್ಲಿ ಡಿ.ಬಿ.ಚಂದ್ರೇಗೌಡರು ಜನತಾ ದಳದಿಂದ ಗೆದಿದ್ದು ಬಿಟ್ಟರೆ ಜೆಡಿಎಸ್ ಒಮ್ಮೆಯೂ ಗೆದ್ದಿಲ್ಲ. 1994, 1999, 2004ರಲ್ಲಿ ಬಿಜೆಪಿ ಮೂಲಕ ಆರಗ ಜ್ಞಾನೇಂದ್ರ ಗೆಲುವಿನ ಖಾತೆ ತೆರೆದರು. ಅನಂತರ ಕಿಮ್ಮನೆ ರತ್ನಾಕರ್ ಎರಡು ಬಾರಿ ಗೆಲುವು ಸಾಧಿಸಿದ್ದಾರೆ. ತೀರ್ಥಹಳ್ಳಿಯ ಹೋರಾಟದ ರಾಜಕಾರಣ ಯಾವಾಗಲೂ ಗಮನ ಸೆಳೆಯುತ್ತದೆ. ಸೊರಬ
ಸೊರಬ ಕ್ಷೇತ್ರದ ರಾಜಕಾರಣದಲ್ಲಿ 1967ರಿಂದ 2018ರವರೆಗೂ ಬಂಗಾರಪ್ಪನವರೇ ಆವರಿಸಿದ್ದಾರೆ. ಬಂಗಾರಪ್ಪನವರಿಗೆ ಸೋಲಿಲ್ಲದ ಸರದಾರ ಎಂಬ ಹೆಸರು ತಂದುಕೊಟ್ಟಿದ್ದೇ ಈ ಕ್ಷೇತ್ರ. ಸಂಗತ ಸಮಾಜವಾದಿ ಪಕ್ಷ, ಸಂಯುಕ್ತ ಸಮಾಜವಾದಿ ಪಕ್ಷ, ಜನತಾ ಪಕ್ಷ, ಕರ್ನಾಟಕ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದರೂ ಗೆಲುವು ಸಾಧಿಸಿರುವುದು ಅವರ ವಿಶೇಷ. 1967ರಿಂದ 1989ರವರೆಗೂ ನಿರಂತರವಾಗಿ ಬಂಗಾರಪ್ಪನವರೇ ಗೆಲುವು ಸಾಧಿಸಿದರು. ಅನಂತರ ಪುತ್ರ ಕುಮಾರ್ ಬಂಗಾರಪ್ಪ ಎರಡು ಬಾರಿ, ಇನ್ನೊಬ್ಬ ಪುತ್ರ ಮಧು ಬಂಗಾರಪ್ಪ ಒಂದು ಬಾರಿ ಗೆದ್ದಿದ್ದಾರೆ. ಬಂಗಾರಪ್ಪ ಕುಟುಂಬ ಹೊರತಾಗಿ ಗೆಲುವು ಸಾಧಿಸಿದ್ದು ಎಚ್.ಹಾಲಪ್ಪ ಮಾತ್ರ. ಜೆಡಿಎಸ್‌ನಲ್ಲಿದ್ದ ಮಧು ಬಂಗಾರಪ್ಪ ಈಗ ಕಾಂಗ್ರೆಸ್‌ನಲ್ಲಿದ್ದಾರೆ. ಕಾಂಗ್ರೆಸ್‌ನಲ್ಲಿದ್ದ ಕುಮಾರ್ ಬಂಗಾರಪ್ಪ ಈಗ ಬಿಜೆಪಿಯಿಂದ ಶಾಸಕರಾಗಿದ್ದಾರೆ. -ಶರತ್ ಭದ್ರಾವತಿ