ಬೆಂಗಳೂರು: ಈ ವರ್ಷದಿಂದದಲೇ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಶಿಕ್ಷಕರ ಮಿತ್ರ ಆ್ಯಪ್ ಮೂಲಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಶಿಕ್ಷಕ ಮಿತ್ರ ಆ್ಯಪ್ ಬಿಡುಗಡೆ ಮಾಡಿ ಮಾತನಾಡಿದ ಅವರು, ವರ್ಗಾವಣೆ ಅರ್ಜಿ ಆಪ್ ಮೂಲಕವೇ ಪಡೆಯಲಾಗುವುದು ಎಂದು ತಿಳಿಸಿದರು. ಶಿಕ್ಷಕರ ವಿಚಾರದಲ್ಲಿ ಸರ್ಕಾರ ಸದಾ ಸ್ಪಂದನಾ ಮನೋಭಾವ ಹೊಂದಿದ್ದು, ಶಿಕ್ಷಕರ ಎಲ್ಲ ಬೇಡಿಕೆ ಗಳಿಗೆ ಸ್ಪಂದಿಸಿದೆ ಎಂದು ಹೇಳಿದರು.
ಶಿಕ್ಷಕರು ತಮ್ಮ ಕೆಲಸಗಳಿಗಾಗಿ ಶಾಲೆಗಳಿಗೆ ರಜೆ ಹಾಕಿ ಇಲಾಖೆಯ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಶಿಕ್ಷಕರುಗಳಿಗೆ ಅನುಕೂಲವಾಗುವಂತೆ ಬಜೆಟ್ ನಲ್ಲಿ ಘೋಷಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ತಂತ್ರಜ್ಞಾನಾಧಾರಿತ ಶಿಕ್ಷಕ ಮಿತ್ರ- ಆ್ಯಪ್ ತಯಾರಿಸಿದೆ.
ಶಿಕ್ಷಕರು ಮೊಬೈಲ್‍ನಲ್ಲಿ ಈ ಆಪ್‍ನ್ನು ಡೌನ್‍ಲೋಡ್ ಮಾಡಿಕೊಂಡು ತಾವು ಕುಳಿತಲ್ಲೇ ತಮ್ಮ ಸೇವಾ ವಿಷಯಗಳನ್ನು, ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಇನ್ಮುಂದೆ ಶಿಕ್ಷಕರ ಅಲೆದಾಟಕ್ಕೆ ಆ್ಯಪ್ ಸೇವೆಯ ಮೂಲಕ ತೆರೆ ಬೀಳಲಿದೆ ಎಂದರು.
ಸಚಿವ ಸುರೇಶ್ ಕುಮಾರ್ ಅವರ ಕುರಿತು ನಾಡಿನ ಹಲವಾರು ಲೇಖಕರು ಬರೆದಿರುವ ವಿಮರ್ಶಾ ಕೃತಿ ‘ವಿದ್ಯಾವಿನೀತ’ ಪುಸ್ತಕದ ಹೆಸರು ಅವರ ವ್ಯಕ್ತಿತ್ವ, ಸ್ವಭಾವಕ್ಕೆ ಕನ್ನಡಿ ಹಿಡಿದಂತಿದೆ. ಇದು ಅವರ ಗುಣಸ್ವಭಾವಕ್ಕೆ ಅನ್ವರ್ಥವಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.
ಸುರೇಶ್ ಕುಮಾರ್ ಅವರು ಶಿಕ್ಷಕರ ವರ್ಗಾವಣೆ ನೀತಿಯನ್ನು ಸರಳೀಕರಣಗೊಳಿಸಿ ಶಿಕ್ಷಕರಿಗೆ ನೆಮ್ಮದಿ ತಂದಿದ್ದಾರೆ ಎಂದು ಶ್ಲಾಘಿಸಿದರು.