Advertisement

ಧವನ್‌ ಪತ್ನಿಯ ಹೊರದಬ್ಬಿದ ಎಮಿರೇಟ್ಸ್‌ ವಿಮಾನ

06:15 AM Dec 30, 2017 | |

ಮುಂಬೈ: ಇತ್ತೀಚೆಗೆ ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು ತಮ್ಮ ಜತೆಗೆ ಅನುಚಿತ ವರ್ತನೆ ತೋರಿದ ಏರ್‌ ಇಂಡಿಗೊ ಸಂಸ್ಥೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

Advertisement

ಕಿಟ್‌ಬ್ಯಾಗ್‌ ವಿವಾದಕ್ಕೆ ಒಳಗಾಗಿದ್ದ ಈ ಘಟನೆ ಇನ್ನೂ ಮಾಸಿಲ್ಲ. ಇದೀಗ ಅಂತಹುದೇ ಒಂದು ಅವಮಾನಕ್ಕೆ ಭಾರತ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಹಾಗೂ ಕುಟುಂಬ ಒಳಗಾಗಿದೆ. ದುಬೈನಲ್ಲಿ ಅರಬ್‌ ಎಮಿರೇಟ್ಸ್‌ ವಿಮಾನ ಏರುವ ಮೊದಲು ಘಟನೆ ನಡೆದಿದ್ದು ಆಂಗ್ಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಅಷ್ಟೇ ಅಲ್ಲ ಸ್ವತಃ ಶಿಖರ್‌ ಧವನ್‌ ಟ್ವೀಟರ್‌ನಲ್ಲಿ ಘಟನೆಗೆ ಕಾರಣವಾದ ಅರಬ್‌ ಎಮಿರೇಟ್ಸ್‌ ವಿಮಾನಯಾನ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಧವನ್‌ ಅವರ ಕುಟುಂಬ ಸದಸ್ಯರ (ಹೆಂಡತಿ ಆಯೀಷಾ, ಇಬ್ಬರು ಮಕ್ಕಳು) ಜನ್ಮ ದಿನಾಂಕ ದಾಖಲಾತಿ ಇಲ್ಲ ಎನ್ನುವ ಕಾರಣಕ್ಕೆ ಧವನ್‌ ಪತ್ನಿ ಆಯೀಷಾ ಹಾಗೂ ಇಬ್ಬರು ಪುಟ್ಟ ಮಕ್ಕಳಿಗೆ ಸಂಸ್ಥೆ ಸಿಬ್ಬಂದಿಗಳು ವಿಮಾನವೇರಲು ಅವಕಾಶ ನೀಡಿರಲಿಲ್ಲ. ಇದು ವಿವಾದಕ್ಕೆ ಕಾರಣವಾಗಿದೆ.

ಏನಿದು ಘಟನೆ?: ಭಾರತ ತಂಡ ಸುದೀರ್ಘ‌ ಸರಣಿಗಾಗಿ ಮುಂಬೈನಿಂದ ಬುಧವಾರ ದುಬೈ ಮೂಲಕ ದಕ್ಷಿಣ ಆಫ್ರಿಕಾಕ್ಕೆ ತೆರಳಬೇಕಿತ್ತು. ಬಹುತೇಕ ಆಟಗಾರರು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಪ್ರಯಾಣ ನಡೆಸಿದ್ದರು. ಭಾರತದಿಂದ ದುಬೈ ಮೂಲಕ ಆಫ್ರಿಕಾಕ್ಕೆ ತೆರಳಬೇಕಿತು. ಆದರೆ ದುಬೈನಲ್ಲಿ ಭಾರತ ಆಟಗಾರ ಧವನ್‌ ದಂಪತಿಗೆ ಸಂಕಟ ಎದುರಾಯಿತು. ಅರಬ್‌ ಎಮಿರೇಟ್ಸ್‌ ವಿಮಾನದಲ್ಲಿ ಬೋರ್ಡಿಂಗ್‌ ಆಗುತ್ತಿದ್ದ ವೇಳೆ ಧವನ್‌ ಪತ್ನಿ ಆಯೀಷಾ ಹಾಗೂ ಇಬ್ಬರು ಮಕ್ಕಳ ಜನ್ಮ ದಿನಾಂಕ ದಾಖಲಾತಿ ತೋರಿಸುವಂತೆ ಸಿಬ್ಬಂದಿಗಳು ತಿಳಿಸಿದ್ದಾರೆ.ಆದರೆ ತಕ್ಷಣಕ್ಕೆ ಅವರ ಬಳಿ ದಾಖಲಾತಿ ಇರಲಿಲ್ಲ.

ಈ ವೇಳೆ ಧವನ್‌ ಅಧಿಕಾರಿಗಳಿಗೆ ಪರಿಸ್ಥಿತಿಯನ್ನು ವಿವರಿಸಲು ಯತ್ನಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಅಧಿಕಾರಿಯೊಬ್ಬ ಧವನ್‌ ಜತೆ ಅನುಚಿತ ವರ್ತನೆ ತೋರಿದ್ದಾನೆ ಎಂದು ಧವನ್‌ ಟ್ವೀಟರ್‌ನಲ್ಲಿ ದೂರಿದ್ದಾರೆ. ಬಳಿಕ ಸಮಸ್ಯೆ ಬಗೆಹರಿಯದಿದ್ದಾಗ ಧವನ್‌ ಅವರ ಪತ್ನಿ ಆಯೀಷಾ ಮತ್ತು ಇಬ್ಬರು ಮಕ್ಕಳು ದುಬೈನಲ್ಲಿ ಉಳಿಯಬೇಕಾಯಿತು. ಭಾರತ ತಂಡದ ಉಳಿದ ಸದಸ್ಯರು ಪ್ರಯಾಣ ಮುಂದುವರಿಸಿದರು.

Advertisement

ಈ ಬಗ್ಗೆ ಧವನ್‌ ಟ್ವೀಟರ್‌ನಲ್ಲಿ ಅಸಮಾಧಾನ ಹೊರಹಾಕಿದ್ದು ಹೀಗೆ…” ಮುಂಬೈನಲ್ಲಿ ವಿಮಾನ ಹತ್ತುವ ಮೊದಲೇ ಅರಬ್‌ ಎಮಿರೇಟ್ಸ್‌ನವರು ನಮಗೆ ಮಾಹಿತಿ ನೀಡಬೇಕಿತ್ತು. ಅದನ್ನು ಬಿಟ್ಟು ಅರ್ಧದಾರಿಯಲ್ಲಿ ಕುಟುಂಬ ಸದಸ್ಯರನ್ನು ವಿಮಾನದಿಂದ ಹೊರಹಾಕಿರುವುದು ಎಷ್ಟು ಸರಿ. ಅಷ್ಟೇ ಅಲ್ಲ ಓರ್ವ ಸಿಬ್ಬಂದಿ ನಮ್ಮೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ್ದಾನೆ. ಸದ್ಯ ನನ್ನ ಕುಟುಂಬ ದುಬೈನಲ್ಲಿ ಇದೆ. ದಾಖಲಾತಿ ಪತ್ರಗಳು ಅವರ ಕೈಗೆ ತಲುಪಿದ ಬಳಿಕವಷ್ಟೇ ಅವರಿಗೆ ಆಫ್ರಿಕಾಕ್ಕೆ ಬರಲು ಸಾಧ್ಯವಾಗಲಿದೆ. ಒಟ್ಟಾರೆ ಘಟನೆ ಬಹಳ ಬೇಸರ ತಂದಿದೆ ಎಂದು ಧವನ್‌ ತಿಳಿಸಿದ್ದಾರೆ.

ಮೊದಲ ಟೆಸ್ಟ್‌ಗೆ ಧವನ್‌ ಅನುಮಾನ
ಶಿಖರ್‌ ಧವನ್‌ ಎಡಗಾಲಿನ ಪಾದದ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಇವರು ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಆಡುವ ಸಾಧ್ಯತೆ ಕಡಿಮೆ. ಆಫ್ರಿಕಾಕ್ಕೆ ಹೊರಡುವ ಮೊದಲೇ ಇವರು ಗಾಯಗೊಂಡಿದ್ದರು. ಸದ್ಯ ಫಿಸಿಯೋ ಪೆಟ್ರಿಕ್‌ ಫ‌ಹಾರ್ಟ್‌ ಇವರನ್ನು ಎಂಆರ್‌ಐ ಸ್ಕ್ಯಾನ್‌ಗೆ ಒಳಪಡಿಸಿದ್ದಾರೆ. ಇದರ ವರದಿ ಇನ್ನಷ್ಟೇ ರಾಷ್ಟ್ರೀಯ ಆಯ್ಕೆ ಸಮಿತಿ ಕೈ ಸೇರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next