ಶಿಕಾರಿಪುರ: ತಾಲೂಕಿನ ಗಾಮ ಗ್ರಾಮದ ವೀರಭದ್ರೇಶ್ವರ ಆಂಜನೇಯ ಜಾತ್ರೆ ಅಂಗವಾಗಿ ಮಂಗಳವಾರ ನಡೆದ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಹಿತ್ತಲ ಗ್ರಾಮದ ಆನಂದ ಜಮಖಂಡಿಯ ಅರುಣ್ ವಿರುದ್ಧ ಸೆಣಸಿ ಬೆಳ್ಳಿಗದೆ, ಐದು ಸಾವಿರ ನಗರ ಬಹುಮಾನ ತಮ್ಮದಾಗಿಸಿಕೊಂಡರು. ಶಿಕಾರಿಪುರದ ಪ್ರವೀಣ ಗುಡ್ಡಳ್ಳಿ, ಲಿಂಗರಾಜ್ ಬೊಮ್ನಳ್ಳಿ ವಿರುದ್ಧ ಹೋರಾಡಿ 11ಸಾವಿರ ನಗದು, ಟ್ರೋಫಿ ತಮ್ಮದಾಗಿಸಿಕೊಂಡರು. ಮೊದಲ ಸ್ಥಾನಕ್ಕಾಗಿ ಮೀಸಲಿಟ್ಟ ದೊಡ್ಡ ಬೆಳ್ಳಿ ಗದೆ, 5 ಸಾವಿರ ರೂ. ನಗದು ಸ್ಪರ್ಧೆಗೆ ಶಿವಮೊಗ್ಗದ ಕಿರಣ್ ವಿರುದ್ಧ ಯಾರೂ ಸೆಣಸಲು ಬಾರದಕ್ಕೆ ಪಂದ್ಯ ನಡೆಯಲಿಲ್ಲ.
ಬೆಳಗ್ಗೆಯಿಂದ ಸಂಜೆವರೆಗೂ ನಡೆದ ಕುಸ್ತಿಯಲ್ಲಿ 10,000ರೂ. ಬಹುಮಾನದ 1 ಕುಸ್ತಿ, 8000 ರೂ. ನಗದು ಬಹುಮಾನದ 3 ಕುಸ್ತಿ, 5000 ರೂ. ನಗದು ಬಹುಮಾನದ 4 ಕುಸ್ತಿ, 3000 ರೂ. ನಗದು ಬಹುಮಾನದ 12 ಕುಸ್ತಿ ಸೇರಿದಂತೆ ಇನ್ನೂ ಹಲವು ಸಣ್ಣ ಮೊತ್ತದ ಬಹುಮಾನಕ್ಕಾಗಿ ನೂರಾರು ಕುಸ್ತಿ ಪಂದ್ಯಗಳು ನಡೆದವು.
ಸುತ್ತಮುತ್ತಲಿನ ಸಾವಿರಾರು ಜನರು ಕುಸ್ತಿ ವೀಕ್ಷಣೆಗೆ ಆಗಮಿಸಿದ್ದು ವಿಶೇಷವಾಗಿತ್ತು. ನೃತ್ಯಸ್ಪರ್ಧೆ: ಜಾತ್ರೆ ಅಂಗವಾಗಿ ಸ್ನೇಹಕೂಟ ಗಾಮ ಆಯೋಜಿಸಿದ್ದ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ನಾಟ್ಯಭೈರವ ನೃತ್ಯ ಕಲಾಕೇಂದ್ರ ಶಿರಾಳಕೊಪ್ಪ ತಂಡ 25 ಸಾವಿರ ನಗದು ಒಳಗೊಂಡ ಮೊದಲ ಬಹುಮಾನ ಪಡೆಯಿತು.
ಕುಂದಾಪುರ ಬೀಟ್ ಬೌನ್ಸರ್ ಡ್ಯಾನ್ಸ್‌ಗ್ರೂಪ್ 15 ಸಾವಿರ ರೂ.ದ್ವಿತೀಯ ಬಹುಮಾನ, ಚಂದನ್ ನವಚೇತನ ಕಲಾ
ಸಂಘ ಶಿಕಾರಿಪುರ 10ಸಾವಿರ ರೂ. ತೃತೀಯ ಬಹುಮಾನ ಪಡೆದವು. ನೃತ್ಯ ಕಾರ್ಯಕ್ರಮಕ್ಕೂ ಮುನ್ನ ನಡೆದ ಉದ್ಘಾಟನೆ ಕಾರ್ಯಕ್ರಮದಲ್ಲಿ ಕುವೆಂಪು ವಿವಿ ಕುಲಪತಿ ಬಿ.ಸಿ.ವೀರಭದ್ರಪ್ಪ ಅವರಿಗೆ ಉನ್ನತ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ, ನಾ.ಡಿಸೋಜ ಅವರಿಗೆ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ, ನೃತ್ಯ ಕ್ಷೇತ್ರದ ಸಾಧನೆಗಾಗಿ ಮಹಾಲಕ್ಷ್ಮಿ, ಉದ್ಯಮ ಕ್ಷೇತ್ರದ ಸಾಧನೆಗಾಗಿ ಎಂ.ಎನ್. ಸತೀಶ್ ಅವರಿಗೆ ಗಾಮ ಗ್ರಾಮೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಾತ್ರಾ ಸಮಿತಿ ಅಧ್ಯಕ್ಷ ಕೆ.ವೀರಪ್ಪ, ಉಪಾಧ್ಯಕ್ಷ ಸುಕುಮಾರ್, ಮುಖಂಡ ಆರಾಧ್ಯ, ಸ್ನೇಹಕೂಟ ಅಧ್ಯಕ್ಷ ಜಿ.ಎಸ್. ಚನ್ನಬಸವಯ್ಯ, ಸಂಚಾಲಕ ಸುನಿಲ್ ಅಂತರಾಳ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಗ್ರಾಮದ ಎಲ್ಲ ಮುಖಂಡರು, ಗ್ರಾಮಸ್ಥರು ಇದ್ದರು.