ಶಿಕಾರಿಪುರ: ಪಟ್ಟಣದಲ್ಲಿ ಅನೇಕ ವರ್ಷಗಳಿಂದ ಬೀದಿಬದಿಯಲ್ಲಿ ತರಕಾರಿ, ಹಣ್ಣು, ಫಾಸ್ಟ್ ಫುಡ್ ಸ್ಟಾಲ್‌ಗಳನ್ನು ಹಾಕಿಕೊಂಡು ಜೀವನ ನಡೆಸುತ್ತಿರುವ ಬೀದಿ ಬದಿ ವ್ಯಾಪಾರಿಗಳ ಮೇಲೆ ಅನಗತ್ಯ ಕಿರುಕುಳ ನೀಡಲಾಗುತ್ತಿದ್ದು ಇದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿ ಬೀದಿಬದಿ ವ್ಯಾಪಾರಿಗಳು ಗುರುವಾರ ಪುರಸಭೆ ಎದುರು ಪ್ರತಿಭಟನೆ ನಡೆಸಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್ ಮಾತನಾಡಿ, ಬೀದಿಬದಿಯ ವ್ಯಾಪಾರಿಗಳೆಲ್ಲ ಬಡವರು. ಕಡಿಮೆ ಲಾಭದಲ್ಲಿ ಬಡವರಿಗೆ ತಿಂಡಿ, ಊಟ ನೀಡುತ್ತಾರೆ. ಇವರು ಬೇರೆಡೆ ಸಾಲ ತಂದು ವ್ಯಾಪಾರ ಮಾಡಿ ಜೀವನ ನಡೆಸುತ್ತಾರೆ. ಇಂತಹ ಬೀದಿಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವುದು ಬೇಡ. ಅವರಿಗೆ ಪುರಸಭೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಪ್ರತೇಕ ವ್ಯವಸ್ಥೆ ಆಗುವವರೆಗೆ ಯಾವ ಕಾರಣಕ್ಕೂ ವ್ಯಾಪಾರಿಗಳ ಮೇಲೆ ದೌರ್ಜನ್ಯ ನಡೆಸಬಾರದು. ಸದ್ಯಕ್ಕೆ ಅವರಿಗೆ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕು. ಇದೇ ರೀತಿ ಘಟನೆಗಳು ಮುಂದುವರಿದರೆ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು. ಬೀದಿಬದಿ ವ್ಯಾಪಾರಿಗಳು ಅಂದಿನ ದುಡಿಮೆ ಮೇಲೆ ಬದುಕು ಸಾಗಿಸುವವರು. ಅವರ ಮೇಲೆ ಪೊಲೀಸರು ದೌರ್ಜನ್ಯ ಮಾಡುವುದು, ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು. ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ, ಪುರಸಭೆ ಸದಸ್ಯ ಹುಲ್ಮಾರ್ ಮಹೇಶ್ ಮಾತನಾಡಿ, ಪೊಲೀಸ್ ಇಲಾಖೆ ಬೀದಿಬದಿ ವ್ಯಾಪಾರಿಗಳಿಗೆ ಅನಗತ್ಯ ಕಿರುಕುಳ ನೀಡುತ್ತಿದೆ. ಒಬ್ಬ ಕೂಲಿ ಕಾರ್ಮಿಕನ ಹೊಟ್ಟೆ ಬೀದಿಬದಿ ವ್ಯಾಪಾರಿಗಳಿಂದ ತುಂಬುತ್ತದೆ. ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಬೇಡ. ನಿಮ್ಮ ಕಾನೂನಿನ ಬಗ್ಗೆ ಅವರಿಗೆ ಮಾಹಿತಿ ನೀಡಿ. ಇವರು ಯಾರೂ ಆರ್ಥಿಕವಾಗಿ ಸದೃಢರಲ್ಲ. ಅವರ ದಿನದ ಬದುಕಿಗೆ ಪಾನಿಪೂರಿ, ಎಗ್‌ರೈಸ್ ಹೊಟೇಲ್, ಹೂವಿನ ವ್ಯಾಪಾರವೇ ಆಧಾರ ಸ್ತಂಭ. ಅಂತಹವರ ಮೇಲೆ ದೌರ್ಜನ್ಯ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.
ಬೀದಿ ಬದಿ ವ್ಯಾಪಾರಿಗಳ ಅಭಿವೃದ್ಧಿಗೆ ರಾಜ್ಯ, ಕೇಂದ್ರ ಸರ್ಕಾರಗಳು ಮುಂದಾಗಿವೆ. ಅವರಿಗೆ ಗುರುತಿನ ಚೀಟಿಯಿದೆ. ಅವರಿಂದ ಸಂಚಾರ ವ್ಯವಸ್ಥೆಗೆ ತೊಂದರೆ ಆಗಿದ್ದರೆ ಅವರಿಗೆ ಬೇರೆ ಕಡೆ ವ್ಯವಸ್ಥೆ ಮಾಡಿ. ಅವರ ಬದುಕಿಗೆ ದಾರಿ ಮಾಡಿಕೊಡಿ. ಅಧಿ ಕಾರಿಗಳ ದೌರ್ಜನ್ಯ ಹೀಗೇ ಮುಂದುವರಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಜಿಪಂ ಸದಸ್ಯ ಸದಸ್ಯ ನರಸಿಂಗ ನಾಯ್ಕ, ಪುರಸಭೆ ಮಾಜಿ ಸದಸ್ಯರಾದ ನಾಗರಾಜ ಗೌಡ, ರೋಷನ್, ತಾಜ್‌ಪೀರ್, ಯೂಸೂಫ್, ಅಲಿಖಾನ್, ಕಾಸಿಂಸಾಬ್, ಶಿವು ಹುಲ್ಮಾರ್, ಸುರೇಶ್, ರಾಘವೇಂದ್ರ ನಾಯ್ಕ ಹಾಗೂ ಬೀದಿ ವ್ಯಾಪಾರಸ್ಥರು ಇದ್ದರು.