ಶಿಕಾರಿಪುರ: ಪೌರ ಕಾರ್ಮಿಕರ ಬೀದಿಯಲ್ಲಿಯೇ ಕಸಗಳ ರಾಶಿ.. ಊರು ಸ್ವತ್ಛಗೊಳ್ಳಿಸುವವರ ಮನೆಯ ಮುಂದೆ ರಾಶಿ ರಾಶಿ ಕಸ…! ಪಟ್ಟಣದ ಅನೇಕ ವಾರ್ಡ್‌ಗಳು ಸುಂದರವಾಗಿದ್ದು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಲ್ಲಿ ಸ್ಥಳೀಯ ನಿವಾಸಿಗಳು ಹಾಗೂ ಬಹು ಮುಖ್ಯವಾಗಿ ಪುರಸಭಾ ಪೌರ ಕಾರ್ಮಿಕ ಸಿಬ್ಬಂ ದಿಗಳು ಕಾರಣ.
ಅದರೆ ಇಲ್ಲೊಂದು ವಿಪರ್ಯಾಸ ಸಂಗತಿ ಎಂದರೆ ಪಟ್ಟಣದ ಪ್ರಗತಿನಗರ ಹಳೇ ಮಾರ್ಕೆಟ್ ರಸ್ತೆ ಅತೀ ಹೆಚ್ಚು ಪೌರ ಕಾರ್ಮಿಕರು ವಾಸವಿರುವ ಬೀದಿಯಾಗಿದ್ದು ಪ್ರತಿನಿತ್ಯ ಇಲ್ಲಿ ರಾಶಿ ರಾಶಿ ಕಸ ಬಂದು ಬಿಳುತ್ತದೆ.
ಇಡೀ ಪಟ್ಟಣವನ್ನು ಸ್ವತ್ಛಗೊಳಿಸುವ ಪೌರ ಕಾರ್ಮಿಕರು ವಾಸ ಇರುವ ಮನೆಗಳ ಮುಂದೆ ಕಸದ ರಾಶಿ ಬಂದು ಬೀಳುತ್ತದೆ. ಒಂದು ವಾರ ತಿಂಗಳುಗಳು ಕಳೆದರು ಈ ಕಸ ಹಾಗೆ ಇರುತ್ತದೆ. ಈ ಕಸದ ರಾಶಿಯನ್ನು ಸ್ವತ್ಛಗೊಳಿಸುವಂತೆ ಪುರಸಭಾ ಸದಸ್ಯರು ಸಾಕಷ್ಟು ಪ್ರಯತ್ನ ಪಟ್ಟರೂ ಜನರು ಮತ್ತೆ ಮತ್ತೆ ಕಾಸವನ್ನು ತಂದು ಸುರಿಯುತ್ತಾರೆ. ಅತೀ ಹೆಚ್ಚು ಬಟ್ಟೆ ಅಂಗಡಿಗಳು ಇರುವುದರಿಂದ ಸಂಜೆ ಖಾಲಿ ಆಗುವ ಪ್ಲಾಸ್ಟಿಕ್ , ಹೊಟೇಲ್ ತ್ಯಾಜ್ಯ, ರಟ್‌ಗಳು, ಗ್ಲಾಸ್‌ಗಳು ಇನ್ನೂ ಅನೇಕ ತ್ಯಾಜ್ಯಗಳು ವಿಲೇವಾರಿ ಆಗದೇ ತಿಂಗಳುಗಟ್ಟಲೇ ಕಸ ಬಿದ್ದಿರುತ್ತದೆ. ಈ ಬಗ್ಗೆ ಪುರಸಭೆಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ತಿಂಗಳುಗಟ್ಟಲೆ ಕಸ ಇರುವುದರಿಂದ ಹಂದಿ, ನಾಯಿಗಳು ಈ ಕಸವನ್ನು ಕೆದರಿಸಿ ರಸ್ತೆ ತುಂಬಾ ಹರಡುವಂತೆ ಮಾಡುತ್ತವೆ. ಮಹಿಳೆಯರು, ಮಕ್ಕಳು, ಸಾರ್ವಜನಿಕರು ಈ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೋಳಿ ಅಂಗಡಿಗಳಿಂದ ಹಾಗೂ ಈ ಕಸದ ರಾಶಿಯಿಂದ ಬರುವ ದುರ್ವಾಸನೆಯಿಂದ ಜನರು ಬೇಸತ್ತು ಹೋಗಿದ್ದಾರೆ.
ಇನ್ನು ಚರಂಡಿಗಳಲ್ಲಿ ಕಸಗಳು ಬಿದ್ದು ಚರಂಡಿಗಳು ಸಂಪೂರ್ಣ ಬಂದ್ ಆಗಿವೆ. ನೀರು ಹೋಗದೆ ಇರುವುದರಿಂದ ಸೊಳ್ಳೆಗಳ ಕಾಟವೂ ಹೆಚ್ಚಾಗಿದ್ದು ಮಹಿಳೆಯರು ಮಕ್ಕಳಿಗೆ ಸಾಕಷ್ಟು ಸಮಸ್ಯೆಯಾಗಿದ್ದು ಸಾಂಕ್ರಮಿಕ ರೋಗಕ್ಕೆ ಆಹ್ವಾನ ನೀಡುವಂತಾಗಿದೆ.