Advertisement
23 ಸದಸ್ಯ ಬಲದ ಪುರಸಭೆಗೆ ಬುಧವಾರ ನಡೆದ ಚುನಾವಣೆಯಲ್ಲಿ ಶೇ.67.26 ಮತ ಚಲಾವಣೆಯಾಗಿದೆ. ಹಲವೆಡೆ ಆಡಳಿತಾರೂಢ ಬಿಜೆಪಿಗೆ ಕಾಂಗ್ರೆಸ್ ಜತೆ ಪಕ್ಷೇತರರು ಪ್ರಬಲ ಪೈಪೋಟಿ ನೀಡಿರುವ ಸಾದ್ಯತೆ ದಟ್ಟವಾಗಿದೆ.
Related Articles
Advertisement
ಪಟ್ಟಣದ 14 ನೇ ವಾರ್ಡ್ ತಾಪಂ ವಿಕಾಸಸೌಧದಲ್ಲಿ ಸಂಸದ ರಾಘವೇಂದ್ರ, ಪತ್ನಿ ತೇಜಸ್ವಿನಿ, ಪುತ್ರ ಭಗತ್, ಸಹೋದರ- ರಾಜ್ಯ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಜತೆ ಮತ ಚಲಾಯಿಸಿ ರಾಜ್ಯಾದ್ಯಂತ ಅತಿ ಹೆಚ್ಚು ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಯ ಆಡಳಿತದ ಚುಕ್ಕಾಣಿಯನ್ನು ಬಿಜೆಪಿ ವಶಪಡಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.
ಮತದಾನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುಧವಾರ ನಡೆದ ರಾಜ್ಯದ 100 ಕ್ಕಿಂತ ಅಧಿಕ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶ ಸ್ಪಷ್ಟವಾದ ಪ್ರಬಾವ ಬೀರಲಿದೆ. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅಲೆ ಹಾಗೂ ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾದ ಅವಧಿಯಲ್ಲಿ ನಗರೋತ್ಥಾನ ಯೋಜನೆಯಡಿ ಕೋಟ್ಯಂತರ ವೆಚ್ಚದಲ್ಲಿ ನಗರ ಪಟ್ಟಣ ಪ್ರದೇಶದ ಅಭಿವೃದ್ಧಿ, ಸ್ಮಾರ್ಟ್ ಸಿಟಿ ಯೋಜನೆಯಡಿ ಬೃಹತ್ ನಗರ ಸಂಪೂರ್ಣ ಅಭಿವೃದ್ಧಿಯಿಂದ ಮತದಾರರು ಬಿಜೆಪಿ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿದ್ದ ಸಂದರ್ಬದಲ್ಲಿ ನಗರ ಪ್ರದೇಶದ ಅಭಿವೃದ್ಧಿಗೆ ಮೂಲ ಸೌಲಭ್ಯ ಕಲ್ಪಿಸಲು ಕೈಗೊಂಡ ಸಂಕಲ್ಪ ಮತದಾರರ ಮನ ಗೆಲ್ಲುವಲ್ಲಿ ಸಹಕಾರಿಯಾಗಿದೆ ಎಂದ ಅವರು, ಪಟ್ಟಣದ ಅಭಿವೃದ್ಧಿ, ಕುಡಿಯುವ ನೀರು ಮತ್ತಿತರ ಮೂಲ ಸೌಲಭ್ಯದಿಂದ ಈ ಬಾರಿ ಅತಿ ಹೆಚ್ಚು ಸ್ಥಾನ ಗಳಿಸಿ ಪುರಸಭೆಯ ಗದ್ದುಗೆಯನ್ನು ಬಿಜೆಪಿ ಪುನಃ ವಶಪಡಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪೊಲೀಸರ ಜತೆ ವಾಗ್ವಾದ: ಹಳೆ ಹೊನ್ನಾಳಿ ರಸ್ತೆಯ ವಾರ್ಡ್ ಸಂಖ್ಯೆ 15 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಳ್ಳಿ ದರ್ಶನ್ ಮತಗಟ್ಟೆ ಬಳಿ ಮತ ಯಾಚಿಸುತ್ತಿದ್ದಾರೆ ಎಂದು ವಿರೋಧ ಪಕ್ಷದ ಆರೋಪಕ್ಕೆ ಪೊಲೀಸರು ಮಧ್ಯ ಪ್ರವೇಶಿಸಿ ಅಭ್ಯರ್ಥಿಯನ್ನು ಹೊರ ಕಳುಹಿಸಿದರು. ಅಭ್ಯರ್ಥಿಯನ್ನು ಪೊಲೀಸರು ತಳ್ಳಿದರು ಎಂದು ಅಭ್ಯರ್ಥಿ ತೀವ್ರವಾಗಿ ಆಕ್ಷೇಪಿಸಿದಾಗ ಕೆಲ ಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.