Advertisement

ಕೊನೇ ದಿನ ನಾಮಪತ್ರಗಳ ಸುರಿಮಳೆ!

04:41 PM May 17, 2019 | Team Udayavani |

ಶಿಕಾರಿಪುರ: ಪಟ್ಟಣದ ಪುರಸಭೆಗೆ ತನ್ನದೇ ಆದ ಇತಿಹಾಸವಿದೆ. ರಾಜ್ಯದಲ್ಲಿ ಶರವೇಗದಲ್ಲಿ ಬೆಳೆಯುತ್ತಿರುವ ಪಟ್ಟಣದಲ್ಲಿ ಶಿಕಾರಿಪುರ ಕಳೆದ ನಾಲ್ಕು ದಶಕಗಳ ಹಿಂದೆ ಅತಿ ಹಿಂದುಳಿದ ತಾಲೂಕೆಂದು ನಂಜುಂಡಪ್ಪ ವರದಿಯಲ್ಲಿ ಪ್ರಸ್ತಾಪವಾಗಿತ್ತು. ಈಗ ನಿರಂತರ ಅಭಿವೃದ್ಧಿಯಿಂದ ಹೊಸ ಬದಲಾವಣೆಯತ್ತ ಕಾಲಿಟ್ಟಿದೆ. ರಾಷ್ಟ್ರೀಯ ಹೆದ್ದಾರಿ ಮೂಲ ಸೌಕರ್ಯಗಳಿಂದ ಶಿಕಾರಿಪುರ ಅಭಿವೃದ್ಧಿಯ ಮುಂಚೂಣಿಯಲ್ಲಿದೆ. ಒಂದು ಅವಧಿ ಬಿಟ್ಟರೆ ಬಹುತೇಕ ಬಿಜೆಪಿ ಹಿಡಿತದಲ್ಲಿಯೇ ಶಿಕಾರಿಪುರ ಪುರಸಭೆಯ ಆಡಳಿತ ಇದೆ. ಹಿಂದಿನ ಆಡಳಿತಲ್ಲಿ 15 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಈ ಬಾರಿ ಚುನಾವಣೆ ಬಹುತೇಕ ರಂಗೇರಿದ್ದು ಯುವಕರು, ಹೊಸಬರು ಮತ್ತು 3 ಜನ ಪತ್ರಕರ್ತರು ಕಣದಲ್ಲಿದ್ದಾರೆ. ಬಿಜೆಪಿ ಇಬ್ಬರು ಪತ್ರಕರ್ತರಿಗೆ ಸ್ಥಾನ ಕಲ್ಪಿಸಿ ಕೊಟ್ಟಿದ್ದು ಒಬ್ಬರು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.

Advertisement

ಈ ಬಾರಿ ಪಕ್ಷೇತರರು ಅಧಿಕ ಸಂಖ್ಯೆಯಲ್ಲಿ ಕಣದಲ್ಲಿದ್ದಾರೆ. ಬುಧವಾರ 40 ಮಂದಿ ನಾಮಪತ್ರ ಸಲ್ಲಿಸಿದ್ದು ಕೊನೆಯ ದಿನವಾದ ಗುರುವಾರ 55 ನಾಮಪತ್ರಗಳು ಸಲ್ಲಿಕೆಯಾಗಿವೆ. ಅದರಲ್ಲಿ ಬಿಜೆಪಿ ನಾಲ್ಕು ಜನ ಅಲ್ಪಸಂಖ್ಯಾತರಿಗೆ ಸ್ಥಾನ ಕಲ್ಪಿಸಿದೆ. ಆರು ಜನ ವೀರಶೈವರು, ಆರು ಜನ ಕುರುಬರು, 2 ಎಸ್‌ ಸಿ, 1 ಎಸ್‌ಟಿ ಗಳಿಗೆ ಹಾಗೂ 1 ಬಂಟ್ಸ್‌ , 1 ಭೋವಿ ಜನಾಂಗಕ್ಕೆ ಅವಕಾಶ ಮಾಡಿಕೊಟ್ಟಿದ್ದು ಪ್ರತಿ ವಾರ್ಡ್‌ನಲ್ಲೂ ಜಿದ್ದಾಜಿದ್ದಿ ಇದ್ದು ಪಕ್ಷೇತರರು ಬಹುತೇಕ ಕಡೆ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸವಾಲಾಗಿರುವುದು ನಿಜ. ಕಾಂಗ್ರೆಸ್‌ 19 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು 3 ಜನ ಅಲ್ಪಸಂಖ್ಯಾತರಿಗೆ , 7 ಜನ ವೀರಶೈವರಿಗೆ, 3 ಜನ ಎಸ್‌ಸಿ/ಎಸ್ಟಿ, 6 ಜನ ಕುರುಬ ಸಮಾಜದವರಿಗೆ ಅವಕಾಶ ನೀಡಿದೆ. 19 ಜನರಲ್ಲಿ 11 ಜನ ಮಹಿಳೆಯರಿಗೆ ಅವಕಾಶ ಕಲ್ಪಿಸಿದೆ. ಎರಡು ರಾಷ್ಟ್ರೀಯ ಪಕ್ಷಗಳು ಎಲ್ಲಾ ಸಮುದಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಜಾಣತನದಿಂದ ಟಿಕೆಟ್ ಹಂಚಿಕೆ ಮಾಡಿವೆ ಎಂದು ತಿಳಿಯುತ್ತಿದೆ. ಈ ನಡುವೆ ಜೆಡಿಎಸ್‌ ಕೂಡ 6 ವಾರ್ಡ್‌ಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಈ ನಡುವೆ ನಡೆದ ಬೆಳವಣಿಗೆಯಲ್ಲಿ ಜೆಡಿಎಸ್‌ 6 ಸ್ಥಾನಗಳಿಗೆ ಸ್ಪರ್ಧಿಸಿ ಆಚ್ಚರಿ ಮೂಡಿಸಿದ್ದು ಮೈತ್ರಿಯಲ್ಲಿ 2 ಕ್ಷೇತ್ರಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ. ಎರಡು ಪಕ್ಷದ ಮುಖಂಡರ ಜೊತೆ ಮಾತನಾಡಿ ಸರಿ ಪಡಿಸಿಕೊಳ್ಳುತ್ತೇವೆ ಎಂದು ಜೆಡಿಎಸ್‌ ಮುಖಂಡ ಎಚ್.ಟಿ. ಬಳಿಗಾರ್‌ ಹೇಳಿದರು.

ಒಟ್ಟು 23 ವಾರ್ಡ್‌ಗಳಿಗೂ 3 ಪಕ್ಷಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳು ಸೇರಿ 98 ಜನ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ನಾಮಪತ್ರ ಹಿಂಪಡೆಯಲು ಮೇ 20 ಕೊನೆಯ ದಿನವಾಗಿದ್ದು ಬಂಡಾಯ ಅಭ್ಯರ್ಥಿಗಳ ಮನವೊಲಿಸಲು ಈಗಿನಿಂದಲೇ ಎಲ್ಲಾ ರಾಜಕೀಯ ಪಕ್ಷಗಳು ಸೆಣಸಾಡುತ್ತಿವೆ. ಒಟ್ಟಿನಲ್ಲಿ 20 ರ ನಂತರ ಅಂತಿಮ ಕಣದಲ್ಲಿ ಯಾರು ಉಳಿಯಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next