ಶಿಕಾರಿಪುರ: ದಾಸ ಸಾಹಿತ್ಯದ ಮೂಲಕ ಸಮಾಜದ ಅಂಕುಡೊಂಕು ತಿದ್ದಿದ ದಾಸರಲ್ಲೇ ಶ್ರೇಷ್ಠದಾಸ ಭಕ್ತ ಕನಕದಾಸ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಪಟ್ಟಣದ ಕನಕ ಉದ್ಯಾನವನದಲ್ಲಿ ತಾಲೂಕು ಆಡಳಿತದ ವತಿಯಿಂದ ಅಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಾಸ ಸಾಹಿತ್ಯದ ಮೂಲಕ ಸಮಾಜದಲ್ಲಿನ ಅಂಕುಡೊಂಡುಗಳನ್ನು ತಿದ್ದಿದ ಶ್ರೇಷ್ಠ ಮಹಾನ್ ಸಂತ ಕನಕದಾಸರು. ಅವರ ಆದರ್ಶ ಭಕ್ತ ಸಾಹಿತ್ಯದ ಪರಂಪರೆ ಇಂದಿಗೂ ಪ್ರಸ್ತುತವಾಗಿದೆ ಎಂದರು.
ಬಿ.ಎಸ್. ಯಡಿಯೂರಪ್ಪನವರು ಕನಕದಾಸ ಜಯಂತಿಯನ್ನು ಸರ್ಕಾರಿ ರಜೆ ಘೋಷಣೆ ಮಾಡುವ ಮೂಲಕ ನಾಡಿಗೆ ಕನಕದಾಸರ ಬಗ್ಗೆ ಅವರ ಚಿಂತನೆಗಳನ್ನು ತಿಳಿಯುವಂತೆ ಮಾಡಿದರು. ಕನಕ ಪೀಠ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದರು. ಈ ಮೂಲಕ ಕನಕದಾಸರ ಶ್ರೇಷ್ಠತೆಯನ್ನು ನಾಡಿಗೆ ಪರಿಚಯಿಸಿದರು ಎಂದರು.
ಶಾಲಾ ಮಕ್ಕಳಿಗೆ ಪ್ರತಿ ವರ್ಷ ಶೈಕ್ಷಣಿಕ ಪ್ರವಾಸವನ್ನು ಕನಕದಾಸ ಜನ್ಮಭೂಮಿ ಬಾಡಾ ಗ್ರಾಮ ಹಾಗೂ ಕನಕಗುರು ಪೀಠ ಕಾಗಿನೆಲೆಗಳಂತ ಪುಣ್ಯಕ್ಷೇತ್ರಗಳಿಗೆ ಕೈಗೊಳ್ಳಬೇಕು. ಈ ಮೂಲಕ ಮಕ್ಕಳಲ್ಲಿ ಕನಕದಾಸರ ಬಗ್ಗೆ ಹಾಗೂ ಅವರ ಚಿಂತನೆಗಳನ್ನು ಅವರ ಜೀವನಲ್ಲಿ ಅಳವಡಿಸಿಕೊಳ್ಳಲು ಸ್ಫೂರ್ತಿ ನೀಡಿದಂತಾಗುತ್ತದೆ ಎಂದರು. ತಾಲೂಕು ಕುರುಬ ಸಮಾಜದ ಅಧ್ಯಕ್ಷ ಕಬಾಡಿ ರಾಜು ಮಾತನಾಡಿ, ಕನಕದಾಸರ ಚಿಂತನೆ, ಆದರ್ಶವನ್ನು ನಮ್ಮ ಎಲ್ಲಾ ಯುವಕರು ಅಳವಡಿಸಿಕೊಳ್ಳಬೇಕು. ಅವರ ಜೀವನದ ಧ್ಯೇಯವನ್ನು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.
ತಹಶೀಲ್ದಾರ್ ಎಂ.ಪಿ ಕವಿರಾಜ್ ಮಾತನಾಡಿ, ಕನಕದಾಸರು ಎಂದರೆ ಒಂದು ಜಾತಿಗೆ ಸೀಮಿತವಾಗಿಲ್ಲ. ಅವರ ಚಿಂತನೆ ಇಡೀ ವಿಶ್ವದಲ್ಲಿಯೇ ಶ್ರೇಷ್ಠವಾಗಿರುವಂತದ್ದು. ಅವರ ಸಮಾಜದಲ್ಲಿ ಮೇಳು ಕೀಳು, ಬೇಧ ಭಾವ ಇಲ್ಲದೆ ಭಕ್ತಿಯ ಮೇಲ್ಪಂತಕ್ಕೆ ಹೇರಿದ ಮಹಾನ್ ಚೇತನ ಎಂದರು. ಕನಕದಾಸ ಕೀರ್ತನೆಗಳ ಕುರಿತು ವಾದಿರಾಜ್ ಪಂಡಿತ್ ಉಪನ್ಯಾಸ ನೀಡಿದರು. ಜಿಪಂ ಸದಸ್ಯರಾದ ರೇಣುಕಾ ಹನುಮಂತಪ್ಪ, ಮಮತಾ ಸಾಲಿ, ಪುರಸಭೆ ಸದಸ್ಯರಾದ ಹುಲ್ಮಾರ್ ಮಹೇಶ, ಪಾಲಾಕ್ಷಪ್ಪ, ಪ್ರಶಾಂತ್ ಜೀನಳ್ಳಿ, ಲಕ್ಷ್ಮೀ ಮಹಾಲಿಂಗಪ್ಪ, ಸುನಂದ, ತಾಪಂ ಅಧ್ಯಕ್ಷ ಶಂಭು, ಸಮಾಜದ ಮುಖಂಡರಾದ ಟಿ.ಎಸ್. ಮೋಹನ್, ಗೋಣಿ ಮಾಲತೇಶ್, ಹಾಲಪ್ಪ, ಬೆಣ್ಣೆ ದೇವೇಂದ್ರಪ್ಪ, ಯೋಗೀಶ್, ಭಂಡಾರಿ ಮಾಲತೇಶ್, ಬಡಿಗಿ ಪಾಲಾಕ್ಷಪ್ಪ ಇದ್ದರು.