ಶಿಕಾರಿಪುರ: ಪಟ್ಟಣದ ದೊಡ್ಡಕೇರಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಯನ್ನು ಗುರುವಾರ ಅಯೋಜಿಸಲಾಗಿತ್ತು. ತಾಲೂಕಿನ ಅನೇಕ ಭಾಗಗಳಿಂದ ನೂರಾರು ಹೋರಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಹೋರಿಗಳ ಮಾಲೀಕರು ತಮ್ಮ ಹೋರಿಯನ್ನು ಬಿಟ್ಟು ಹೋರಿ ಹಿಡಿಯುವ ಯುವಕರಿಗೆ ಹಾಕಲೇ ಕೈಯ ಮುಟ್ಟೋ ಮೈಯ ಎಂದು ತಮ್ಮ ಹೋರಿಯ ಸಾಮರ್ಥ್ಯದ ಬಗ್ಗೆ ಅಭಿಮಾನ ವ್ಯಕ್ತಪಡಿಸುತ್ತಿದ್ದುದು ಕಂಡುಬಂದಿತು.
ಸಾವಿರಾರು ಯುವಕರು ಹೋರಿ ಹಬ್ಬ ವೀಕ್ಷಿಸಲು ಆಗಮಿಸಿದ್ದರು, ತಮ್ಮ ಪ್ರಿಯವಾದ ಹೋರಿಗಳು ಹೋಗುವಾಗ ಕೂಗುವ ಮೂಲಕ ಹರ್ಷ ವ್ಯಕ್ತಪಡಿಸಿದರು. ವೇಗವಾಗಿ ಓಡಿ ಬರುವ ಹೋರಿಗಳನ್ನು ಕ್ಷಣಾರ್ಧದಲ್ಲಿ ಕೈ ಹಾಕಿಕೊಂಡು ಹೋಗುತ್ತಾರೆ. ಕೊಬ್ಬರಿಯನ್ನು ಹರಿಯುತ್ತಾರೆ. ಇದನ್ನು ನೋಡಿದ ಜನ ಅಭಿಮಾನದಿಂದ ಕೂಗುವುದು, ಸಿಳ್ಳೆ ಹೊಡೆಯುವುದು ಮಾಡಿದರು.
ತಮಿಳುನಾಡಿನಿಂದ ಬಂದ ಹೋರಿಗಳು: ಹೋರಿಗಳ ಮಾಲೀಕರು ಎಲ್ಲಾ ಹೋರಿಗಳಿಗಿಂತ ಹೆಚ್ಚು ಚೆನ್ನಾಗಿ ಓಡುವ ಹೋರಿಗಳನ್ನು ತಮಿಳುನಾಡಿನಿಂದ ತಂದು ಅದನ್ನು ಪಳಗಿಸಿ ಹಬ್ಬದಲ್ಲಿ ಬಿಟ್ಟಿದ್ದರು.
ಗಮನ ಸೆಳೆದ ಹೋರಿಗಳ ಹೆಸರು: ಹೋರಿ ಮಾಲೀಕರು ತಮಗಿಷ್ಟವಾಗುವ ಹೆಸರನ್ನು ಹೋರಿಗಳಿಗೆ ನಾಮಕರಣ ಮಾಡಿ ಹಬ್ಬದಲ್ಲಿ ಭಾಗವಹಿಸಿದ್ದರು. ಕಮಿಟಿಯವರು ಮೈಕ್‌ನಲ್ಲಿ ಅದರ ಹೆಸರುಗಳನ್ನು ಕೂಗಿ ಹೇಳುವಾಗ ಕುಣಿದು ಸಂಭ್ರಮಿಸಿದರು. ಅನೇಕ ಹೋರಿಗಳು ಭಾಗವಹಿಸಿದ್ದು ಅವುಗಳ ಹೆಸರು ಗಮನ ಸೆಳೆದವು ಶಿಕಾರಿಪುರದ ಸಿಂಹ, ಹುಲಿಗಿನಕೊಪ್ಪದ ನಾಯಕ, ಶಿವಮೊಗ್ಗದ ಸಿಂಹ, ಬ್ರಹ್ಮ, ಶಿಕಾರಿಪುರದ ಸಿದ್ದರಾಮಯ್ಯ, ಕ್ರಾಂತಿವೀರ, ಶಿಕಾರಿಪುರದ ಭಗವಮತ, ಸಂದಿಮನೆ ಕದಂಬ, ಹಿಟ್ಲರ್, ಈಟೇರ್ ಹುಲಿ, ಸಿಕ್ಸ್ ಫ್ಯಾಕ್ ಶಿವ, ಹಿಂದೂ ಸಾಮ್ರಾಟ್, ವೈಭವ, ಶಿಕಾರಿಪುರ ಹುಲಿ, ಶಿವ, ಭಸ್ಮಾಸುರ, ಅಘೋರ, ತಿಮ್ಲಾಪುರದ ದೊಡ್ಮನೆ ಹುಡುಗ, ಇಂಡಿಯಾನ್ ಅರ್ಮಿ, ಶಿಕಾರಿಪುರದ ಕಂಸ, ಬೆಣ್ಣೆ ಮಾಲತೇಶ್, ಓಂಕಾರ, ಬಂತೇರ್ ಹುಲಿ, ಕುಮದ್ವತಿ ಕಿಲರ್, ವಜ್ರಮುನಿ, ಅರ್ಮುಗ ಹಾಗೂ ಇನ್ನೂ ಅನೇಕ ಹೋರಿಗಳು ಭಾಗವಹಿಸದ್ದವು.
ಹೋರಿ ಹಿಡಿಯಲು ಯುವಕರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದು ಅತೀ ಹೆಚ್ಚು ಹೋರಿ ಹಿಡಿದು ಹೋರಿಗಳ ಕೊಬ್ಬರಿಯನ್ನು ಹರಿದರು. ಒಟ್ಟಾರೆ ಯಾವುದೇ ಅನಾಹುತ ಸಂಭವಿಸದೆ ಶಾಂತಿಯುತವಾಗಿ ಹೋರಿ ಹಬ್ಬ ನಡೆಯಿತು.