ಶಿವಮೊಗ್ಗ: ರಾಜ್ಯ ಬಿಜೆಪಿಯ ಉಪಾಧ್ಯಕ್ಷ, ಪ್ರಭಾವಿ ನಾಯಕ ಬಿ.ವೈ. ವಿಜಯೇಂದ್ರ ಚೊಚ್ಚಲ ಸ್ಪರ್ಧೆಯಿಂದಾಗಿ ಶಿಕಾರಿಪುರ ಹೈವೋಲ್ಟೇಜ್ ಕಣವಾಗಿದೆ.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಚುನಾವಣ ರಾಜಕೀಯ ನಿರ್ಗಮನದ ಅನಂತರ ತಮ್ಮ ಮಗನಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದು ವಿಜಯೇಂದ್ರ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕುವ ತವಕದಲ್ಲಿದ್ದಾರೆ. ಇತ್ತ ಕಾಂಗ್ರೆಸ್ ಕೂಡ ಟಕ್ಕರ್ ಕೊಡಲು ಸಜ್ಜಾಗಿದೆ. ಪಕ್ಷೇತರ ಅಭ್ಯರ್ಥಿ ನಾಗರಾಜ ಗೌಡ ಹೊಸ ಭರವಸೆ ಮೂಡಿಸಿದ್ದಾರೆ.
8 ಬಾರಿ ಶಾಸಕರಾಗಿರುವ ಬಿಎಸ್‌ವೈ ಈ ಕ್ಷೇತ್ರದಲ್ಲಿ ಸೋತಿದ್ದು ಒಮ್ಮೆ ಮಾತ್ರ. ದಿ| ಬಂಗಾರಪ್ಪರಂಥ ಘಟಾನುಘಟಿಗಳಿಗೆ ಇಲ್ಲಿ ಮಣ್ಣು ಮುಕ್ಕಿಸಿರುವ ಶ್ರೇಯ ಅವರಿಗೆ ಸಲ್ಲುತ್ತದೆ. ಒಂದು ಸುತ್ತು ಪ್ರಚಾರ ಮಾಡಿ ಹೊರಟರೆ ಸಾಕು ಗೆಲ್ಲುತ್ತೇನೆ ಎಂಬಷ್ಟು ನಂಬಿಕೆ ಮತ್ತು ಹಿಡಿತ ಬಿಎಸ್‌ವೈಗೆ ಇತ್ತು. 2014ರ ಉಪಚುನಾವಣೆಯಲ್ಲಿ ಹಿರಿಯ ಪುತ್ರ ರಾಘವೇಂದ್ರ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಆಗ ಕಡಿಮೆ ಅಂತರದಲ್ಲಿ ರಾಘವೇಂದ್ರ ಗೆಲುವು ಸಾ ಧಿಸಿದ್ದರು. ಅದು ಎಚ್ಚರಿಕೆ ಕರೆಗಂಟೆಯಾಗಿತ್ತು. ಈಗ ಕಿರಿಯ ಪುತ್ರನ ರಾಜ ಕೀಯ ಭವಿಷ್ಯಕ್ಕೆ ಕ್ಷೇತ್ರ ಧಾರೆ ಎರೆದಿರುವ ಬಿಎಸ್‌ವೈಗೆ ದೊಡ್ಡ ಅಂತರದ ಗೆಲುವು ದೊರಕಿಸಿಕೊಡುವ ಅನಿವಾರ್ಯತೆ ಇದೆ. 2018ರಲ್ಲಿ ಪ್ರಬಲ ಪೈಪೋಟಿ ಕೊಟ್ಟಿದ್ದ ಗೋಣಿ ಮಾಲತೇಶ್ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ಟಿಕೆಟ್ ವಂಚಿತ ನಾಗರಾಜ ಗೌಡ ಪಕ್ಷೇತರ ಅಭ್ಯರ್ಥಿಯಾಗಿ ಸೆಡ್ಡು ಹೊಡೆದಿದ್ದಾರೆ. ಇವರಿಗೆ ಹಲವು ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ದಾರೆ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಕಾಣುತ್ತಿದೆ.
ಬಿಜೆಪಿಯಲ್ಲಿ ಯಾವುದೇ ಬಂಡಾಯ ಇಲ್ಲ. ಕಾಂಗ್ರೆಸ್‌ನಿಂದ ಬಂಡಾಯ ಅಭ್ಯರ್ಥಿ ಯಾಗಿ ಸ್ಪ ರ್ಧಿಸಿರುವ ನಾಗರಾಜ ಗೌಡರಿಂದ ಕಾಂಗ್ರೆಸ್‌ಗೆ ಹೆಚ್ಚು ಡ್ಯಾಮೇಜ್ ಆಗಿದೆ. ಜೆಡಿಎಸ್ ಅಭ್ಯರ್ಥಿ ಬಿಜೆಪಿ ಸೇರಿದ ಪರಿಣಾಮ ಈ ಬಾರಿ ಸ್ಪರ್ಧೆ ಮಾಡಿಲ್ಲ. ಬಿ.ವೈ. ವಿಜಯೇಂದ್ರ ಅವರಿಗೆ ವೈಯಕ್ತಿಕ ವರ್ಚಸ್ಸು, ಬಿಎಸ್‌ವೈ ಅಭಿವೃದ್ಧಿ ಕಾರ್ಯ, ರಾಷ್ಟ್ರೀಯ, ರಾಜ್ಯ ನಾಯಕರ ಪ್ರಚಾರ ಕೈ ಹಿಡಿದಿದೆ. ಆದರೆ ಒಳಮೀಸಲಾತಿ ವಿಚಾರದಲ್ಲಿ ಮುನಿಸಿ ಕೊಂಡಿರುವ ಲಂಬಾಣಿ ಸಮುದಾಯದ ಮತಗಳು ಛಿದ್ರಗೊಳ್ಳುವ ಆತಂಕ ಇದೆ. ಕಾಂಗ್ರೆಸ್ ಅಭ್ಯರ್ಥಿ ಗೋಣಿ ಮಾಲತೇಶ್‌ಗೆ ಬಿಎಸ್‌ವೈ ಕುಟುಂಬದ ಬಗ್ಗೆ ಅಸಮಾಧಾನ ಹೊಂದಿರುವ ಮತಗಳು, ಕಾಂಗ್ರೆಸ್ ಗ್ಯಾರಂಟಿ ಕಾರ್ಡ್, ಕುರುಬ, ಹಿಂದುಳಿದ ವರ್ಗದ ಮತಗಳು ಕೈ ಹಿಡಿಯುವ ವಿಶ್ವಾಸ ಇದೆ. ಬಂಡಾಯ ಅಭ್ಯರ್ಥಿ ನಾಗರಾಜ ಗೌಡರಿಗೆ ವೈಯಕ್ತಿಕ ವರ್ಚಸ್ಸು, ಪ್ರಬಲ ಸಾದರ ಲಿಂಗಾಯತ ಸಮುದಾಯ ತಮ್ಮ ಕೈ ಹಿಡಿಯಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.
-ಶರತ್ ಭದ್ರಾವತಿ