Advertisement

ಅಭಿವೃದ್ಧಿಗೆ ಜನಪದ ಅವಶ್ಯ

04:22 PM Aug 24, 2019 | Naveen |

ಶಿಗ್ಗಾವಿ: ಜಗತ್ತಿನ ಪ್ರತಿ ಕ್ಷೇತ್ರದ ಸುಸ್ಥಿರ ಅಭಿವೃದ್ಧಿಗೆ ನೆಲಮೂಲ ಜ್ಞಾನವಾದ ಜನಪದದ ಅವಶ್ಯಕತೆ ಇದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಡಿ.ಬಿ. ನಾಯಕ ಹೇಳಿದರು.

Advertisement

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆಡಳಿತದ ಭವನದ ಮಲ್ಲಿಗೆ ದಂಡೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ವಿಶ್ವ ಜಾನಪದ ದಿನಾಚರಣೆ-2019’ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜನಪದ ಪಾರಂಪರಿಕ ಜ್ಞಾನವಾಗಿದ್ದು, ಈ ಜ್ಞಾನದಲ್ಲಿ ಸಾಧಕ-ಬಾಧಕಗಳಿವೆ.ಅವುಗಳನ್ನು ಸರಿದೂಗಿಸಿ ಶೈಕ್ಷಣಿಕ ಶಿಸ್ತಿಗೆ ಅಳವಡಿಸುವ ಜಾವಿವಿ ಪ್ರಯತ್ನ ಅವಿರತವಾಗಿ ನಡೆದಿದೆ ಎಂದು ವಿಶ್ವವಿದ್ಯಾಲಯದ ಕಾರ್ಯಗಳನ್ನು ವಿವರಿಸಿದರು.

ಜಗತ್ತು ಎಷ್ಟೇ ಆಧುನಿಕ ವೈಜ್ಞಾನಿಕವಾಗಿ ಮುಂದುವರೆದರೂ, ಪಾರಂಪರಿಕ ಜ್ಞಾನ ಬಿಟ್ಟು ಬದುಕಲು ಸಾಧ್ಯವಿಲ್ಲ. ಅಲ್ಲದೆ ಜನಪದವು ಆಯಾ ಕಾಲಕ್ಕೆ ತಕ್ಕಂತೆ ಪರಿಷ್ಕರಣೆಯಾಗಿ ನಮ್ಮೆದುರು ಬಂದು ನಿಲ್ಲುತ್ತದೆ. ಅನೇಕ ಶಿಸ್ತುಗಳಲ್ಲಿ ಜನಪದ ಜ್ಞಾನ ಸೇರಿಕೊಂಡಿದ್ದು, ಸೈದ್ಧಾಂತಿಕ ಅಧ್ಯಯನದ ಮೂಲಕ ಜಾಗತಿಕ ಚರ್ಚೆಗಳಾಬೇಕು. ಆ ನಿಟ್ಟಿನಲ್ಲಿ ಜನಪದ ಯುವ ಸಂಶೋಧಕರು, ಯುವ ಆಧ್ಯಯನಕಾರರು ಕಾರ್ಯೋನ್ಮುಕವಾಗುವಂತೆ ಪ್ರೇರೇಪಿಸಿದರು.

ವಿವಿಯ ಕುಲಸಚಿವ ಪ್ರೊ| ಚಂದ್ರಶೇಖರ ಮಾತನಾಡಿ, ಸಮಾಜದಲ್ಲಿ ಜನಪದ ಬಹಳ ವಿಧದಲ್ಲಿ ಮನುಷ್ಯನ ಬದುಕನ್ನು ಕಟ್ಟಿಕೊಟ್ಟಿದೆ. ಜಗತ್ತಿನ ಎಲ್ಲ ಭಾಷೆ, ಪ್ರದೇಶಗಳಲ್ಲೂ ಜನಪದ ಇದೆ. ನಾವು ಜನಪದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರೂ, ನೀಡದಿದ್ದರೂ ಅದು ಮಾನವನೊಂದಿಗೆ ಬೆರೆತಿದೆ ಎಂದರು.

Advertisement

ಅಜ್ಜ, ಅಜ್ಜಿ ಕಥೆ ಹೇಳುವುದರಿಂದ ಬಹಳಷ್ಟು ವಿಚಾರಗಳನ್ನು ಹಂಚುತ್ತಿದ್ದರು. ಇಂದು ಕಥೆ ಹೇಳುವ ಪರಂಪರೆ ಬಹಳ ಕಡಿಮೆಯಾಗಿದೆ. ಜನಪದ ನಮ್ಮ ಪರಂಪರೆಯಾಗಿದೆ. ಅದನ್ನು ಪೋಷಿಸುವ ಕೆಲಸ ನಾವೆಲ್ಲ ಮಾಡುವ ಅಗತ್ಯವಿದೆ ಎಂದರು.

ವಿವಿಯ ಮೌಲ್ಯಮಾಪನ ಕುಲಸಚಿವ ಡಾ| ಎಂ.ಎನ್‌. ವೆಂಕಟೇಶ ಮಾತನಾಡಿ, ಜನಪದವು ಮನುಷ್ಯನ ಬದುಕಿನ ಜತೆಗೆ ಬಂದಿದ್ದು, ಜನಪದ ಕಥೆಗಳು ಮನುಷ್ಯನ ನೆಮ್ಮದಿ ಮತ್ತು ವೈಚಾರಿಕ ಚಿಂತನೆಗಳ ಜತೆ ಹಂಚಿಕೆಯಾಗಿದೆ. ಜನಪದದ ವಿದ್ವಾಂಸರು ತಿಳಿಸಿದ ಕಾಲಕ್ಕಿಂತಲೂ ಮೊದಲೇ ಮಾನವನೊಂದಿಗೆ ಬೆರೆತಿದೆ. ಜನಪದ ಯಾವಾಗಲೂ ಜೀವಂತವಾಗಿ ಇರುವಂತದ್ದು ಎಂದು ವಿಶ್ಲೇಷಿಸಿದರು.

ರಾಮನಗರದ ಇಫ್ರೂೕ ಜನಪದ ಮಹಾವಿದ್ಯಾಲಯದ ಡಾ| ಎಂ. ಬೈರೇಗೌಡ ಅವರು ಮತ್ತು ಜನಪದ ಗೀತ ಸಂಪ್ರದಾಯದ ಅಧ್ಯಾಪಕ ಶರೀಫ್‌ ಮಾಕಪ್ಪನವರ ಜನಪದ ಗೀತೆಗಳನ್ನು ಪ್ರಸ್ತುತ ಪಡಿಸಿದರು.

ವಿವಿಯ ಸಂಶೋಧನಾ ವಿದ್ಯಾರ್ಥಿ ಸಣ್ಣಯ್ಯ ಜಿ.ಎಸ್‌.ಪ್ರಾರ್ಥಿಸಿದರು. ಸಹಾಯಕ ಕುಲಸಚಿವ ಶಹಾಜಾನ್‌ ಮುದಕವಿ ಸ್ವಾಗತಿಸಿದರು. ಯೋಜನಾ ಸಹಾಯಕ ಡಾ| ಹನಮಪ್ಪ ಎಸ್‌. ಘಂಟಿ ಕಾರ್ಯಕ್ರಮ ನಿರ್ವಹಿಸಿದರು. ಸಹಾಯಕ ಪ್ರಾಧ್ಯಾಪಕ ಡಾ| ವೃಷಭಕುಮಾರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next