ತುಮರಿ: ಸಿಗಂದೂರು ಪ್ರವಾಸಿಗರು ಕೆಲ ದಿನಗಳ ಕಾಲ ಪ್ರವಾಸ ಮುಂದೂಡುವುದು ಸೂಕ್ತ. ಲಿಂಗನಮಕ್ಕಿ ಜಲಾಶಯ ನೀರು ಕುಸಿದ ಹಿನ್ನೆಲೆ ಬುಧವಾರದಿಂದ ಲಾಂಚ್‌ನಲ್ಲಿ ವಾಹನಗಳಿಗೆ ಅವಕಾಶ ನೀಡದೆ ಜನರಿಗೆ ಮಾತ್ರ ಕರೆದೊಯ್ಯಲು ತೀರ್ಮಾನಿಸಲಾಗಿದೆ.
ಸ್ವಂತ ವಾಹನದಲ್ಲಿ ಬರುವ ಪ್ರವಾಸಿಗರು ಹೊಸನಗರ, ನಗರ, ನಿಟ್ಟೂರು, ತುಮರಿ ರಸ್ತೆ ಬರಬಹುದು. ಲಾಂಚ್ ಮೂಲಕ ಬರುವವರು ವಾಹನ ನಿಲ್ಲಿಸಿ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಬಂದಿದೆ.
ಕರೂರು. ಬಾರಂಗಿ ಹೋಬಳಿಯ ಜನಸಾಮಾನ್ಯರಿಗೆ ಸಾಗರ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು 50 ಕಿಲೋಮೀಟರ್ ಬದಲು 150 ಕಿಲೋಮೀಟರ್ ಕ್ರಮಿಸಿ ಸಾಗರ ಹೋಗುವ ಪರಿಸ್ಥಿತಿ ಎದುರಾಗಿದೆ. ಇದರಿಂದ ದಿನಸಿ ಸಾಮಾನುಗಳ ಬೆಲೆ ಪ್ರತಿ ಕೆಜಿಗೆ 2 ರಿಂದ 3 ರೂಪಾಯಿಗಳಷ್ಟು ದುಬಾರಿಯಾಗಲಿದ್ದು ಜನಸಾಮಾನ್ಯರು ಈ ನಷ್ಟ ಅನುಭವಿಸುವಂತಾಗಿದೆ. ಆಸ್ಪತ್ರೆ, ಕೋರ್ಟು ಇನ್ನಿತರ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗಲಿದೆ ಎನ್ನುತ್ತಾರೆ ಸ್ಥಳೀಯರಾದ ಜಿನೇಂದ್ರ ಜೈನ್
ಎರಡೂ ಬದಿಯ ಪ್ಲಾಟ್‌ಫಾರ್ಮ್ಗಳು ಮುಗಿದಿದ್ದು ವಾಹನಗಳನ್ನು ಲಾಂಚಿಗೆ ಹಾಕಿದಲ್ಲಿ ಕೆಸರಿನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತದೆ. ಆದ್ದರಿಂದ ಜನರನ್ನು ಮಾತ್ರ ಸಾಗಿಸುವ ನಿರ್ಧಾರಕ್ಕೆ ಬಂದಿದ್ದೇವೆ.
– ಧನೇಂದ್ರ ಕುಮಾರ್, ಕಡುವು ನಿರೀಕ್ಷಕ, ಸಾಗರ