Advertisement

ಸಾಂಪ್ರದಾಯಿಕ ಕೃಷಿಯಿಂದ ವಾಣಿಜ್ಯ ಕೃಷಿಗೆ ಪಲ್ಲಟ

10:33 PM Oct 19, 2019 | mahesh |

ದ.ಕ. ಜಿಲ್ಲೆಯ ಮಲೆನಾಡು ತಾಲೂಕುಗಳಾದ ಪುತ್ತೂರು, ಸುಳ್ಯ ತಾಲೂಕಿನಲ್ಲಿ ಕೃಷಿ ಇಲ್ಲಿನ ಜನರ ಆರ್ಥಿಕ ಮೂಲ. ಸಾಂಪ್ರದಾಯಿಕ ಭತ್ತ ಕೃಷಿಯ ಜತೆಗೆ ಬದುಕಿನ ನಂಟು ಹೊಂದಿದ್ದ ಈ ಭಾಗದ ಕೃಷಿಕ ಕೆಲವು ದಶಕಗಳಿಂದ ಜೀವನಕ್ಕೆ ಆಧಾರವಾಗಿ ವಾಣಿಜ್ಯ ಬೆಳೆಗಳತ್ತ ನಂಟು ಬೆಳೆಸಿಕೊಂಡಿದ್ದಾನೆ.

Advertisement

ಅಡಿಕೆಯ ಜತೆಗೆ ತೆಂಗು, ಕೋಕೋ, ಕಾಳುಮೆಣಸು, ರಬ್ಬರ್‌ ಈ ಭಾಗದ ಜನರ ಬೆಳೆಯಾಗಿ ಪರಿವರ್ತನೆ ಹೊಂದಿದೆ. ಶೇ. 70 ರಷ್ಟು ಕೃಷಿಕರು ಅಡಿಕೆಯನ್ನೇ ಮುಖ್ಯ ವಾಣಿಜ್ಯ ಬೆಳೆಯನ್ನಾಗಿಸಿಕೊಂಡಿದ್ದರೆ, ಸಾಂಪ್ರದಾಯಿಕ ಭತ್ತದ ಕೃಷಿ ಶೇ. 10ರಷ್ಟಕ್ಕೆ ಇಳಿಕೆಗೊಂಡಿದೆ.

ವಾಣಿಜ್ಯದ ನಂಟು
ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ಮುಖ್ಯ ವಾಣಿಜ್ಯ ಬೆಳೆಯಾದ ಅಡಿಕೆಯನ್ನು ಅಂದಾಜು ಸುಮಾರು 10,000 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. 6,800 ಹೆಕ್ಟೇರ್‌ ಪ್ರದೇಶದಲ್ಲಿ ರಬ್ಬರ್‌ ಬೆಳೆಯಿದೆ. ಈ ಹಿಂದೆ 2,500 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಇತ್ತೀಚೆಗೆ ಭತ್ತ ಕೃಷಿಯಲ್ಲಿ ಇಳಿಕೆಯಾಗಿದೆ. ಈ ಪ್ರಮಾಣ ಇಲಾಖೆಯ ಗುರಿ 900 ಹೆಕ್ಟೇರ್‌ಗೆ ಇಳಿಕೆಯಾಗಿದೆ. ಉಳಿದಂತೆ ತೆಂಗು, ಕೊಕ್ಕೋ, ಕಾಳುಮೆಣಸುಗಳನ್ನು ಅಡಿಕೆ ತೋಟದ ಮಧ್ಯೆ ಉಪ ಬೆಳೆಗಳಾಗಿ ಬೆಳೆಯಲಾಗುತ್ತಿದೆ.

ಪುತ್ತೂರು ತಾಲೂಕಿನ ಪುತ್ತೂರು, ಉಪ್ಪಿನಂಗಡಿ ಹಾಗೂ ಕಡಬ ಹೋಬಳಿಗಳಲ್ಲಿ 8,928 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಮರಗಳಿಂದ 12,908 ಟನ್‌ ಅಡಿಕೆ ಉತ್ಪಾದನೆಯಾಗುತ್ತಿದೆ. 3,397 ಹೆಕ್ಟೇರ್‌ ಪ್ರದೇಶದ ತೆಂಗಿನ ಕೃಷಿಯಲ್ಲಿ 373. 63 ಟನ್‌ ತೆಂಗಿನ ಉತ್ಪಾದನೆ ಹಾಗೂ 424 ಹೆಕ್ಟೇರ್‌ ಪ್ರದೇಶದ ಕೊಕ್ಕೋ ಬೆಳೆಯಲ್ಲಿ 203.55 ಟನ್‌ ಉತ್ಪಾದನೆಯಾಗುತ್ತಿದೆ.

ನೆರೆಯ ರಾಜ್ಯ ಕೇರಳದ ರಬ್ಬರ್‌ ಕೃಷಿ ಪುತ್ತೂರು ಹಾಗೂ ಸುಳ್ಯ ತಾಲೂಕಿನ ರೈತರ ಮೇಲೆ ಪ್ರಭಾವ ಬೀರಿ ಇಲ್ಲಿಗೆ ಲಗ್ಗೆಯಿಟ್ಟಿದ್ದು ಬಿಟ್ಟರೆ ಉಳಿದ ಕೃಷಿ ಮಾದರಿಗಳು ಹೆಚ್ಚಿನ ಪ್ರಭಾವ ಬೀರಿಲ್ಲ. ನೇಂದ್ರ ಬಾಳೆ ಕೃಷಿ, ಅನನಾಸು ಸ್ವಲ್ಪ ಮಟ್ಟಿಗೆ ಪ್ರಭಾವ ಬೀರಿದೆಯಾದರೂ ಇದನ್ನು ಮುಂದುವರಿಸಿದವರು ವಿರಳ ಸಂಖ್ಯೆಯ ಕೃಷಿಕರು ಮಾತ್ರ. ಇನ್ನು ಏಲಕ್ಕಿ, ಶುಂಠಿಯನ್ನು ತೋಟದ ಮಧ್ಯೆ ಮನೆ ಬಳಕೆಯ ಪ್ರಮಾಣಕ್ಕೆ ಮಾತ್ರ ಬೆಳೆಯುತ್ತಿದ್ದಾರೆ.

Advertisement

ಕೃಷಿ ಕ್ಷೇತ್ರದ ಬದಲಾವಣೆ
ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ವಾಣಿಜ್ಯ ಕೃಷಿಗೆ ಸಂಬಂಧಪಟ್ಟಂತೆ ಹೊಸ ಬೆಳೆಗಳು ಕಾಣಿಸಿಕೊಳ್ಳದಿದ್ದರೂ ಉತ್ಪಾದನೆಯ ಪ್ರಮಾಣದಲ್ಲಿ ಬದಲಾವಣೆಗಳಾಗಿವೆ. ದೈವಗಳಿಗೆ ಬಿಟ್ಟ ಗದ್ದೆಗಳಿಗೆ ಹೊರತಾಗಿ ಈ ತಾಲೂಕಿನಲ್ಲಿ ಯಾರೂ ಭತ್ತದ ಕೃಷಿ ಮಾಡುತ್ತಿಲ್ಲ. ಭತ್ತಕ್ಕೆ ಬೆಲೆಯಿಲ್ಲ ಮತ್ತು ಈ ಕೃಷಿಗೆ ಬೆಂಬಲವಿಲ್ಲ ಎಂಬ ಅರಿವು ಉಂಟಾದಾಗ ತಾಲೂಕಿನಲ್ಲಿ ಕೃಷಿ ಪಲ್ಲಟ ಉಂಟಾಗಿದೆ. ತಾಲೂಕಿನಲ್ಲಿ ರಬ್ಬರ್‌ ಬೆಲೆ, ಅಡಿಕೆ ಬೆಳೆಯ ಪ್ರಮಾಣದಲ್ಲಿ ವಿಸ್ತರಣೆಯಾಗಿದೆ.

-  ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next