ದೊಡ್ಡಬಳ್ಳಾಪುರ: ಕೋವಿಡ್-19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮೂಲಕ ಶಾಲೆಗಳನ್ನು ಹಂತ ಹಂತವಾಗಿ ಆರಂಭಿಸುವ ಕುರಿತಾಗಿ ಹಾಗೂ ಪೋಷಕರ-ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರ ಅಭಿಪ್ರಾಯ ಪಡೆಯಲು ಬುಧವಾರ ತಾಲೂಕಿನ ಸರ್ಕಾರಿ- ಖಾಸಗಿ ಶಾಲೆಗಳಲ್ಲಿ ಪೋಷಕರ ಸಭೆ ನಡೆಸಲಾಯಿತು.
ಜು.1ರಂದು 4ರಿಂದ 7ನೇ ತರಗತಿ, ಜು.15ರಿಂದ 1ರಿಂದ 3 ನೇ ತರಗತಿ ಹಾಗೂ 8ರಿಂದ 10ನೇ ತರಗತಿ, ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳನ್ನು ಜು.20ರಿಂದ ತೆರೆಯುವಂತೆ ಶಿಕ್ಷಣ ಇಲಾಖೆ ಸೂಚಿಸಿರು ವುದನ್ನು ಪೋಷಕರ ಗಮನಕ್ಕೆ ತಂದು ಅವರಿಂದ ಅಭಿಪ್ರಾಯ ಪಡೆಯಲಾಯಿತು. ಈ ದಿನಾಂಕ ಹೊರತುಪಡಿಸಿ, ಪೋಷಕರು ಸೂಚಿಸುವ ದಿನಾಂಕ, ಶಾಲೆಗಳಲ್ಲಿ ಅಂತರ ಕಾಯ್ದು ಕೊಳ್ಳುವುದು
, ಶಾಲಾ ಆರಂಭದ ದಿನಾಂಕ, ಮಕ್ಕಳಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ವ್ಯವಸ್ಥೆ ಮಾಡಿ ಅಥವಾ ಪಾಳಿ ಪದ್ಧತಿಯಲ್ಲಿ ಶಾಲೆ ಆರಂಭಿಸುವ ಕುರಿತು ಮತ್ತು ಶಾಲೆಗಳಲ್ಲಿ ಕೋವಿಡ್-19 ಸೋಂಕು ಹರಡದಂತೆ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿ ಕೊಡಲಾಯಿತು. ನಗರದ ಸರ್ಕಾರಿ ಪ.ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ನಡೆದ ಪೋಷಕರ ಸಭೆ ಕುರಿತು ಮಾಹಿತಿ ನೀಡಿದ ಉಪಪ್ರಾಂಶುಪಾಲ ಆರ್.ಮಹದೇವ್, ಶಾಲೆಯಲ್ಲಿ 750 ವಿದ್ಯಾರ್ಥಿಗಳಿದ್ದು, ಸಾಮಾಜಿಕ ಅಂತರ ಕಾಪಾಡಿಕೊಂಡು ಒಂದೇ ಬಾರಿ ನಡೆಸುವುದು ಕಷ್ಟಕರ.
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ದಿನಕ್ಕೆ 2 ಪಾಳಿ ಪದ್ಧತಿಯಲ್ಲಿ ನಡೆಸುವುದು ಹಾಗೂ ಶಾಲೆ ಒಟ್ಟು ತರಗತಿಗಳನ್ನು 2 ವಿಭಾಗಗಳನ್ನಾಗಿ ವಿಂಗಡಿಸಿ, ದಿನ ಬಿಟ್ಟು ದಿನ ಶಾಲೆ ನಡೆಸುವ ಕುರಿತಾಗಿ ಪೋಷಕರ ಗಮನಕ್ಕೆ ತರಲಾಗಿದೆ. ಶಾಲೆಯಲ್ಲಿ ಬಿಸಿ ಊಟ ನೀಡದೇ, ಮಕ್ಕಳೇ ಮನೆಯಿಂದ ಊಟ-ನೀರು ತರಲು ಒಪ್ಪಿಗೆ ನೀಡಿದ್ದಾರೆಂದರು. ಶಾಲೆ ಆ.1ರಿಂದ ದಿನ ಬಿಟ್ಟು ದಿನ ಪದ್ಧತಿಯಲ್ಲಿ ನಿರ್ವಹಿಸುವುದು ಉತ್ತಮ. ಮಕ್ಕಳಿಗೆ ನಾವೇ ಊಟ ಕಳುಹಿಸುತ್ತೇವೆ. ಆದರೆ, ಶಾಲೆಯಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿದರೆ ಅನುಕೂಲ.
ಮಕ್ಕಳ ಹಿತದೃಷ್ಟಿಯಿಂದ ಶಾಲೆಯಲ್ಲಿ ಕೈಗೊ ಳ್ಳುವ ನಿರ್ಣಯಗಳಿಗೆ ನಮ್ಮ ಸಹಮತವಿದೆ ಎಂದು ಪೋಷಕರಾದ ಲಲಿತಾ ತಿಳಿಸಿದ್ದಾರೆ. ಖಾಸಗಿ ಶಾಲೆಗಳಲ್ಲಿ ನಡೆದ ಪೋಷಕರ ಸಭೆಗಳಲ್ಲಿ ಆನ್‌ಲೈನ್ ಶಿಕ್ಷಣಕ್ಕೆ ಬಹಳಷ್ಟು ಪೋಷಕರಿಂದ ವಿರೋಧ ವ್ಯಕ್ತವಾಗಿವೆ. ಶಾಲೆ ದಿನ ಬಿಟ್ಟು ದಿನ ನಡೆಯುವುದರಿಂದ ಮಕ್ಕಳನ್ನು ನಿಭಾಯಿಸುವುದು ಕಷ್ಟ. ಹೀಗಾಗಿ ಪಾಳಿ ಪದ್ಧತಿಯಲ್ಲಿ ನಡೆಸುವುದು ಸೂಕ್ತ. ಪಠ್ಯಕ್ರಮ ಕಡಿಮೆ ಮಾಡುವ ಬದಲು ರಜಾದಿನಗಳಲ್ಲಿ ಶಾಲೆ ನಡೆಸುವುದು ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಗಿವೆ.
ಅಭಿಪ್ರಾಯ ಅಪ್‌ಲೋಡ್: ಶಾಲೆಗಳಲ್ಲಿ ಕೋವಿಡ್-19 ಹರಡದಂತೆಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಪೋಷಕರ ಅಭಿಪ್ರಾಯಗಳನ್ನು ಶಾಲೆ ಮುಖ್ಯ ಶಿಕ್ಷಕರು ಇಲಾಖೆ ವೆಬ್‌ಸೈಟ್ ನಲ್ಲಿ ಜೂ.15ರೊಳಗೆ ಅಪ್‌ಲೋಡ್ ಮಾಡಲಿದ್ದಾರೆ. ಇದರ ಆಧಾರದ ಮೇಲೆ ಸರ್ಕಾರ ಕೈಗೊಳ್ಳುವ ತೀರ್ಮಾನದಂತೆ ಶಾಲೆ ಆರಂಭಿಸಲಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ತಿಳಿಸಿದರು.