ರೇವಾರಿ: ಭಗವಾನ್ ರಾಮನನ್ನು ಕಾಲ್ಪನಿಕ ಎಂದು ಕರೆಯುತ್ತಿದ್ದವರು,ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವನ್ನು ಬಯಸದವರು ಈಗ ‘ಜೈ ಸಿಯಾ ರಾಮ್’ ಎಂದು ಜಪಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹರಿಯಾಣದ ರೇವಾರಿಯಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (AIIMS) ಸ್ಥಾಪನೆ ಮತ್ತು ಹಲವಾರು ಯೋಜನೆಗಳನ್ನು ಉದ್ಘಾಟಿಸಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ, ಭಾರತ ಇಂದು ವಿಶ್ವದಲ್ಲಿ ಹೊಸ ಎತ್ತರವನ್ನು ತಲುಪಿದೆ ಮತ್ತು ಜನರ ಆಶೀರ್ವಾದದಿಂದ ಇದು ಸಾಧ್ಯವಾಗಿದೆ ಎಂದರು.
ಯುಎಇ ಮತ್ತು ಕತಾರ್ ಭೇಟಿಯನ್ನು ಉಲ್ಲೇಖಿಸಿ, ಭಾರತಕ್ಕೆ ಈಗ ಪ್ರತಿಯೊಂದು ಮೂಲೆಯಿಂದಲೂ ಗೌರವ ಸಿಗುತ್ತಿದ್ದು ಕೇವಲ ಮೋದಿಗೆ ಮಾತ್ರವಲ್ಲ, ಪ್ರತಿಯೊಬ್ಬ ಭಾರತೀಯನಿಗೂ ಇದೆ ಎಂದರು.
ಹಿಂದಿನ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವಲ್ಲಿ ದಶಕಗಳಿಂದ ಕಾಂಗ್ರೆಸ್ ಅಡೆತಡೆಗಳನ್ನು ಸೃಷ್ಟಿಸಿತ್ತು. ಗ್ಯಾರಂಟಿ ನೀಡಿ 370ನೇ ವಿಧಿಯನ್ನು ರದ್ದುಪಡಿಸುವ ಮೂಲಕ ಈಡೇರಿಸಿದ್ದೇವೆ. ಒಂದು ಕುಟುಂಬದ ಹಿತಾಸಕ್ತಿಯನ್ನು ದೇಶ ಮತ್ತು ಅದರ ಜನರ ಹಿತಾಸಕ್ತಿಯನ್ನು ಮೇಲಕ್ಕೆ ಇಡುವುದು ಕಾಂಗ್ರೆಸ್‌ನ ದಾಖಲೆಯಾಗಿದೆಎಂದರು.
2014 ರ ಸಾರ್ವತ್ರಿಕ ಚುನಾವಣೆಯ ಪೂರ್ವದಲ್ಲಿ ಬಿಜೆಪಿಯು ನನ್ನನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ನಂತರ ನನ್ನ ಮೊದಲ ಸಾರ್ವಜನಿಕ ಕಾರ್ಯಕ್ರಮವು ಸೆಪ್ಟೆಂಬರ್ 2013 ರಲ್ಲಿ ರೇವಾರಿಯಲ್ಲಿ ನಡೆಯಿತು ಎಂದು ಮೋದಿ ನೆನಪಿಸಿ ಕೊಂಡರು. ಆಗ ನಾನು ಕೆಲವು ಭರವಸೆಗಳನ್ನು ನೀಡಿದ್ದೆ, ದೇಶವು ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರವನ್ನು ಬಯಸಿತ್ತು ಅದು ಈಡೇರಿದೆ ಎಂದು ಹೇಳಿದರು.