ಮುಂಡಗೋಡ: ಅಪಾರ ಪ್ರಮಾಣದ ನೀರು ಹರಿದು ಬಂದು ಕೊಚ್ಚಿಕೊಂಡು ಹೋಗಿದ್ದ ತಾಲೂಕಿನ ಶಿಡ್ಲಗುಂಡಿ ಸೇತುವೆ ಕಾಮಗಾರಿ ಕಳೆದ ಎರಡು ದಿನಗಳಿಂದ ಆರಂಭವಾಗಿರುವುದು ಸಾರ್ವಜನಿಕರಿಗೆ ಸಂತಸ ಮೂಡಿಸಿದೆ.
2019ರ ಅಗಷ್ಟ ತಿಂಗಳಲ್ಲಿ ಅಪಾರ ಪ್ರಮಾಣದ ಮಳೆ ಸುರಿದ ಕಾರಣ ತಾಲೂಕಿನ ಗಡಿಭಾ ಗದಲ್ಲಿರುವ ಶಿಡ್ಲಗುಂಡಿ ಹಳ್ಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದ ಪರಿಣಾಮ ಸೇತುವೆಯ ಎರಡು ಕಡೆಗಳಲ್ಲಿನ ರಸ್ತೆ ಕೊಚ್ಚಿಕೊಂಡು ಹೋಗಿತ್ತು. ಇದರಿಂದಾಗಿ ಯಲ್ಲಾಪುರ ಮುಂಡಗೋಡ ತಾಲೂಕುಗಳ ಮಧ್ಯ ಸಂಚಾರ್ ಬಂದ್ ಆಗಿತ್ತು. ಎರಡು ತಿಂಗಳ ನಂತರ ಶಿಡ್ಲಗುಂಡಿ ಸೇತುವೆಯಲ್ಲಿ ಹರಿಯುತ್ತಿದ್ದ ನೀರಿನ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ.
ಸೇತುವೆಯ ಸನಿಹದಲ್ಲಿಯೆ ಲೋಕೋಪಯೋಗಿ ಇಲಾಖೆಯವರು ಹಳ್ಳಕ್ಕೆ ಅಡ್ಡಲಾಗಿ ಪೈಪ್‌ಗ್ಳನ್ನು ಹಾಕಿ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಿದ್ದರು. ನಂತರದಲ್ಲಿ ಸೇತುವೆಯ ಎರಡು ಕಡೆಗಳಲ್ಲಿ ಕೊಚ್ಚಿ ಹೋಗಿದ್ದ ರಸ್ತೆ ನಿರ್ಮಾಣಕ್ಕೆ ಸರಕಾರ ಅನುದಾನ ಬಿಡುಗಡೆ ಮಾಡಿದ್ದು ಇದೀಗ ಕಳೆದೆರಡು ದಿನಗಳಿಂದ ಕಾಮಗಾರಿ ಆರಂಭಿಸಲಾಗಿದೆ. ಈ ಕಾಮಗಾರಿ ಆರಂಭವಾಗಿರುವುದು ಎರಡು ತಾಲೂಕಿನ ಜನರಿಗೆ ಸಂತಸವುಂಟು ಮಾಡಿದೆ.
ಮಳೆಗಾಲ ಆರಂಭವಾದರೆ ತಾತ್ಕಾಲಿಕ ಸೇತುವೆ ಮುಳುಗಡೆಯಾಗಿ ಸಂಚಾರಕ್ಕೆ ಅಡಚಣೆ ಆಗುತ್ತದೆ ಹಾಗೂ ತಾಲೂಕಿನ ಗಡಿಭಾಗದ ಹಲವಾರು ಗ್ರಾಮಗಳಿಂದ ಯಲ್ಲಾಪುರದ ಶಾಲಾ ಕಾಲೇಜುಗಳಿಗೆ ಹೋಗುವ ನೂರಾರು ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸ ಬೇಕಾಗುತ್ತದೆ.
ಆದ್ದರಿಂದ ಇದೀಗ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು ಮೂರು ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೋಳ್ಳಲಿದೆ ಎಂಬ ಭರವಸೆಯನ್ನು ಲೋಕೋಪಯೋಗಿ ಇಲಾಖೆಯವರು ವ್ಯಕ್ತ ಪಡಿಸುತ್ತಿರುವುದು ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಸಂತಸ ಮೂಡಿಸಿದೆ.