ಚಿಕ್ಕಬಳ್ಳಾಪುರ: ಹಾಲಿ ಶಾಸಕ ವಿ.ಮುನಿಯಪ್ಪ ಆಗಾಗ ತೋರುವ ದ್ವಂದ್ವ ನಿಲುವು, ಸಮಾಜ ಸೇವಕರಿಗೆ ಟಿಕೆಟ್ ಕೊಡಿಸಲು ಪ್ರಭಾವಿ ನಾಯಕರ ಬಿಗಿಪಟ್ಟು, ತೀವ್ರ ಕಂಗ್ಗಟಾಗಿ ಪರಿಣಮಿಸಿದ ಶಿಡ್ಲಘಟ್ಟ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ, ಕಾಂಗ್ರೆಸ್ 5ನೇ ಪಟ್ಟಿಯತ್ತ ಎಲ್ಲರ ಚಿತ್ತ.
ಹೌದು, ಜಿಲ್ಲೆ ಯಲ್ಲಿ ದಶಕಗಳ ಕಾಲ ಆಳ್ವಿಕೆ ನಡೆಸಿರುವ ಶಿಡ್ಲಘಟ್ಟ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆಗೆ ಒಂದೇ ದಿನ ಬಾಕಿ ಇದ್ದರೂ ಇನ್ನೂ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಪ್ರಕಟ ಆಗದೇ ಇರುವುದರಿಂದ ಕ್ಷೇತ್ರದ ನಿಷ್ಠಾವಂತ ಕಾರ್ಯಕರ್ತರಲ್ಲಿ ಆಕ್ರೋಶ, ಅಸಮಾಧಾನ ಮುಂದುವರೆದಿದೆ.
ಜಿಲ್ಲೆಯ ಚಿಂತಾಮಣಿ, ಗೌರಿಬಿದನೂರು, ಚಿಂತಾಮಣಿ ಸೇರಿ 3 ಕ್ಷೇತ್ರಗಳಿಗೆ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಪ್ರಕಟಿಸಿದ್ದ ಕಾಂಗ್ರೆಸ್, 3ನೇ ಪಟ್ಟಿಯಲಿ ಕುತೂಹಲ ಕೆರಳಿಸಿದ್ದ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿರುದ್ಧೇ ಅಚ್ಚರಿ ಅಭ್ಯರ್ಥಿಯಾಗಿ ಪ್ರದೀಪ್ ಈಶ್ವರ್‌ರನ್ನು ಘೋಷಿಸಿತ್ತು. ನಾಲ್ಕನೇ ಪಟ್ಟಿ ಕೂಡ ಮಂಗಳವಾರ ಬಿಡುಗಡೆಗೊಳಿಸಿದ್ದು, ಅದರಲ್ಲೂ ಶಿಡ್ಲಘಟ್ಟಕ್ಕೆ ಅಭ್ಯರ್ಥಿ ಘೋಷಿಸಿಲ್ಲ. ಶಿಡ್ಲಘಟ್ಟದ ಹಾಲಿ ಶಾಸಕ ವಿ.ಮುನಿಯಪ್ಪ ವಯಸ್ಸಿನ ಕಾರಣಕ್ಕೆ ತಾವು ಸಕ್ರಿಯ ರಾಜಕಾರಣದಿಂದ ದೂರು ಉಳಿಯುವುದಾಗಿ ಹೇಳಿದ್ದಾರೆ.
ಅಲ್ಲದೇ ತಮ್ಮ ಪುತ್ರ ಶಶಿಧರ್‌ಗೆ ರಾಜಕಾರಣದ ಮೇಲೆ ಆಸಕ್ತಿ ಇಲ್ಲದ ಕಾರಣ ಕುಟುಂಬ ರಾಜಕಾರಣದಿಂದ ನಿವೃತ್ತಿಯ ಅಂಚಿಗೆ ತಲುಪಿದೆ. ಆದರೆ, ಕ್ಷೇತ್ರದಲ್ಲಿ ಸಮಾಜ ಸೇವೆಯ ಮೂಲಕ ಸಾಕಷ್ಟು ಮಂದಿ ಕಾಂಗ್ರೆಸ್ ಆಕಾಂಕ್ಷಿಗಳು ಇರುವ ಕಾರಣ ಒಬ್ಬರಿಗೊಬ್ಬರಿಗೆ ರಾಜಕೀಯವಾಗಿ ಮೇಲ್ಟಟ್ಟದಲ್ಲಿ ಗಾಡ್ ಫಾದರ್‌ಗಳು ಇರುವ ಕಾರಣ ಟಿಕೆಟ್ ಹಂಚಿಕೆ ವಿಚಾರ ಇನ್ನೂ ಗೊಂದಲದ ಗೂಡಾಗಿಯೇ ಮುಂದುವರೆದಿದೆ. ರಾಜೀವ್‌ಗೌಡ ಪರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿಂತರೆ, ಪುಟ್ಟು ಅಂಜಿನಪ್ಪ ಪರ ಕೃಷ್ಣಬೈರೇಗೌಡ ಇದ್ದಾರೆ.
ಮತ್ತೂಂದು ಕಡೆ ಕೋಲಾರಕ್ಕೆ ಈಗಾಗಲೇ ಮುಳಬಾಗಿಲಿನ ಮಾಜಿ ಶಾಸಕ ಕೊತ್ತೂರು ಮಂಜುನಾಥರನ್ನು ಕಣಕ್ಕೆ ಇಳಿಸಿರುವುದರಿಂದ ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ ಎನ್ನುವಂತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ರನ್ನು ಕೊನೆ ಗಳಿಗೆಯಲ್ಲಿ ಕಣಕ್ಕಿಳಿಸುತ್ತಾರಾ ಎನ್ನುವ ಕುತೂಹಲವು ಟಿಕೆಟ್ ವಿಳಂಬದ ಹಿಂದಿದೆ. ಅಲ್ಲದೇ ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆಂಬ ಕುತೂಹಲ ಇರುವುದರಿಂದ ಅವರ ಸ್ಪರ್ಧೆ ಬಗ್ಗೆಯೂ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದೆ.