ಶಿಡ್ಲಘಟ್ಟ : ಕೈಯ್ಯಿಂದ ಜಾರಿದ ಮೊಬೈಲ್ ಬಾವಿಯೊಳಗೆ ಬಿದ್ದಿದ್ದು ಮೊಬೈಲ್‍ನನ್ನು ಎತ್ತಿಕೊಳ್ಳಲೆಂದು ಯುವಕ ಬಾವಿಯೊಳಗೆ ಇಳಿದಿದ್ದಾನೆ. ಜತೆಯಲ್ಲಿ ಯಾರೂ ಇಲ್ಲದೆ ಒಬ್ಬನೆ ಬಾವಿಗೆ ಇಳಿದಿದ್ದು ಅದೇನಾಯ್ತೊ ಗೊತ್ತಿಲ್ಲ ಯುವಕ ಮೇಲೆ ಬರಲಾಗದೆ ಬಾವಿಯೊಳಗೆ ಸಿಲುಕಿದ್ದಾನೆ ಆತನನ್ನು ಮೇಲೆತ್ತಲು ಅಗ್ನಿಶಾಮಕ ಸಿಬ್ಬಂದಿಯು ಮಧ್ಯಾಹ್ನ ದಿಂದ ಹರಸಾಹಸ ಪಡುತ್ತಿದ್ದಾರೆ.
ತಾಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿಯ ಗುಡಿಹಳ್ಳಿಯಲ್ಲಿ 35 ವರ್ಷದ ಅನಿಲ್ ಕುಮಾರ್ ಎಂಬಾತನು ತೋಟದಲ್ಲಿನ ಶೆಡ್ ಬಳಿ ಕೆಲಸ ಮಾಡುವಾಗ ಮೊಬೈಲ್ ಜಾರಿ ಶೆಡ್ ಒಳಗಿರುವ ಕಿರು ಬಾವಿಯಲ್ಲಿ ಬಿದ್ದಿದೆ ಬಾವಿಯೊಳಗೆ ಬಿದ್ದ ಮೊಬೈಲನ್ನು ತೆಗೆದುಕೊಳ್ಳಲು ಅನಿಲ್ ಕುಮಾರ್ ಒಬ್ಬನೆ ಶೆಡ್ ಒಳಗಿರುವ ಕಿರು ಬಾವಿಗೆ ಇಳಿದಿದ್ದಾನೆ ಆದರೆ ಆತ ಬಾವಿಯಿಂದ ಮೇಲೆ ಬರಲಾಗದೆ ಅಲ್ಲೆ ಸಿಲುಕಿದ್ದಾನೆ.
ಬೆಳಗ್ಗೆ ಮನೆಯಿಂದ ಹೊರ ಹೋದವನು ಮಧ್ಯಾಹ್ನ ಊಟದ ಸಮಯವಾದರೂ ಬರಲಿಲ್ಲ ಎಂದು ಮನೆಯವರು ಅನಿಲ್ ನನ್ನು ಹುಡುಕಿಕೊಂಡು ತೋಟದ ಬಳಿ ಬಂದಾಗ ಕಿರು ಬಾವಿಯ ಬಳಿ ಹಗ್ಗ ಇಳಿ ಬಿಟ್ಟಿರುವುದು ಕಂಡು ಬಂದಿದೆ ಅಲ್ಲಿಯೆ ಅನಿಲ್ ಕುಮಾರ್ ಚಪ್ಪಲಿಗಳು ಸಹ ಕಾಣಿಸಿದ್ದು ಅನುಮಾನಗೊಂಡು ಅನಿಲ್ ಕುಮಾರ್ ಅಣ್ಣನೂ ಬಾವಿಯೊಳಗೆ ಇಳಿಯುವ ಪ್ರಯತ್ನ ಮಾಡಿದ್ದಾನೆ ಆದರೆ ಉಸಿರುಗಟ್ಟಿ ಇಳಿಯಲು ಸಾಧ್ಯವಾಗದೆ ಮೇಲೆ ಬಂದಿದ್ದಾನೆ.
ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಯು ಸ್ಥಳಕ್ಕೆ ಆಗಮಿಸಿ ಅನಿಲ್ ಕುಮಾರ್ ನನ್ನು ಮೇಲೆತ್ತಲು ಹರಸಾಹಸ ಪಡುತ್ತಿದ್ದಾರೆ ಕಿರುಬಾವಿಯೊಳಗೆ ಕತ್ತಲು ಕವಿದಿದ್ದು ಆಳದಲ್ಲಿ ಉಸಿರುಗಟ್ಟುವ ವಾತಾವರಣವು ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ, ಸ್ಕ್ಯಾನರ್ ಮೂಲಕ ಕಿರು ಬಾವಿಯೊಳಗೆ ಹುಟುಕಾಟ ನಡೆಸಿದ್ದು ಬಾವಿಯ ಒಳಗೆ ನಿತ್ರಾಣಗೊಂಡು ಕುಳಿತಂತೆ ಕಾಣಿಸಿದ್ದಾನೆ ಎನ್ನಲಾಗುತ್ತಿದ್ದು ಆತನನ್ನು ಮೇಲಕ್ಕೆತ್ತುವ ಎಲ್ಲ ರೀತಿಯ ಸಾಧ್ಯಾಸಾಧ್ಯತೆಗಳ ಬಗ್ಗೆಯೂ ಗಮನ ಹರಿಸಲಾಗುತ್ತಿದೆ.
ಸ್ಥಳದಲ್ಲಿ ಕುಟುಂಬದವರು, ಗ್ರಾಮಸ್ಥರು ಹಾಗೂ ನೆರೆ ಹೊರೆಯವರು ಜಮಾವಣೆಯಾಗುತ್ತಿದ್ದು ಕ್ಷಣ ಕ್ಷಣಕ್ಕೂ ಕುತೂಹಲ ಆತಂಕ ಮನೆ ಮಾಡುತ್ತಿದೆ ಅಗ್ನಿಶಾಮಕದಳದ ಸಿಬ್ಬಂದಿ ಯುವಕನನ್ನು ಮೇಲೆತ್ತಲು ಪ್ರಯತ್ನ ಮಾಡಿದ್ದಾರೆ ಯುವಕ ಸಿಗಲಿಲ್ಲ ಹೀಗಾಗಿ ಎನ್.ಡಿ.ಆರ್.ಎಫ್ ತಂಡವನ್ನು ಕರೆಸಲಾಗಿದೆಯೆಂದು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‍ಐ ಸತೀಶ್ ಅವರು ತಿಳಿಸಿದ್ದಾರೆ.