Advertisement

ಶಿಬಾಜೆ: ಗ್ರಾ.ಪಂ. ನೀರಿನ ಟ್ಯಾಂಕ್‌ಗೂ ವಿಷ

11:18 PM Dec 13, 2019 | mahesh |

ನೆಲ್ಯಾಡಿ: ಶಿಬಾಜೆ ಪೆರ್ಲ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಕುಡಿಯುವ ನೀರಿನ ಬಾವಿಗೆ ವಿಷ ಹಾಕಿದ ಪ್ರಕರಣದ ಬೆನ್ನಲ್ಲೇ ಶಿಬಾಜೆ ಗ್ರಾಮ ಪಂಚಾಯತ್‌ನ ಕುಡಿಯುವ ನೀರಿನ ಟ್ಯಾಂಕ್‌ಗೂ ವಿಷ ಬೆರೆಸಿರುವುದು ಶುಕ್ರವಾರ ಅಪರಾಹ್ನ ಬೆಳಕಿಗೆ ಬಂದಿದೆ.

Advertisement

ಪೆರ್ಲ ಸಮೀಪದ ಬಟ್ಟಾಜೆ ಎಂಬಲ್ಲಿ ಕಪಿಲಾ ನದಿ ದಡದಲ್ಲಿ ಶಿಬಾಜೆ ಗ್ರಾ.ಪಂ. ವತಿಯಿಂದ ಕುಡಿಯುವ ನೀರಿಗಾಗಿ ನಿರ್ಮಾಣವಾಗಿರುವ ಟ್ಯಾಂಕ್‌ಗೂ ವಿಷ ಬೆರೆಸಲಾಗಿದೆ. ನದಿ ದಡದಲ್ಲಿರುವ ಈ ಬೃಹತ್‌ ಟ್ಯಾಂಕ್‌ನಿಂದ ಪಂಪ್‌ ಮೂಲಕ ನೀರು ಲಿಫ್ಟ್ ಮಾಡಿ ಪೆರ್ಲದಲ್ಲಿರುವ ಇನ್ನೊಂದು ಟ್ಯಾಂಕ್‌ಗೆ ತುಂಬಿಸಲಾಗುತ್ತದೆ. ಇದರಿಂದ ಪೆರ್ಲ ಸ.ಹಿ.ಪ್ರಾ. ಶಾಲೆ ಸೇರಿದಂತೆ ಸುತ್ತಲಿನ ಸುಮಾರು 70 ಮನೆಗಳಿಗೆ ನೀರು ಪೂರೈಕೆಯಾಗುತ್ತದೆ.

ಶುಕ್ರವಾರ ಬೆಳಗ್ಗೆ ಟ್ಯಾಂಕ್‌ನಿಂದ ಪೂರೈಕೆಯಾದ ನೀರು ದುರ್ವಾಸನೆಯಿಂದ ಕೂಡಿರುವುದು ನೀರು ನಿರ್ವಾಹಕ ನಾರಾಯಣ ಪೂಜಾರಿಯವರ ಗಮನಕ್ಕೆ ಬಂದಿದ್ದು, ಟ್ಯಾಂಕ್‌ನ ನೀರನ್ನು ಪರಿಶೀಲನೆ ನಡೆಸಿದಾಗ ವಾಸನೆ ಬಂದುದ್ದಲ್ಲದೇ ನೊಣಗಳು ಸತ್ತಿರುವುದು ಗಮನಕ್ಕೆ ಬಂದಿದೆ. ಬಳಿಕ ಅವರು ಕಪಿಲಾ ನದಿ ದಡದಲ್ಲಿ ಪಂಪ್‌ ಅಳವಡಿಸಿದ ಟ್ಯಾಂಕ್‌ನ್ನು ಪರಿಶೀಲಿಸಿದಾಗ ಅದರೊಳಗೆ ಮೀನುಗಳು ಸತ್ತಿರುವುದು ಕಂಡುಬಂದಿದೆ. ಅಲ್ಲದೇ ಟ್ಯಾಂಕ್‌ನ ನೀರು ಬಣ್ಣ ಕಳೆದುಕೊಂಡಿದ್ದು, ಟ್ಯಾಂಕ್‌ನೊಳಗಿಂದ ನೊಣಗಳು ಹಾರುತ್ತಿರುವುದು ಕಾಣಿಸಿದೆ. ಟ್ಯಾಂಕ್‌ಗೆ ಬರುವ ಪೈಪನ್ನು ನದಿಯಿಂದ ಮೇಲೆತ್ತಿರುವುದು ಮತ್ತು ಹೆಜ್ಜೆ ಗುರುತುಗಳು ಕಂಡಿವೆ.

ಪೆರ್ಲ ಶಾಲಾ ಬಾವಿಗೆ ವಿಷ ಬೆರೆಸಿದ ಘಟನೆಯ ಬೆನ್ನಲ್ಲೇ ಸಮೀಪದ ಮನೆಗಳಿಗೆ ನೀರು ಪೂರೈಸುವ ಟ್ಯಾಂಕ್‌ಗೂ ವಿಷ ಬೆರೆಸಿರುವ ಪ್ರಕರಣ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಘಟನಾ ಸ್ಥಳಕ್ಕೆ ಶಿಬಾಜೆ ಗ್ರಾ.ಪಂ. ಅಧ್ಯಕ್ಷೆ ಸುಶೀಲಾ, ಸದಸ್ಯ ರಮೇಶ್‌ ಗೌಡ ಕುರುಂಜ, ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ, ವೃತ್ತ ನಿರೀಕ್ಷಕ ಸಂದೇಶ್‌, ಧರ್ಮಸ್ಥಳ ಠಾಣಾ ಎಸ್‌ಐ ಓಡಿಯಪ್ಪ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆರೋಪಿಗಳ ಪತ್ತೆಗೆ ಆಗ್ರಹಿಸಿ ಪ್ರತಿಭಟನೆ
ಪೆರ್ಲ ಸರಕಾರಿ ಶಾಲೆಯ ಕುಡಿಯುವ ನೀರಿನ ಬಾವಿಗೆ ವಿಷ ಹಾಕಿದ ಪ್ರಕರಣದ ಆರೋಪಿಗಳ ಶೀಘ್ರ ಪತ್ತೆಗೆ ಆಗ್ರಹಿಸಿ ಶಾಲೆಯ ವಿದ್ಯಾರ್ಥಿಗಳು ಮತ್ತು ಹೆತ್ತವರು ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಬೆಳಗ್ಗೆ ವಿದ್ಯಾರ್ಥಿಗಳು ಶಿಬಾಜೆ ಪೇಟೆಯಿಂದ ಶಾಲೆಯವರೆಗೆ ಮೆರವಣಿಗೆ ನಡೆಸಿ ಪ್ರತಿಭಟಿಸಿದರು. ಪ್ರಕರಣ ನಡೆದು 12 ದಿನ ಕಳೆದರೂ ಆರೋಪಿಗಳ ಪತ್ತೆಯಾಗದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಪೊಲೀಸ್‌, ಶಿಕ್ಷಣ ಮತ್ತು ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿದರು. ಅಪರಾಹ್ನ 2.30ಕ್ಕೆ ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಉಪತಹಶೀಲ್ದಾರ್‌ ಪ್ರತೀಷ್‌ ಕುಮಾರ್‌ ಮತ್ತು ವೃತ್ತ ನಿರೀಕ್ಷಕ ಸಂದೇಶ್‌ ಮನವಿ ಸ್ವೀಕರಿಸಿ ಆರೋಪಿಗಳ ಪತ್ತೆಗೆ ಪ್ರಯತ್ನಿಸುವುದಾಗಿ ನೀಡಿದ ಭರವಸೆ ಮೇರೆಗೆ ಪ್ರತಿಭಟನೆ ಹಿಂದೆಗೆದುಕೊಳ್ಳಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next