Advertisement

ಲೋಕಾಯುಕ್ತ ಕ್ರಿಯಾಶೀಲಗೊಳಿಸಲು ನ್ಯಾ.ವಿಶ್ವನಾಥ ಶೆಟ್ಟಿ ಕ್ರಮ

10:35 AM Feb 26, 2017 | |

ಬೆಂಗಳೂರು: ಒಂದೂವರೆ ವರ್ಷದಿಂದ ಕಳೆಗುಂದಿರುವ ಲೋಕಾಯುಕ್ತವನ್ನು ಮತ್ತೆ ಕ್ರಿಯಾಶೀಲಗೊಳಿಸಲು ಲೋಕಾಯುಕ್ತ ನ್ಯಾ. ಪಿ.ವಿಶ್ವನಾಥ ಶೆಟ್ಟಿ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಸರ್ಕಾರಿ ಯೋಜನೆಗಳನ್ನು ಪಡೆಯುವಲ್ಲಿ ಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆ ಮತ್ತು ಯೋಜನೆಗಳು
ಜನರಿಗೆ ತಲುಪುವಂತಾಗಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರಕ್ಕೆ ಸಮಗ್ರ ವರದಿ ನೀಡಲು ತೀರ್ಮಾನಿಸಿದ್ದಾರೆ.

Advertisement

ಆಸ್ಪತ್ರೆಗಳ ಪರಿಶೀಲನೆ: ಸರ್ಕಾರಿ ಆಸ್ಪತ್ರೆಗಳ ಕುರಿತು ಬಂದ ದೂರುಗಳನ್ನು ಆಧರಿಸಿ ಈಗಾಗಲೇ ಕೆಲವು ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳನ್ನು ಪರಿಶೀಲಿಸಿದ್ದಾರೆ. ಉಡುಪಿ, ಮಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಭೇಟಿ ನೀಡಿರುವ ಲೋಕಾಯುಕ್ತ ನ್ಯಾ.ವಿಶ್ವನಾಥ ಶೆಟ್ಟಿ ನೇತೃತ್ವದ ತಂಡ, ಆಸ್ಪತ್ರೆಗಳಲ್ಲಿನ ನೈಜ ಸ್ಥಿತಿ ಹಾಗೂ ಸಮಸ್ಯೆಗಳನ್ನು ಪಟ್ಟಿ ಮಾಡಿದ್ದಾರೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಹಾಗೂ ಸಾಧ್ಯವಾದಷ್ಟು ಸ್ವಾಭಾವಿಕ ಹೆರಿಗೆ ಮಾಡಲು ಪ್ರಾಶಸ್ತ್ಯ ನೀಡಬೇಕೆಂದು ವೈದ್ಯರಿಗೆ ಸೂಚಿಸಿದ್ದಾರೆ.

ಆಸ್ಪತ್ರೆಗಳಲ್ಲಿ ಒದಗಿಸುವ ಉಚಿತ ಆಹಾರ ಕಳಪೆಯಾಗಿದೆ ಎಂಬ ದೂರುಗಳು ಬಂದಿದ್ದು,ಗುಣಮಟ್ಟದ ಕುರಿತು ಅನುಮಾನವಿದೆ. ಹೀಗಾಗಿ ಹಿರಿಯ ವೈದ್ಯರು ಆಗಾಗ್ಗೆ ಆಸ್ಪತ್ರೆಗೆ ಬರುವ ಊಟವನ್ನು ಸೇವಿಸಿ ಪರಿಶೀಲಿಸಬೇಕೆಂದು ಲೋಕಾಯುಕ್ತರು ಖಡಕ್‌ ಸೂಚನೆ ನೀಡಿದ್ದಾರೆ.

ಅಲ್ಲದೇ, ತಾವೂ ಆಗಾಗ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಸೇವೆ ಹಾಗೂ ರೋಗಿಗಳ ಸಮಸ್ಯೆಗಳನ್ನು ಇತ್ಯರ್ಥಪಡಿಸಿರುವ ಬಗ್ಗೆ ವರದಿ ನೀಡಲು ಸೂಚಿಸಲಾಗಿದೆ ಎಂದು ಲೋಕಾಯುಕ್ತ ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ನುರಿತ ವೈದ್ಯರ ಕೊರತೆ!: ಬೆಂಗಳೂರಿನ ವಿಕ್ಟೋರಿಯಾ, ಜಯನಗರ, ಬೌರಿಂಗ್‌, ಕೆ.ಸಿ.ಜನರಲ್‌ ಆಸ್ಪತ್ರೆಯ ವೈದ್ಯಾಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಕೆಲವೆಡೆ ಕಟ್ಟಡ ಸಮಸ್ಯೆ ಹಾಗೂ ವೈದ್ಯರ ಕೊರತೆ ಎದ್ದು ಕಾಣುತ್ತಿದೆ. ಈ ಎಲ್ಲಾ ಅಂಶಗಳನ್ನು ಲೋಕಾಯುಕ್ತರು ಪಟ್ಟಿ ಮಾಡಿದ್ದಾರೆ. ಮುಂದಿನ ಸೋಮವಾರ ನಿಮ್ಹಾನ್ಸ್‌ ಆಸ್ಪತ್ರೆ ಅಧಿಕಾರಿಗಳ ಜತೆ ಸಭೆ ನಡೆಸಲಾಗುವುದು.ನಗರದ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೂ ಭೇಟಿ ನೀಡಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ. 

Advertisement

ಬಾಕಿ ಪ್ರಕರಣ ಮೇಲೆ ಗಮನ: ಸಂಸ್ಥೆಯಲ್ಲಿ ಬಾಕಿ ಉಳಿದಿರುವ 300ಕ್ಕೂ ಹೆಚ್ಚು ಪ್ರಕರಣಗಳ ತನಿಖೆಯನ್ನು ಮುಂದಿನ 2 ತಿಂಗಳಲ್ಲಿ ಪೂರ್ಣಗೊಳಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಖಡಕ್‌ ಸೂಚನೆ ನೀಡಿದ್ದಾರೆ. ಪ್ರಕರಣವನ್ನು ಫಾಲೋ ಅಪ್‌ ಮಾಡುವ ಹಿರಿಯ ಅಧಿಕಾರಿಗಳೇ ಕೋರ್ಟ್‌ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.

ಲೋಕಾಯುಕ್ತರ ನೇಮಕದ ಬಳಿಕ ಬರುತ್ತಿರುವ ದೂರುಗಳ ಸಂಖ್ಯೆಯೂ ಹೆಚ್ಚಿದೆ. ಲೋಕಾಯುಕ್ತರ ಅಧಿಕಾರ ವ್ಯಾಪ್ತಿಯಲ್ಲಿ ಬಾಕಿ ಇರುವ ಎಲ್ಲ ದೂರುಗಳ ಪರಿಶೀಲನೆ ನಡೆಯುತ್ತಿದೆ. 40 ಸಾವಿರಕ್ಕಿಂತ ಹೆಚ್ಚು ವೇತನ ಪಡೆಯುವ ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳು ಹಾಗೂ ಶಾಸಕರ ಮೇಲಿನ ದೂರುಗಳನ್ನು ಲೋಕಾಯುಕ್ತರೇ ಸ್ವತಃ ವಿಚಾರಣೆ ನಡೆಸಲಿದ್ದಾರೆ. ಲೋಕಾಯುಕ್ತಕ್ಕೆ ಪರ್ಯಾಯ ಎನ್ನಲಾದ ಎಸಿಬಿ ಅಧಿಕಾರಿಗಳ ವಿರುದ್ಧ ದೂರುಗಳು ಬಂದರೂ ವಿಚಾರಣೆ ನಡೆಸಿ ಕ್ರಮ ಜರುಗಿಸಲು ನಿರ್ಧರಿಸಿದ್ದಾರೆಂದು ಸಂಸ್ಥೆ ಮೂಲಗಳು ತಿಳಿಸಿವೆ.

ಅಲ್ಲದೆ, ವಿವಿಧ ಜಿಲ್ಲೆಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ದಂಧೆ, ಚೆಕ್‌ ಪೋಸ್ಟ್‌ಗಳಲ್ಲಿ ಅನಧಿಕೃತ ಸುಂಕ ವಸೂಲಿ, ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಸೇವಾ ಸೌಲಭ್ಯದ ವಿಳಂಬ, ಭ್ರಷ್ಟ ಸರ್ಕಾರಿ ನೌಕರರ ಬಗ್ಗೆಯೂ ನಿಗಾ ವಹಿಸಲಾಗಿದೆ ಎಂದು ಸಂಸ್ಥೆಯ ಮೂಲಗಳು ಹೇಳಿವೆ.

ಬಹುತೇಕ ದೂರುಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ದೊರೆಯದಿರುವುದು, ಶಿಕ್ಷಣ ಹಕ್ಕು ಕಾಯ್ದೆ ದುರುಪಯೋಗ, ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗ‌ಳಲ್ಲಿ ಅವ್ಯವಹಾರ, ಸಾರಿಗೆ ಇಲಾಖೆ ಕಚೇರಿಗಳಲ್ಲಿ ಲಂಚಗುಳಿತನಕ್ಕೆ ಸಂಬಂಧಿಸಿವೆ. ಹೀಗಾಗಿ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ,ಸಾರ್ವಜನಿಕರ ಅಹವಾಲುಗಳನ್ನು ಇತ್ಯರ್ಥಪಡಿಸಲಾಗುವುದು. ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸಲು ಇರುವ ತೊಡಕು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮಗ್ರ ವರದಿ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ನೀಡಲಾಗುವುದು.
– ನ್ಯಾ.ಪಿ.ವಿಶ್ವನಾಥ ಶೆಟ್ಟಿ, ಲೋಕಾಯುಕ್ತರು

– ಮಂಜುನಾಥ ಲಘುಮೇನಹಳ್ಳಿ 

Advertisement

Udayavani is now on Telegram. Click here to join our channel and stay updated with the latest news.

Next