Advertisement

ಹೂಗಾರ ಪ್ಲಾಟ್ ನಿವಾಸಿಗಳಿಂದ ಶೆಟ್ಟರ ಭೇಟಿ

09:24 AM Jun 16, 2019 | Suhan S |

ಹುಬ್ಬಳ್ಳಿ: ಮನೆಗಳನ್ನು ಕಳೆದುಕೊಂಡ ಇಲ್ಲಿನ ಬೆಂಗೇರಿಯ ಹೂಗಾರ ಪ್ಲಾಟ್ ನಿವಾಸಿಗಳು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರ ನಿವಾಸಕ್ಕೆ ಶನಿವಾರ ತೆರಳಿ ಸಂಕಷ್ಟ ತೋಡಿಕೊಂಡರು.

Advertisement

ಹಲವು ವರ್ಷಗಳಿಂದ ಹೂಗಾರ ಪ್ಲಾಟ್‌ನಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಜೀವನ ಮಾಡುತ್ತಿದ್ದೆವು. ಹಿಂದೆ ಹಣ ನೀಡಿ ನಿವೇಶನಗಳನ್ನು ಖರೀದಿ ಮಾಡಲಾಗಿದೆ. ಆದರೆ ಪೊಲೀಸರು ಏಕಾಏಕಿ ಆಗಮಿಸಿ ಮನೆ ತೆರವುಗೊಳಿಸುವಂತೆ ಸೂಚನೆ ನೀಡಿದರು. ಎಷ್ಟೇ ಮನವಿ ಮಾಡಿದರೂ ಅಳಲು ಕೇಳಲಿಲ್ಲ. ಮೂರು ಗಂಟೆ ಸಮಯಾವಕಾಶ ನೀಡಿ ಜೆಸಿಬಿಗಳಿಂದ ಮನೆಗಳನ್ನು ನೆಲಸಮ ಮಾಡಿದ್ದಾರೆ. ಇದೀಗ ಮನೆಗಳಿಲ್ಲದೆ ಬೀದಿಗೆ ಬಿದ್ದಿದ್ದು, ಅವರಿವರ ಮನೆಯಲ್ಲಿ ತಾತ್ಕಾಲಿಕವಾಗಿ ನೆಲೆಸಿದ್ದೇವೆ. ನಮಗಾದ ಅನ್ಯಾಯ ಸರಿಪಡಿಸುವಂತೆ ಮನವಿ ಮಾಡಿದರು.

ಜಗದೀಶ ಶೆಟ್ಟರ ಮಾತನಾಡಿ, ಮನೆ ತೆರವುಗೊಳಿಸುವ ಮುಂಚೆ ಈ ಬಗ್ಗೆ ನನ್ನ ಬಳಿ ಚರ್ಚಿಸಿದ್ದರೆ ಏನಾದರೂ ಯೋಚನೆ ಮಾಡಬಹುದಿತ್ತು. ನ್ಯಾಯಾಲಯದ ಮೊರೆ ಹೋಗಿ ಮನೆ ತೆರವುಗೊಳಿಸದಂತೆ ತಡೆಯಾಜ್ಞೆ ತರಬಹುದಿತ್ತು. ಜನಸಾಮಾನ್ಯರಿಗೆ ಈ ಬಗ್ಗೆ ಅರಿವು ಇರುವುದಿಲ್ಲ. ಕನಿಷ್ಠ ಅಲ್ಲಿನ ಮುಖಂಡರಾದರೂ ನನ್ನ ಗಮನಕ್ಕೆ ಯಾಕೆ ತರಲಿಲ್ಲ. ಮನೆ ತೆರವುಗೊಳಿಸಲು ನ್ಯಾಯಾಲಯದ ಆದೇಶ ಸೇರಿದಂತೆ ಏನಾದರೂ ದಾಖಲೆಗಳಿದ್ದರೆ ನೀಡುವಂತೆ ಸೂಚಿಸಿದರು.

ಸುಳ್ಳ ರಸ್ತೆಯಲ್ಲಿ ಆಶ್ರಯ ಮನೆ ನಿರ್ಮಿಸುವ ಕುರಿತು ಭೂಮಿ ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದೀಗ ಮನೆ ಕಳೆದುಕೊಂಡ ಹೂಗಾರ ಪ್ಲಾಟ್ ನಿವಾಸಿಗಳಿಗೆ ಈ ಯೋಜನೆಯಲ್ಲಿ ಪರಿಗಣಿಸುವುದಾಗಿ ಭರವಸೆ ನೀಡಿದರು.

ಹಿಂದೆ ನಿಮ್ಮಂತೆಯೇ ಶಬರಿ ಹಾಗೂ ಚಂದನ ಕಾಲೋನಿಯ ಜನರು ಸಮಸ್ಯೆಯಲ್ಲಿದ್ದರು. ಅಕ್ರಮ ಮನೆಗಳು ಎಂದು ತೆರವುಗೊಳಿಸುವ ಸಿದ್ಧತೆ ನಡೆದಿತ್ತು. ಆ ಸಂದರ್ಭದಲ್ಲಿ ನ್ಯಾಯಾಲಯ ಮೊರೆ ಹೋಗಿ ತಡೆಯಾಜ್ಞೆ ತರಲಾಯಿತು. ಇದರಿಂದ ಅಲ್ಲಿನ ಜನರು ನೆಮ್ಮದಿಯಿಂದ ಜೀವನ ಮಾಡುತ್ತಿದ್ದಾರೆ. ಆಗಿರುವ ಅನ್ಯಾಯಕ್ಕೆ ನ್ಯಾಯ ಪಡೆದುಕೊಳ್ಳುವ ಪ್ರಯತ್ನ ಮಾಡೋಣ. ನಿಮ್ಮ ಪರವಾಗಿ ವಾದ ಮಾಡಿದ ನ್ಯಾಯವಾದಿಯೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳೋಣ ಎಂದರು.

Advertisement

ಮಾಜಿ ಮಹಾಪೌರ ವೀರಣ್ಣ ಸವಡಿ, ಕೊಳಚೆ ನಿರ್ಮೂಲನಾ ಮಂಡಳಿ ಎಇಇ ಕೃಷ್ಣಮೂರ್ತಿ, ಎಇ ಸುರೇಶ ಹಿರೇಮಠ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next