ನಂಜನಗೂಡಿನಲ್ಲಿ ಕೋವಿಡ್ 19 ಕಂಟಕವಾಯಿತು. ಸೋಂಕು ಹರಡದಂತೆ ತಡೆಯಲು ಅಲ್ಲಿನ ಚೆಕ್‌ಪೋಸ್ಟ್ ಬಳಿ ವಿವಿಧ ಇಲಾಖೆಗಳ ನೌಕರರು ಕೆಲಸಕ್ಕೆ ನಿಂತರು. ಅವರಿಗೆಲ್ಲಾ ಊಟ-ತಿಂಡಿ ಬೇಕಲ್ಲವೇ? ಈ ಸಂದರ್ಭದಲ್ಲಿ ತಕ್ಷಣ ನೆರವಿಗೆ ಬಂದವರು ಜಿತೇಂದ್ರ ಶೆಟ್ಟರು, ಗುರುಪ್ರಸಾದರು. ಸುಮಾರು 60 ದಿನಗಳ ಕಾಲ, ಉಚಿತವಾಗಿ ಪುಷ್ಕಳ ಭೋಜನ ಬಡಿಸಿದರು..
ಮಾರ್ಚ್ ತಿಂಗಳ ಕೊನೆಯಲ್ಲಿ ಕೋವಿಡ್ 19 ನಂಜನಗೂಡನ್ನು ಅಪ್ಪಳಿಸಿ, ಬೊಬ್ಬಿರಿಯುತ್ತಿದ್ದಾಗ ಅಲ್ಲಿನ ಸಾವಿರಾರು ಜನ ಆತಂಕಕ್ಕೆ ಒಳಗಾಗಿದ್ದು ಸಹಜ. ಅಂಥ ಸಂದರ್ಭದಲ್ಲೇ ಜೀವಮಾನದಲ್ಲೇ ಕಂಡು ಕಾಣದ ಲಾಕ್‌ಡೌನ್ ಜಾರಿಯಾಯಿತು. ಪರಿಣಾಮ, ಯಾರೂ, ಎಲ್ಲೂ ಹೋಗದಂತೆ ನಿರ್ಬಂಧ ಹೇರಲಾಗಿತ್ತು. ಇಂಥ ಸಂದಿಗಟಛಿ ಸಮಯದಲ್ಲಿ ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಬಹ ಳಷ್ಟು ಜನ ಉಳ್ಳವರು, ಓಡೋಡಿ ಬಂದು ನಿರ್ಗತಿಕರ ನೆರವಿಗೆ ನಿಂತರು.
ಅದರಲ್ಲಿ ಈ ಗುರುಪ್ರಸಾದ್ ಕೂಡ ಒಬ್ಬರು. ಇವರು ಆಯ್ಕೆ ಮಾಡಿಕೊಂಡ ಜಾಗ ಚೆಕ್‌ಪೋಸ್ಟ್ ಇವರು ಜಿತೇಂದ್ರ ಶೆಟ್ಟಿ ಒಡೆತನದ ಭರಣಿ ಕೇಟರಿಂಗ್ ಗ್ರೂಫ್ನ ಮ್ಯಾನೇಜರ್. ಲಾಕ್‌ಡೌನ್ ಆದಾಗ ಒಂದಷ್ಟು ಅಧಿಕಾರಿಗಳು ಬಂದು, ನಿಮ್ಮಲ್ಲಿ ಊಟ ಏನಾದರೂ ಸಿಗಬಹುದಾ ಅಂತ ಕೇಳಿದಾಗ ಗುರುಪ್ರಸಾದ್, ತಕ್ಷಣ ಬೆಂಗಳೂರಲ್ಲಿರುವ ಮಾಲೀಕರಿಗೆ ಫೋನು ಮಾಡಿ ಸಮಸ್ಯೆ ವಿವರಿಸಿದರು. ಆ ಕಡೆಯಿಂದ ಶೆಟ್ಟರು, “ಒಂದು ರೂ. ಪಡೆಯದೆ ಊಟ ಕೊಡಿ’ ಅಂದರು.
ಆನಂತರದಲ್ಲಿ ಮಾಲೀಕರು ಹೇಳಿದಂತೆ ಒಂದು ರೂಪಾಯಿ ಕೂಡ ಪಡೆಯದೇ ಊಟ ನೀಡುವ ಕಾರ್ಯ ಆರಂಭವಾಯಿತು. ಈ ವಿಚಾರ ಮೆಲ್ಲಗೆ ನಂಜನಗೂಡಿನಾದ್ಯಂತ ಹರಡಿತು. ತಾಂಡವಪುರ ಚೆಕ್‌ಪೋಸ್ಟ್‌ನಲ್ಲಿ ಕಾವಲಿಗೆ ನಿಂತ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್, ಆರೋಗ್ಯ ಹಾಗೂ ಗ್ರಾಮ ಪಂಚಾಯಿತಿಯ ಸುಮಾರು 30 ರಿಂದ 40 ಸಿಬ್ಬಂದಿಗಳಿಗೆ ಪ್ರತಿದಿನ ಬೆಳಗಿನಿಂದ ರಾತ್ರಿಯವರಿಗೂ ಉಚಿತವಾಗಿ ಊಟ, ತಿಂಡಿ, ಕಾಫಿ-ಟೀ, ಕುಡಿಯಲು ಬಿಸ್ಲೇರಿ ನೀರಿನ ವ್ಯವಸ್ಥೆ ಆಯಿತು.
ದಿನಕ್ಕೆ ಏನಿಲ್ಲ ಅಂದರೂ ನೂರು ಊಟ, 30 ತಿಂಡಿ, ನೂರಾರು ಕಾಫಿ-ಟೀ ನ ಸಮಾರಾಧನೆ ನಡೆಯುತ್ತಲೇ ಇತ್ತು. “ಅಷ್ಟೂ ಜನ ಸಿಬ್ಬಂದಿ, ನಮ್ಮೂರಿನ ಜನರಿಗೆ ಸೋಂಕು ಬರಬಾರದು ಅಂತ ಹಗಲು ರಾತ್ರಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಇಂಥ ಸೇವೆಗೆ ನಮ್ಮದೇನಾದರೂ ಕಿಂಚಿತ್ ಕಾಣಿಕೆ ಇರಲಿ ಅಂತ ಊಟ ಕೊಟ್ಟೆವು ಅಷ್ಟೇ’ ಅಂತಾರೆ ಗುರುಪ್ರಸಾದ್. ಇಷ್ಟೇ ಅಲ್ಲ, ಲಾಕ್‌ಡೌನ್‌ನಿಂದ ಬಸ್‌ಗಳು ರದ್ದಾದಾಗ ನಡೆಯುತ್ತಲೇ ಹೊರಟ ಬಡವರು, ದಾರಿ ಹೋಕ ರಿಗೂ ಸಹ ಊಟ ನೀಡಿದ್ದಾರೆ.
ಚೆಕ್‌ಪೋಸ್ಟ್‌ಗಳಿಗೆ ಪರರಾಜ್ಯದ ವಾಹನಗಳು ಬಂದರೆ ಸುಮ್ಮನೆ ಬಿಡೋಲ್ಲ. ಒಂದಷ್ಟು ಹೊತ್ತು ಕಾಯಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಮಕ್ಕಳು ಇರುವ ಪ್ರಯಾಣಿಕರ ಪಾಡೇನು? ಮಕ್ಕಳಿಗೆ ನೀರು ಹಾಗೂ ಹಾಲಿನ ವ್ಯವಸ್ಥೆ ಮಾಡಿದ್ದೂ ಗುರುಪ್ರಸಾದರ ಹೆಗ್ಗಳಿಕೆ. ಭರಣಿ ಕೇಟರಿಂಗ್, ಸುತ್ತಮುತ್ತಲ ಫ್ಯಾಕ್ಟರಿಗಳಿಗೆ ಊಟ ಒದಗಿಸುತ್ತದೆ. ಹೀಗಾಗಿ, ಲಾಕ್‌ಡೌನ್ ಇದ್ದರೂ, ಊಟ, ತಿಂಡಿ ಮಾಡಲೇಬೇಕಾಗಿತ್ತು. ಇದರ ಜೊತೆಗೆ, ಕೋವಿಡ್ 19 ವಾರಿಯರ್ಸ್‌ಗೂ ಕೂಡ ಅಡುಗೆ ತಯಾರಿಸಿಕೊಟ್ಟರು.
ಸುಮಾರು 60 ದಿನಗಳ ಕಾಲ ಪುಷ್ಕಳ ಭೋಜನಕ್ಕೆ ವ್ಯವಸ್ಥೆ ಮಾಡಿದ ಭರಣಿ ಮಾಲೀಕರನ್ನು ಕರೆಸಿ, ಸನ್ಮಾನಿಸಿದ್ದೂ ಆಯಿತು. “ಹಸಿದವರಿಗೆ ಅನ್ನ, ಆಹಾರ ದಾನ ಮಾಡುವುದು ನಮ್ಮ ಸಂಸ್ಕೃತಿ. ಗುರುಪ್ರಸಾದರ ಟೀಂ ಇದನ್ನೇ ಮಾಡಿದೆ. ಲಾಭವನ್ನು ಲೆಕ್ಕಹಾಕುವ ಈ ಕಾಲದಲ್ಲಿ, ದಿನಕ್ಕೆ ಕನಿಷ್ಠ ಮೂರು, ನಾಲ್ಕು ಸಾವಿರ ಮೊತ್ತದಷ್ಟು ಊಟ ಬಡಿಸಿದ್ದು, ಕೋವಿಡ್ 19 ಕಾಲದಲ್ಲಿ ಮಾಡಿರುವ ಬಹು ದೊಡ್ಡ ಕಾರ್ಯ. ಅದನ್ನು ಯಾರೂ ಮರೆಯುವಂತಿಲ್ಲ’ ಎನ್ನುತ್ತಾರೆ ಛತ್ರ ಹೋಬಳಿಯ ಉಪತಹಶೀಲ್ದಾರ ಬಾಲಸುಬ್ರಮಣ್ಯಂ.
* ಶ್ರೀಧರ್ ಆರ್. ಭಟ್