Advertisement

ಬಜಾರ್‌ ಅಭಿವೃದ್ಧಿಗೆ ಶೆಟ್ಟರ್‌ ಆರ್ಡರ್‌!

05:38 PM Aug 03, 2018 | |

ಹುಬ್ಬಳ್ಳಿ: ನಗರದ ಜನತಾ ಬಜಾರ್‌ ಹಾಗೂ ಮಹಾತ್ಮಾ ಗಾಂಧಿ ಮಾರುಕಟ್ಟೆ ಅಭಿವೃದ್ಧಿಗೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಜಗದೀಶ ಶೆಟ್ಟರ ಹೇಳಿದರು. ಸರ್ಕಿಟ್‌ಹೌಸ್‌ನಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಮೊದಲ ಹಂತದಲ್ಲಿ ಜನತಾ ಬಜಾರ್‌ ಅಭಿವೃದ್ಧಿ ಕೈಗೊಳ್ಳಬೇಕು. ಮುಂದಿನ ಹಂತದಲ್ಲಿ ಎಂ.ಜಿ. ಮಾರ್ಕೆಟ್‌ ಅಭಿವೃದ್ಧಿಗೊಳಿಸಬೇಕು. ಅಲ್ಲಿನ ಎಲ್ಲ ವ್ಯಾಪಾರಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಆರಂಭಿಸಬೇಕು ಎಂದರು.

Advertisement

ಎರಡೂ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಬೇಕೆಂಬ ಬೇಡಿಕೆ ಬಹುದಿನಗಳಿಂದ ಇದೆ. ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು ಅಲ್ಲಿನ ವ್ಯಾಪಾರಿಗಳ ಸಭೆ ನಡೆಸಿ ವ್ಯಾಪಾರಿಗಳ ಸಹಕಾರ ಪಡೆದುಕೊಂಡು ಕಾರ್ಯ ಆರಂಭಿಸಬೇಕು. ವ್ಯಾಪಾರಿಗಳಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಬೇಕು ಎಂದು ನುಡಿದರು.

ನಾಲಾ ಸಮಸ್ಯೆ ಬಗೆಹರಿಸಿ: ನಾಲಾಗಳ ಸಮೀಕ್ಷೆ ಸಂದರ್ಭದಲ್ಲಿ ನಾಲಾ ಅಕ್ಕ-ಪಕ್ಕದ ಭೂಮಿ ಅತಿಕ್ರಮಣವಾದ ಬಗ್ಗೆ ಕೂಡ ಸಮೀಕ್ಷೆ ನಡೆಸಬೇಕು. ನಮ್ಮ ಜಾಗವನ್ನು ರಕ್ಷಿಸಿಕೊಳ್ಳಬೇಕು. ಆನಂದನಗರ, ಬ್ಯಾಂಕರ್ ಕಾಲೋನಿ ಮೊದಲಾದೆಡೆ ನಾಲಾ ಇಕ್ಕಟ್ಟಾಗಿದ್ದು, ಅತಿಕ್ರಮಣ ನಡೆಯುತ್ತಿದೆ. ದೇಶಪಾಂಡೆ ನಗರದ ನಾಲಾದ ಹೂಳು ತೆಗೆಸಲು ಕ್ರಮ ಕೈಗೊಳ್ಳಬೇಕು. ನಗರದ ಎಲ್ಲ ನಾಲಾಗಳ ಸಮಸ್ಯೆ ಬಗೆಹರಿಸಬೇಕು ಎಂದರು.

ಅಧಿಕಾರಿ ತರಾಟೆಗೆ: ಉಣಕಲ್‌ ಕೆರೆಗೆ ಕೊಳಚೆ ನೀರು ಸೇರುವುದನ್ನು ತಡೆಗಟ್ಟಲು ಭೈರಿದೇವರಕೊಪ್ಪದಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ ಕಳೆದೊಂದು ವರ್ಷದಿಂದ ನಿರ್ಮಾಣವಾಗುತ್ತಿದೆ. ಕಾಮಗಾರಿ ಯಾವ ಹಂತದಲ್ಲಿದೆ ಎಂದು ಜಗದೀಶ ಶೆಟ್ಟರ ಪ್ರಶ್ನಿಸಿದರು. ಆದರೆ ಈಗ ಕೇವಲ ಶೇ.10 ಕಾಮಗಾರಿ ಮಾತ್ರ ಪೂರ್ಣಗೊಂಡಿದೆ ಎಂದು ಅಧಿಕಾರಿ ನೀಡಿದ ಉತ್ತರದಿಂದ ಆಕ್ರೋಶಗೊಂಡ ಶೆಟ್ಟರ, ಹೀಗಾದರೆ ಉಣಕಲ್‌ ಕೆರೆ ಉದ್ಧಾರವಾಗುವುದಿಲ್ಲ. ಯಾಕೆ ವಿಳಂಬವಾಗುತ್ತಿದೆ? ಉಣಕಲ್‌ ಕೆರೆಗೆ ಕೊಳಚೆ ನೀರು ಸೇರುವುದನ್ನು ತಡೆಯದಿದ್ದರೆ ಕೆರೆಯಲ್ಲಿ ಜಲಕಳೆ ನಿಯಂತ್ರಿಸಲಾಗುವುದಿಲ್ಲ. ಜನರು ನಮ್ಮನ್ನು ಕೇಳ್ತಾರೆ, ನಿಮ್ಮನ್ನಲ್ಲ. ಕಾಮಗಾರಿ ಪೂರ್ಣಗೊಳಿಸಲು ಇನ್ನೂ ಎಷ್ಟು ಸಮಯ ಬೇಕು ಅದನ್ನಾದರೂ ಹೇಳಿ ಎಂದು ಹರಿಹಾಯ್ದರು.

ಪಾಲಿಕೆಗೆ ಹಸ್ತಾಂತರಿಸಿ: ಬೆಂಗೇರಿ ಹಾಗೂ ಹಳೇಹುಬ್ಬಳ್ಳಿ ಸಂತೆ ಪೇಟೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಬೆಂಗೇರಿಯಲ್ಲಿ ಸಂತೆ ನಡೆಯುವ ಜಾಗ ತೋಟಗಾರಿಕಾ ಇಲಾಖೆಯದಾಗಿದ್ದು, ಅವರಿಗೆ ಬೇರೆ ಜಾಗ ನೀಡಿ ಈ ಜಾಗದಲ್ಲಿ ಮಾರುಕಟ್ಟೆಗೆ ಅನುಕೂಲವಾಗುವಂತೆ ಕಟ್ಟೆಗಳನ್ನು ಕಟ್ಟಬೇಕು ಎಂದರು. ನೃಪತುಂಗ ಬೆಟ್ಟ, ಕಲಾಭವನ, ಉಣಕಲ್‌ ಉದ್ಯಾನ ಹಾಗೂ ಇಂದಿರಾ ಗಾಜಿನ ಮನೆಯನ್ನು ಜಿಲ್ಲಾಡಳಿತದಿಂದ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದರು.

Advertisement

ಅತಿಕ್ರಮಣ ತೆರವು ನಡೆಯಲಿ: ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ನಾಲಾಗಳನ್ನು ಅತಿಕ್ರಮಣ ಮಾಡಿ ಕಟ್ಟಲಾದ ಮನೆಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಮನೆ ಕಳೆದುಕೊಂಡವರಿಗೆ ಜಿ+3 ಅಪಾರ್ಟ್‌ಮೆಂಟ್‌ಗಳಲ್ಲಿ ವಸತಿ ಕಲ್ಪಿಸಬಹುದು. ಎಂಥ ಪ್ರಭಾವಿಗಳೇ ಆಗಿರಲಿ, ತಪ್ಪು ಮಾಡಿದ ಯಾರನ್ನೂ ಬಿಡಬೇಡಿ. ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ, ಮಹಾಪೌರ ಸುಧೀರ ಸರಾಫ‌, ಜಿಲ್ಲಾಧಿಕಾರಿ ದೀಪಾ ಚೋಳನ್‌, ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ, ಉಪ ಆಯುಕ್ತರಾದ ರೇಣುಕಾ ಸುಕುಮಾರ, ಪಾಲಿಕೆ ಸದಸ್ಯರಾದ ಡಾ| ಪಾಂಡುರಂಗ ಪಾಟೀಲ, ವೀರಣ್ಣ ಸವಡಿ, ಮಹೇಶ ಬುರ್ಲಿ ಇದ್ದರು.

ಪೌರಕಾರ್ಮಿಕರೊಂದಿಗೆ ಸಭೆ
ಪೌರ ಕಾರ್ಮಿಕರೊಂದಿಗೆ ಜನಪ್ರತಿನಿಧಿಗಳ ಸಭೆ ಆಯೋಜಿಸಬೇಕು. ಶಾಸಕರು, ಮಹಾಪೌರರನ್ನು ಕರೆಯಬೇಕು. ಪೌರ ಕಾರ್ಮಿಕರ ಬೆಂಬಲಕ್ಕೆ ಪಾಲಿಕೆ ಇದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡುವುದು ಸಭೆಯ ಉದ್ದೇಶ. ಅವರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸವಾಗಬೇಕು. ಪೌರ ಕಾರ್ಮಿಕರಿಗೆ ಸುಳ್ಳು ಮಾಹಿತಿ ನೀಡಿ, ಗೊಂದಲ ಮೂಡಿಸುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಜಗದೀಶ ಶೆಟ್ಟರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

‌ನಗರದ 200 ಕಡೆಗಳಲ್ಲಿ ಇಂಟೆಲಿಜೆಂಟ್‌ ಪೋಲ್‌ ಹಾಗೂ ಸ್ಮಾರ್ಟ್‌ ಪೋಲ್‌ ಅಳವಡಿಸಲಾಗುತ್ತಿದೆ. ಇದರಿಂದ ವೈಫೈ, ಮೊಬೈಲ್‌ ಚಾರ್ಜಿಂಗ್‌, ಸಿಸಿ ಕ್ಯಾಮೆರಾ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಅಲ್ಲದೇ 37 ಕೋಟಿ ವೆಚ್ಚದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಗರದಲ್ಲಿ 54131 ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುತ್ತಿದೆ. ಈಗಾಗಲೇ 2528 ಎಲ್‌ಇಡಿ ದೀಪಗಳನ್ನು ಅಳವಡಿಸಲಾಗಿದೆ.
„ ಶಕೀಲ್‌ ಅಹ್ಮದ್‌, ಪಾಲಿಕೆ ಆಯುಕ್ತ 

Advertisement

Udayavani is now on Telegram. Click here to join our channel and stay updated with the latest news.

Next