ಕಲಬುರಗಿ: ಕರ್ನಾಟಕದ ಬಿಜೆಪಿ ನಾಯಕರ ಬಗ್ಗೆ ಕೇಂದ್ರ ನಾಯಕರಿಗೆ ಭರವಸೆ ಇಲ್ಲ. ಆ ಕಾರಣದಿಂದಲೇ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದವರನ್ನೆಲ್ಲ ಪುನಃ ಗಾಳ ಹಾಕಿ ಕರೆಯಿಸಿಕೊಳ್ಳಲಾಗುತ್ತಿದೆ. ಇದಕ್ಕೆ ಸಾಕ್ಷಿಯೇ ಜಗದೀಶ ಶೆಟ್ಟರ ಅವರನ್ನು ಕರೆಯಿಸಿಕೊಂಡಿರುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶೋಕ ಮತ್ತು ವಿಜಯೇಂದ್ರ ನಾಯಕತ್ವ ದಲ್ಲಿ ಬಿಜೆಪಿ ಸಾಧಿಸಲು ಸಾಧ್ಯ ಇಲ್ಲ ಎನ್ನುವ ಕಾರಣಕ್ಕೆ ರಾಜ್ಯ ಬಿಜೆಪಿ ಕೈಬಲಪಡಿಸಲಾಗುತ್ತಿದೆ. ಶೆಟ್ಟರ ಹೇಳಿದಂತೆ ಪ್ರಧಾನಿ ಮೋದಿ ಕೈ ಬಲಪಡಿಸಲು ಅಲ್ಲ ಎಂದು ಕಿಚಾಯಿಸಿದರು.
ಈ ಎಲ್ಲ ಬೆಳವಣಿಗೆ ಗಮನಿಸುತ್ತಿದ್ದರೆ ಕರ್ನಾಟಕದಲ್ಲಿ ಮೋದಿ ಅಲೆ ಏನೂ ಇಲ್ಲ. ಕನ್ನಡಿಗರ ಅಸ್ಮಿತೆಯೇ ದೊಡ್ಡ ಶಕ್ತಿ. ಅದನ್ನು ಪಡೆಯಲು ಬಿಜೆಪಿ ವಿಫಲವಾಗಿದೆ ಎನ್ನುವುದು ಸ್ಪಷ್ಟ ಎಂದ ಪ್ರಿಯಾಂಕ್, ಕಳೆದ ಚುನಾವಣೆಯಲ್ಲಿ ಯಾವ ಬಿಜೆಪಿ ನಾಯಕರ ಮುಂದಾಳತ್ವದಲ್ಲಿ ಬಿಜೆಪಿ ಸಾಗಿತ್ತೋ ಅದೆಲ್ಲವೂ ಕೇಂದ್ರದ ನಾಯಕರಿಗೂ ಗೊತ್ತಿದೆ. ಹೀಗಾಗಿ ಅವರು ಪುನಃ ಎಲ್ಲರನ್ನು ಕರೆಯಿಸಿಕೊಳ್ಳುತ್ತಿದ್ದಾರೆ ಎಂದರು.
ಐಟಿಯಿಂದ ಬೆದರಿಕೆ: ಕೇಂದ್ರವಲ್ಲ, ರಾಜ್ಯದಲ್ಲೂ ಐಟಿ-ಇಡಿ ಮತ್ತು ಸಿಬಿಐಯಿಂದ ಬೆದರಿಕೆಗಳನ್ನು ಹಾಕಿಸಿ ಬಿಜೆಪಿ ಬಿಟ್ಟು ಹೋದವರನ್ನು ಕರೆಯಿಸಿಕೊಳ್ಳುವುದು, ಬೇರೆ ಪಕ್ಷದಲ್ಲಿ ಬಲಾಡ್ಯರಿದ್ದರೆ ಅವರನ್ನು ಕರೆದು ತಮ್ಮಲ್ಲಿ ಸ್ಥಾನ ಕೊಡುವುದು ಬಿಜೆಪಿ ಕೇಂದ್ರ ನಾಯಕರಿಗೆ ಮಾಮೂಲಿಯಾಗಿದೆ. ವಾಸ್ತವದಲ್ಲಿ ಸಿಬಿಐ, ಐಟಿ ಮತ್ತು ಇಡಿ ಅಧಿಕಾರಿಗಳೇ ಬಿಜೆಪಿ ಸ್ಟಾರ್ ಕ್ಯಾಂಪೇನರ್‌ಗಳು ಎಂದು ಛೇಡಿಸಿದರು.
ಇದರ ಭಾಗವಾಗಿ ಶೆಟ್ಟರ ಅವರನ್ನು ಬೆದರಿಸಿರಬಹುದು. ಇದೇ ಕಾರಣಕ್ಕೆ ಅವರು ಕಾಂಗ್ರೆಸ್ ಬಿಟ್ಟು ಹೋಗಿದ್ದಾರೆ. ಯಾವ ಪಕ್ಷದವರು ಅವಮಾನ ಮಾಡಿ ಟಿಕೆಟ್ ಕೊಟ್ಟಿರಲಿಲ್ಲವೋ ಆಗ, ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ ಎಂದು ನಮ್ಮಲ್ಲಿ ಬಂದರಲ್ಲ. ಈಗ ಏನಾಗಿದೆ ಅವರಿಗೆ? ವಿಧಾನ ಪರಿಷತ್ ಸದಸ್ಯತ್ವ ಕೊಟ್ಟಿರಲಿಲ್ಲವೆ? ಚುನಾವಣೆಯಲ್ಲಿ ಅವರು ಏನು ಸಾಧನೆ ಮಾಡಿದ್ದಾರೆ?ಎಂದು ಪ್ರಶ್ನಿಸಿದರು.
ಶೆಟ್ಟರ ಅವರೇ ಹೇಳುವಂತೆ, ಮೋದಿ ಕೈ ಬಲಪಡಿಸಲು ವಾಪಸು ಹೋಗಿದ್ದಾರಂತೆ. ಹಾಗಿದ್ದರೆ ಕರ್ನಾಟಕದಲ್ಲಿ ಮೋದಿ ಕೈ ಬಲವಿಲ್ಲವೇ? ಬಿಜೆಪಿ ಸ್ಟ್ರಾಂಗ್ ಇಲ್ಲವೋ? ಅಥವಾ ಈಗಿರುವ ನಾಯಕರ ಕುರಿತು ಕೇಂದ್ರ ನಾಯಕರಿಗೆ ನಂಬಿಕೆ ಉಳಿದಿಲ್ಲವೋ ಎಂದು ಪ್ರಶ್ನಿಸಿದರು.
ಶಾಸಕ ಲಕ್ಷ್ಮಣ ಸವದಿ ಕುರಿತು ಕೇಳಿದಾಗ, ಆ ಎಲ್ಲ ವಿಚಾರಗಳನ್ನು ಪಕ್ಷದ ಅಧ್ಯಕ್ಷರು, ಹಿರಿಯರು ನೋಡಿಕೊಳ್ಳುತ್ತಾರೆ. 138 ವರ್ಷದ ಕಾಂಗ್ರೆಸ್ ಯಾರೇ ಬಂದರೂ, ಹೋದರೂ ವಿಚಲಿತಗೊಳ್ಳುವುದಿಲ್ಲ. ಇದರ ಬೇರು ಬಲವಾಗಿವೆ ಎಂದರು. ಶಾಸಕ ಅಲ್ಲಮಪ್ರಭು ಪಾಟೀಲ, ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ ಇದ್ದರು.