Advertisement

ಶೆಟ್ಟರ್‌ ಸುಸಂಸ್ಕೃತರು, ಅವರ ಹೇಳಿಕೆಗೆ ಪ್ರತಿಕ್ರಿಯಿಸಲ್ಲ

01:33 AM May 10, 2019 | Sriram |

ಹುಬ್ಬಳ್ಳಿ: ‘ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಸಾಹೇಬರು ನನಗಿಂತ ಹಿರಿಯರು. ಅವರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಬಿಜೆಪಿ ಕಾರ್ಯಕರ್ತರಿಗೆ ಕೈ ಹಚ್ಚಿದರೆ ನೆಟ್ಟಗಿರುವುದಿಲ್ಲ ಎಂದು ಅವರು ಹೇಳಿರಲು ಸಾಧ್ಯವಿಲ್ಲ. ಅವರು ಬಹಳ ಸುಸಂಸ್ಕೃತ ಜನ. ಅವರ ಬಗ್ಗೆ ನನಗೆ ವಿಶ್ವಾಸವಿದೆ’ ಎಂದು ಸಚಿವ ಡಿ.ಕೆ. ಶಿವಕುಮಾರ್‌, ಜಗದೀಶ ಶೆಟ್ಟರ್‌ ಅವರಿಗೆ ನಯವಾಗಿ ತಿರುಗೇಟು ನೀಡಿದ್ದಾರೆ.

Advertisement

ಕುಂದಗೋಳ ತಾಲೂಕಿನ ಬೆಟದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಕ್ಷೇತ್ರದಲ್ಲಿ ಪ್ರತಿಯೊಬ್ಬರ ಬಳಿ ಮತ ಕೇಳುವ ಹಕ್ಕು ಎಲ್ಲರಿಗಿದೆ. ಕಾಂಗ್ರೆಸ್‌, ಬಿಜೆಪಿ ಅಂತ ಪಟ್ಟಿ ಹಾಕಿಕೊಂಡಿರುವುದಿಲ್ಲ. ಇದನ್ನು ಪ್ರಶ್ನಿಸುವ ಅಧಿಕಾರ ಹಾಗೂ ಮತಯಾಚನೆಗೆ ಅಡ್ಡಿ ಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಶೆಟ್ಟರ್‌ ಸಾಹೇಬರು ಆತಂಕ ಪಡುವುದು ಬೇಡ. ಸರ್ಕಾರ ಮುಕ್ತವಾಗಿ ಚುನಾವಣೆ ಮಾಡುತ್ತಿದೆ. ನೀವು ಪ್ಯಾರಾಮಿಲಿಟರಿ ತಂದು ಮಡಗಿಕೊಂಡಿದ್ದೀರಿ. ಇಲ್ಲಿರುವ ಜನರು ಮುಗ್ಧರು ಹಾಗೂ ಬಡವರು. ಇವರಿಗೆ ಬಂದೂಕು ತೋರಿಸಿ ಚುನಾವಣೆ ಮಾಡಲು ಆಗತ್ತಾ?’ ಎಂದರು.

ಮಾಜಿ ಸಚಿವ ಶ್ರೀರಾಮುಲು ಅವರು ಶಿವಳ್ಳಿ ಸಾವಿನ ಕುರಿತು ನೀಡಿರುವ ಹೇಳಿಕೆ ಬಗ್ಗೆ ತನಿಖೆ ಅವಶ್ಯವಿದೆ. ಮಂತ್ರಿಯಾಗಿದ್ದವರು ಈ ರೀತಿ ಮಾತನಾಡಿದಾಗ ಗಂಭೀರತೆ ಪಡೆದುಕೊಳ್ಳುತ್ತದೆ. ಸರ್ಕಾರ ಹಾಗೂ ಪಕ್ಷದ ಕಿರುಕುಳದಿಂದ ಶಿವಳ್ಳಿ ಅಗಲಿದ್ದಾರೆ ಎನ್ನುವ ಹೇಳಿಕೆ ಪಕ್ಷದ ಕಾರ್ಯಕರ್ತರಲ್ಲಿ ಆಕ್ರೋಶ ಮೂಡಿಸಿದೆ. ಒಂದು ವೇಳೆ ಕಿರುಕುಳದ ಸಾವಾಗಿದ್ದರೆ ಇದನ್ನು ಗೌಪ್ಯವಾಗಿ ಇಟ್ಟುಕೊಳ್ಳಬಾರದು. ಅಂತಹದರಲ್ಲಿ ಶ್ರೀರಾಮುಲು ಈ ವಿಚಾರವನ್ನು ಗೌಪ್ಯವಾಗಿ ಇಟ್ಟುಕೊಂಡಿರುವುದು ಕೂಡ ಅಪರಾಧ ಎಂದರು.

ಜನರಲ್ಲಿ ನೋವು ಮೂಡಿಸಿದೆ: ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದರೆ ಹಣ ಕೊಡುವುದಾಗಿ ಬಿಜೆಪಿ ನಾಯಕರು ಹಿಂದೆ ಬೇಡಿಕೆಯಿಟ್ಟಿದ್ದರು. ಇದು ಕೂಡ ಅವರ ಮೇಲೆ ಸಾಕಷ್ಟು ಒತ್ತಡ ಮೂಡಿತ್ತು ಎಂಬುದನ್ನು ಶಿವಳ್ಳಿಯವರು ಸುದ್ದಿಗೋಷ್ಠಿಯಲ್ಲಿ ಬಹಿರಂಗ ಪಡಿಸಿದ್ದರು. ಈ ಕುರಿತು ಹೆಚ್ಚು ಮಾತನಾಡಲು ಬಯಸುವುದಿಲ್ಲ. ಶಿವಳ್ಳಿ ಅವರ ಬಗ್ಗೆ ಬಿಜೆಪಿ ನಾಯಕರಾದ ಯಡಿಯೂರಪ್ಪ, ಜಗದೀಶ ಶೆಟ್ಟರ್‌, ಬಸವರಾಜ ಬೊಮ್ಮಾಯಿ ಸೇರಿದಂತೆ ಸಾಕಷ್ಟು ನಾಯಕರು ಮೆಚ್ಚುಗೆಯ ಮಾತು ಗಳನ್ನಾಡಿದ್ದರು. ಚುನಾವಣೆ ಸಂದರ್ಭದಲ್ಲಿ ಶ್ರೀರಾಮುಲು ಇಂತಹ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next