ಶ್ರೀಲಂಕಾದ ಇಬ್ಬರು ಹುಡುಗಿಯರ ಫೋಟೊ ಒಂದು ರಾತ್ರೋರಾತ್ರಿ ಫೇಮಸ್ ಆಗಿಬಿಟ್ಟಿತು. ಲಕ್ಷಾಂತರ ಹಿಟ್‌ಗಳು ಅದಕ್ಕೆ ಸಿಕ್ಕವು. ಲಕ್ಷಾಂತರ ಮಂದಿ ಅದನ್ನು ಶೇರ್ ಮಾಡಿದ್ದರು. ಯಾರಿಗೇ ಆದರೂ ತಮ್ಮ ಪೋಸ್ಟುಗಳು ಆನ್‌ಲೈನಿನಲ್ಲಿ ಹಿಟ್ ಆಗುತ್ತಿದೆ, ಹೆಚ್ಚು ಹೆಚ್ಚು ಶೇರ್ ಆಗುತ್ತಿದೆ ಅಂದರೆ ಖುಷಿಯಾಗುತ್ತೆ. ಆದರೆ ಆ ಇಬ್ಬರು ಹುಡುಗಿಯರಿಗೆ ಮಾತ್ರ ಆಘಾತವಾಗಿತ್ತು, ದುಃಖವಾಗಿತ್ತು. ಏಕೆಂದರೆ ಕೆಟ್ಟ ವಿಚಾರಕ್ಕೆ ಫೇಮಸ್ ಆದರೆ ಯಾರಿಗೆ ತಾನೇ ಖುಷಿ ಯಾಗುತ್ತೆ? ಆಗಿದ್ದಿಷ್ಟು. “ಕಾಮಿಕ್ ಕಾನ್’ ಎಂಬ ಕಾರ್ಯಕ್ರಮ ಕೊಲೊಂಬೋದಲ್ಲಿ ನಡೆದಿತ್ತು. ಅದರಲ್ಲಿ ಪಾಲ್ಗೊಳ್ಳುವವರು ಜಗದ್ವಿಖ್ಯಾತ ಕಾಮಿಕ್ ಪಾತ್ರಗಳ ವೇಷ ತೊಟ್ಟು, ಸ್ನೇಹಿತರೊಡನೆ ನಲಿದು ಸಂತಸ ಪಡುತ್ತಾರೆ.
ಇತ್ತೀಚಿಗಷ್ಟೇ “ವಂಡರ್ ವುಮನ್’ ಹಾಲಿವುಡ್ ಸಿನಿಮಾ ಬಿಡುಗಡೆ ಕಂಡು ಪ್ರಖ್ಯಾತವಾಗಿತ್ತು. ಅದೇ ಗುಂಗಲ್ಲಿದ್ದ ಅಮಾಯಾ ಮತ್ತು ಸೇಷಾನಿ ಎಂಬ ಗೆಳತಿಯರಿಬ್ಬರು ಪ್ರಖ್ಯಾತ ಮಹಿಳಾ ಸೂಪರ್ ಹೀರೋ “ವಂಡರ್ ವುಮನ್’ನ ವೇಷ ಧರಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಆ ಪೋಟೋದಿಂದಲೇ ರಾದ್ಧಾಂತವಾಗಿದ್ದು. ಕಾಮಿಕ್ ಪಾತ್ರ ವಂಡರ್ ವುಮನ್ ನಿಜಕ್ಕೂ ಅತೀವ ಸುಂದರಿ. ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದವಳು. ಈ ಅಭಿಮಾನಿಗಳಿಗೆ ಶ್ರೀಲಂಕಾದ ಇಬ್ಬರು ಹುಡುಗಿಯರು ತಮ್ಮ ನೆಚ್ಚಿನ ನಾಯಕಿಯಂತೆ ಪೋಸು ಕೊಟ್ಟಿದ್ದು ತಮಾಷೆಯಾಗಿ ಕಂಡಿತು.
ಇಂಟರ್‌ನೆಟ್‌ನಲ್ಲಿ ಆ ಇಬ್ಬರು ಹುಡುಗಿಯ ವರ್ಣ, ಮೈಕಟ್ಟು, ದೇಹ ಎಲ್ಲವೂ ಹೀಯಾಳಿಕೆಗೆ ವಸ್ತುವಾಯಿತು. ಅಸಂಖ್ಯ ಜೋಕುಗಳು, ಮೀಮ್‌ಗಳು ಹರಿದಾಡಿದವು. ನಿಜ ಹೇಳಬೇಕೆಂದರೆ ಆ ಹುಡುಗಿಯರಿಬ್ಬರು “ಬಾಡಿ ಶೇಮಿಂಗ್’ ಗೆ ತುತ್ತಾಗಿದ್ದರು. ಇದೆಲ್ಲದರ ಪರಿಣಾಮ ಏನಾಯೆ¤ಂದರೆ “ವಂಡರ್ ವುಮನ್’ ಆಗಿ ನಟಿಸಿದ್ದ ನಾಯಕನಟಿ ಗಾಲ್ ಗೆಡೋಟ್ ತಾವೇ ಸ್ವತಃ ಆ ಫೋಟೋ ಶೇರ್ ಮಾಡಿ “ಲುಕ್ಕಿಂಗ್ ಬ್ಯೂಟಿಫುಲ್ ಲೇಡೀಸ್’
(ಚೆನ್ನಾಗಿ ಕಾಣುತ್ತಿದ್ದೀರಿ ಹುಡುಗೀರಾ…) ಎಂದು ಬರೆದುಕೊಂಡರು. ಜಗತ್ತೇ ನಿಬ್ಬೆರಗಾಯಿತು. ಈ ಹಿಂದೆ ಆಡಿಕೊಂಡಿದ್ದವರೆಲ್ಲ ಈಗ ಹೊಗಳತೊಡಗಿದರು. ಆ ಇಬ್ಬರು ಹುಡುಗಿಯ ಬೆಂಬಲಕ್ಕೆ ನಿಲ್ಲತೊಡಗಿದರು. ಜಗತ್ತೇ “ಬಾಡಿ ಶೇಮಿಂಗ್’ ವಿರುದ್ಧ ತಿರುಗಿಬಿತ್ತು. ಹೀಗೆ “ಸ್ತ್ರೀಯನ್ನು ಹೊರನೋಟದಿಂದ ಜಡ್ಜ್ ಮಾಡಬೇಡಿ, ಅವಳ ಮನಸ್ಸು, ಉತ್ಸಾಹಕ್ಕೆ ಬೆಲೆ ಕೊಡಿ’ ಎಂಬ ಸಂದೇಶ ವಂಡರ್ ವುಮನ್ ಗಾಲ್ ಗೆಡೋಟ್‌ಳಿಂದಾಗಿ ರವಾನೆಯಾಯ್ತು.
ವರಲಕ್ಷ್ಮಿ