Advertisement

ನೀರು-ಆಹಾರಕ್ಕಾಗಿ ಕುರಿಗಾಹಿಗಳ ಅಲೆದಾಟ

03:23 PM May 09, 2021 | Team Udayavani |

ವರದಿ : ಶಂಕರ ಹೂಗಾರ

Advertisement

ಶಿರೂರ: ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆ ಹೆಚ್ಚುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿನ ಕುರಿ ಆಡುಗಳನ್ನು ನಂಬಿ ಸಾಕುವ ಮೂಲಕ ಜೀವನ ಸಾಗಿಸುವ ಕುರಿಗಾರರ ಜೀವನ ಕಷ್ಟಕರವಾಗಿದೆ.

ಬೇಸಿಗೆಯಲ್ಲಿ ಅಲೆದಾಟವಂತೂ ದೊಡ್ಡ ಶಿಕ್ಷೆಯಂತೆ ಕಾಡುತ್ತಿದೆ. ಶಿರೂರ, ನೀಲಾನಗರ, ಬೆನಕಟ್ಟಿ ಗ್ರಾಮಗಳ ಕುರಿಗಾರರು ನಿತ್ಯ ತಮ್ಮ ಕುರಿಗಳಿಗೆ ಕುಡಿಯುವ ನೀರಿನ ಅಭಾವ, ಮೇವು-ಆಹಾರ ಸಿಗದೇ ಚಡಪಡಿಸುತ್ತಿದ್ದಾರೆ. ಬೆಳಗಾದರೆ ಎತ್ತಕಡೆ ಹೋಗಬೇಕೆಂದು ಚಿಂತಿತರಾಗುತ್ತಿದ್ದಾರೆ. ಬಿಸಿಲಿನ ಝಳಕ್ಕೆ ಆತಂಕ ಪಡುತ್ತಿದ್ದಾರೆ.

ಶಿರೂರ, ನೀಲಾನಗರ ಭಾಗದಲ್ಲೇ ಸುಮಾರು 60ಕ್ಕೂ ಹೆಚ್ಚು ಕುರಿ ಹಿಂಡುಗಳಿವೆ. ಗುಡ್ಡಗಾಡು ಪ್ರದೇಶದ ಕೃಷಿ ಭೂಮಿಗಳಲ್ಲಿ ಅಲ್ಪಸ್ವಲ್ಪ ಮಳೆಯಿಂದ ಹುಲ್ಲಿನ ಮೇವು ಸಾಗಿದರೆ, ಗ್ರಾಮದ ಐತಿಹಾಸಿಕ ಎರಡು ಕೆರೆಗಳಲ್ಲಿ ಸದ್ಯದ ಮಟ್ಟಿಗೆ ನೀರಿನ ಕೊರತೆ ಇಲ್ಲ. ಆದರೆ, ಕೃಷಿ ಭೂಮಿಯಲ್ಲಿನ ಭೋಸರೆಡ್ಡಿ ಕೆರೆ, ಶಿವನಕೆರೆ, ಕಕ್ಕಿಹಳ್ಳ ಸ್ವಲ್ಪವೂ ನೀರಿಲ್ಲ. ಇದ್ದ ಅಲ್ಪ ಸ್ವಲ್ಪ ನೀರು ಕುಡಿಯಲು ಯೋಗ್ಯವಾಗಿಲ್ಲ. ನಿತ್ಯವೂ ನೀರಿಗಾಗಿ ದೂರದಿಂದ ಬಂದು ಊರಿನ ಎರಡು ಕೆರೆಗಳಿಗೆ ಬಂದು ಕುರಿಗಳು ನೀರಿನ ದಾಹ ತೀರಿಸಿಕೊಳ್ಳುವಂತಾಗಿದೆ. ಕೆಲ ಕಡೆ ಕುರಿಗಾರರು ನಿತ್ಯ ನೀರು, ಆಹಾರಕ್ಕಾಗಿ ಸುಡುವ ಬಿಸಿಲಿನ ನಡುವೆ ಐದಾರು ಕಿ.ಮೀ. ದೂರ ಹೋಗಿ ಬರಬೇಕಾದ ಪರಿಸ್ಥಿತಿ ಇದೆ. ಎತ್ತ ಹೋದರೂ ಹುಲ್ಲು-ಮೇವಿನ ಕೊರತೆ ಕಾಡುತಿದ್ದು, ಕೆಲ ಕುರಿಗಾರರು ತಮ್ಮ ಕುರಿಗಳನ್ನು ಮಾರಲು ಮುಂದಾಗಿದ್ದಾರೆ.

ಗುಡಿಮೆಂಚಿ ಕೆರೆ ನೀರು: ಈ ಹಿಂದೆ ಸ್ಥಳೀಯ ಗ್ರಾಪಂನವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ 2016-17ನೇ ಸಾಲಿನ ಬರಪರಿಹಾರ ಯೋಜನೆಯಲ್ಲಿ ಪೈಪ್‌ ಲೈನ್‌ ಮೂಲಕ ಗುಡಿಮೆಂಚಿ ಕೆರೆಗೆ ನೀರು ಹರಿಸಿದ್ದಾರೆ. ಇದರಿಂದ ಈ ಭಾಗದ ಜನರಿಗೆ ಕೃಷಿ ಭೂಮಿಗೆ ತೆರಳುವ ಜಾನುವಾರುಗಳಿಗೆ ಜೀವಜಲವಾಗಿದೆ. ಬೇಸಿಗೆ ಸಮಯದಲ್ಲಿ ಕೃಷಿ ಭೂಮಿಯಲ್ಲಿನ ಆಯ್ದಭಾಗಗಳಲ್ಲಿ ನೀರಿನ ದೋಣಿಗಳು ಹೆಚ್ಚು ಅನುಕೂಲವಾಗುತ್ತದೆ ಎನ್ನುತ್ತಾರೆ ಕುರಿಗಾರ ರಾಮಣ್ಣ ನೆರಕಿ.

Advertisement

ಹಸಿಮೇವು ಸಿಗದೇ ಬಿಸಿಲಿನ ತಾಪದಿಂದ ಒಣಹುಲ್ಲು ತಿನ್ನುವುದರಿಂದ ಜಾನುವಾರುಗಳ ಆರೋಗ್ಯ ಹದಗೆಡುವುದರ ಜತೆಗೆ ಕೆಲವೊಮ್ಮೆ ಗರ್ಭಪಾತಗಳಾದ ಉದಾಹರಣೆಗಳಿವೆ ಎಂದು ಇನ್ನೊಬ್ಬ ಕುರಿಗಾರ ನಿಂಗಪ್ಪ ಹಿರೇಕುಂಬಿ ನೊಂದು ಹೇಳುತ್ತಾರೆ. ಕೆಲವೊಮ್ಮೆ ಹಾಲಿನ ಅಭಾವವೂ ಕಂಡುಬರುವುದರಿಂದ ಕಷ್ಟ ಎದುರಾಗಿದೆ.

ಕುರಿಗಾರರು ಶಿರೂರಿನ ಭೋಸರೊಡ್ಡಿ ಕೆರೆ ಹತ್ತಿರ, ಕಕ್ಕಿಹಳ್ಳ ಹತ್ತಿರ, ಆರಿಹಳ್ಳದ ಹತ್ತಿರ, ಎರಿಭೂಮಿ, ಕೋಳಿವಾರಿ, ಶಿವನಕೆರೆ ಹತ್ತಿರ ಕುರಿದೊಡ್ಡಿ ನಿರ್ಮಿಸಿಕೊಂಡಿದ್ದಾರೆ. ಕೆಲವರು ತೋಟದ ರೈತರ ಮನವೊಲಿಸಿ ನೀರು ಕುಡಿಸುವ ವ್ಯವಸ್ಥೆ ಕಲ್ಪಿಸಿಕೊಂಡಿದ್ದಾರೆ. ನಿತ್ಯ ಕಿಲೋಮೀಟರಗಟ್ಟಲೆ ಸುತ್ತಿದರೂ ಆಹಾರ ಸಿಗುತ್ತಿಲ್ಲ. ಕುರಿಮಾಂಸ, ಚರ್ಮ, ಉಣ್ಣೆ, ಹೀಗೆ ಕುರಿ ಸಾಗಾಣಿಕೆ ಆದಾಯದ ಮೂಲವಾಗಿದೆ. ಸರಕಾರ ಕುರಿಗಾರರ ನೆರವಿಗೆ ಬರಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next