Advertisement

ಪ್ರೌಢಿಮೆ ಅನಾವರಣಗೊಂಡ ಕುರಿಯ ಶೇಣಿ ತಾಳಮದ್ದಳೆ ಸಪ್ತಾಹ

06:00 AM Mar 23, 2018 | |

ಕುರಿಯ ಶೇಣಿ ಪ್ರತಿಷ್ಠಾನದ ವತಿಯಿಂದ ವಿಟ್ಲ ಭಗವತಿ ಕ್ಷೇತ್ರದಲ್ಲಿ ನಡೆದ ಸಪ್ತಾಹ ತಾಳಮದ್ದಳೆ ಸರಣಿ, ಎರಡು ದಿವಸ ಬಯಲಾಟ ಹಿರಿಯ ಕಿರಿಯ ಕಲಾವಿದರ ಪ್ರೌಢಿಮೆಗೆ ಸಾಕ್ಷಿಯಾಯಿತು. ತಾಳಮದ್ದಳೆ ಮತ್ತು ಪೌರಾಣಿಕ‌ ಕತೆಯ ಬಯಲಾಟದ ಹಂದರದೊಳಗೆ ಸಂಸ್ಕೃತಿ, ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ಬಡಿಸುವ ಸಾರ್ಥಕ ಯತ್ನ ಇದಾಗಿತ್ತು.

Advertisement

 ಹಿರಿಯ ನಾಟಕಕಾರ ಮೂರ್ತಿ ದೇರಾಜೆ ಯಕ್ಷಗಾನ ಸಪ್ತಾಹಕ್ಕೆ ಚಾಲನೆ ನೀಡಿದರು. ಪ್ರಥಮ ದಿನ “ತ್ರಿಶಂಕು ಸ್ವರ್ಗ’ ತಾಳಮದ್ದಳೆ. ಭಾಗವತರಾಗಿ ಕುರಿಯ ಗಣಪತಿ ಶಾಸ್ತ್ರಿಯವರಿಂದ ಭಾಗವತಿಕೆ. ಕೂಟದಲ್ಲಾಗಲೀ ಆಟದಲ್ಲಾಗಲೀ ಭಾಗವತರೇ ನಿರ್ದೇಶಕರು. ಸಂಪೂರ್ಣ ಪ್ರಸಂಗದ ಪಾತ್ರಗಳ ಹಿಡಿತವಿರಿಸಿ, ಅರ್ಥಧಾರಿಗಳು ಪ್ರಸಂಗದ ಚೌಕಟ್ಟಿನಿಂದ ಹೊರಗೆ ಹೋಗದಂತೆ, ಪ್ರೇಕ್ಷಕರಿಗೆ ಸಪ್ಪೆ ಎನಿಸದಂತೆ, ಸಮಯಕ್ಕೆ ಸರಿಯಾಗಿ ಮುಗಿಸುವ ನಾಯಕತ್ವ ಹೇಗೆ‌ ವಹಿಸಬಹುದೆಂದು ತೋರಿಸಿಕೊಟÌರು. ಪೂರ್ಣ ಕೂಟದಲ್ಲಿ ಇವರು ಅರ್ಥದಾರಿಗಳ ಮಾತುಗಾರಿಕೆಯಲ್ಲಿ ತಲ್ಲಿನರಾಗಿದ್ದು ಔಚಿತ್ಯಪೂರ್ಣ. ಚೆ‌ಂಡೆ ಮದ್ದಳೆಯನ್ನು ರಾಮ ಪ್ರಸಾದ್‌ ವದ್ವ ಮತ್ತು ಲಕ್ಷ್ಮೀನಾರಾಯಣ ಅಡೂರು ನುಡಿಸಿದರು.

ವಿಶ್ವಾಮಿತ್ರನಾಗಿ ಪಾತ್ರ ನಿರ್ವಹಿಸಿದ ಕಾರ್ಯಕ್ರಮದ ಸಂಘಟಕ ,ಉಜಿರೆ ಅಶೋಕ ಭಟ್‌ರ ವಾಗ್ಝರಿ, ತ್ರಿಶಂಕುವಾಗಿ ಸರ್ಪಂಗಳ ಈಶ್ವರ ಭಟ್‌ರ ಗಾಢ ಜ್ಞಾನ,ವಸಿಷ್ಠರಾಗಿ ಪಾತ್ರ ನಿರ್ವಹಿಸಿದ ಪಶುಪತಿ ಶಾಸ್ತ್ರಿಯವರ ಹಿತಮಿತ ಮಾತು, ಸದಾಶಿವ ಆಳ್ವರ ದೇವೇಂದ್ರ ಮತ್ತು ಕಿರಿಯ ಅರ್ಥದಾರಿ ವಿಜಯಶಂಕರ ಆಳ್ವರ ಹರಿಶ್ಚಂದ್ರ ಕಲಾಸಕ್ತರನ್ನು ಕೊನೆಯ ತನಕ ಹಿಡಿದಿಡುವಲ್ಲಿ ಯಶಸ್ವಿಯಾಯಿತು.

ಎರಡನೇ ದಿನದ ಪ್ರಸಂಗ “ಕಚ ದೇವಾಯಾನಿ’. ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿತವಾದ ಪ್ರಖ್ಯಾತ ಭಾಗವತರ ಅನುಪಸ್ಥಿತಿ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದರೂ, ರಮೇಶ್‌ ಭಟ್‌ ಪುತ್ತೂರು ತಮ್ಮ ಕಂಠಶ್ರೀಯಿಂದ ಅದನ್ನು ತುಂಬಿಸಿ ಕೊಟcರು.ಎಂಜಿನಿಯರಿಂಗ್‌‌ ವಿದ್ಯಾರ್ಥಿ ಚಿನ್ಮಯ ಕೃಷ್ಣ ರ ಭಾಗವತಿಕೆ ಉತ್ತಮ ಕಲಾವಿದನಾಗಿ ಬೆಳೆಯುವ ಭರವಸೆ ನೀಡಿತು. ಚೆಂಡೆ ಮದ್ದಳೆಯಲ್ಲಿ ಜಗನ್ನಿವಾಸ ರಾವ್‌ ಪುತ್ತೂರು ಮತ್ತು ಗುರುಪ್ರಸಾದ್‌ ಬೊಳಿಂಜಡ್ಕ ಸಹಕರಿಸಿದರು.ರಾಧಾಕೃಷ್ಣ ಕಲ್ಚಾರ್‌ ಕಚನಾಗಿ, ಹಿರಣ್ಯ ವೆ‌ಂಕಟೇಶ್ವರ ಭಟ್‌ ಶ‌ುಕ್ರಾಚಾರ್ಯನಾಗಿ, ಹರೀಶ್‌ಬಳೆಂತಿಮೊಗರು ದೇವಯಾನಿಯಾಗಿ, ರವಿರಾಜ ಪನೆಯಾಲ ವೃಷಪರ್ವನಾಗಿ ಮತ್ತು ಸಿ. ಎಚ್‌. ಸುಬ್ರಹ್ಮಣ್ಯ ಭಟ್‌ ಧೂಮಕೇತನಾಗಿ ಸಹಕರಿಸಿದರು. 

 ಗಿರೀಶ್‌ ರೈ ಕಕ್ಕೆಪದವು ಮೂರನೇ ದಿನದ ಕೂಟದ ಪ್ರಸಂಗ “ಪಂಚವಟಿ’ಯನ್ನು ಸಂಪನ್ನಗೊಳಿಸಿದರು. ಕಿನಿಲಕೋಡಿ ಗಿರೀಶ್‌ ಭಟ್‌ ಮತ್ತು ನೆಕ್ಕರೆಮೂಲೆ ಗಣೇಶ್‌ ಭಟ್‌ ಚೆಂಡೆ ಮದ್ದಳೆಯಲ್ಲಿ ಕೈಚಳಕ ತೋರಿಸಿದರು. ಸೂರಿಕುಮೇರಿ ಗೋವಿಂದ ಭಟ್‌ ಶೂರ್ಪನಖೀ ಪಾತ್ರದಲ್ಲಿ ವಿಶಿಷ್ಟ ಮಾತುಗಳಿಂದ ರಂಜಿಸಿದರೆ, ವಾಸುದೇವ ರಂಗ ಭಟ್‌ ರಾಮನಾಗಿ, ಗಣೇಶ ಕನ್ನಡಿಕಟ್ಟೆ ಲಕ್ಷ್ಮಣನಾಗಿ, ಸಹ ಸಂಘಟಕ ಶೇಣಿ ಗೋಪಾಲ ಭಟ್‌ ಸೀತೆಯಾಗಿ ಪಾತ್ರ ನಿರ್ವಹಿಸಿದರು.
(ಮುಂದಿನ ವಾರಕ್ಕೆ) 
                                  
ಶಂಕರ್‌ ಸಾರಡ್ಕ

Advertisement
Advertisement

Udayavani is now on Telegram. Click here to join our channel and stay updated with the latest news.

Next