ದೇವನಹಳ್ಳಿ: ಬದು ನಿರ್ಮಾಣದಿಂದ ಅಂತರ್ಜಲ ಹೆಚ್ಚಿ, ಉತ್ತಮ ಬೆಳೆ ಹಾಗೂ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ಜಿಪಂ ಸಿಇಒ ಎನ್.ಎಂ.ನಾಗರಾಜ್ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ಆವತಿ ಗ್ರಾಪಂ ವ್ಯಾಪ್ತಿಯ ಬೈರಪ್ಪನಹಳ್ಳಿ ಗ್ರಾಮದಲ್ಲಿ ಜಿಪಂ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಕೃಷಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ರೈತರ ಜಮೀನಿನಲ್ಲಿ ಬದು ನಿರ್ಮಾಣ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಉದ್ಯೋಗ ಚೀಟಿ ಹೊಂದಿರುವ ಕುಟುಂಬಕ್ಕೆ 100 ದಿನಗಳ ಕೆಲಸ, ದಿನವೊಂದಕ್ಕೆ ಪ್ರತಿಯೊಬ್ಬರಿಗೂ 275 ರೂ.ಗಳಂತೆ ಕೂಲಿ ನೀಡಲಾಗುವುದು. ಪುರುಷರು ಮತ್ತು ಮಹಿಳೆಯರಿಗೆ ಸಮಾನ ಕೂಲಿ ನೀಡಲಾಗುವುದು. ಜಿಲ್ಲೆಯಲ್ಲಿ ಈಗಾಗಲೇ ಬದು ನಿರ್ಮಾಣಕ್ಕೆ 1,511 ಹೆಕ್ಟೇರ್ ಗುರಿ ಹೊಂದಲಾಗಿದೆ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಕಾರ್ಮಿಕರು ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಬದು ನಿರ್ಮಾಣದಿಂದ ರೈತರ ಹೊಲಗಳಲ್ಲಿ ಮಣ್ಣಿನ ಸವಕಳಿ ತಡೆಯಬಹು ದು. ಬದು ನಿರ್ಮಾಣ ಮಾಡಿಕೊಳ್ಳುವುದರಿಂದ ಕೊಳವೆ ಬಾವಿ ನೀರು ಪುನಶ್ಚೇತನಗೊಳ್ಳುತ್ತದೆ. ಕೊರೊನಾ ಹಿನ್ನಲೆಯಲ್ಲಿ ಬದು ನಿರ್ಮಾಣದ ವೇಳೆ ವ್ಯಕ್ತಿ ವ್ಯಕ್ತಿಗಳ ನಡುವೆ ಅಂತರ ಕಾಯ್ದುಕೊಳ್ಳಬೇಕು.
ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸಬೇಕು. ಗ್ರಾಮಗಳ ಸ್ವತ್ಛತೆ ಕಾಪಾಡಬೇಕು. ಬದು ನಿರ್ಮಾಣದಿಂದ ಜಮೀನಿನಲ್ಲಿ ಮಳೆಗಾಲದಲ್ಲಿ ಮಣ್ಣಿನ ಸವಕಳಿ ನಿಯಂತ್ರಣ, ತೇವಾಂಶ ಹೆಚ್ಚಾಗಲಿದೆ. ಜಮೀನಿನಲ್ಲಿ ಮಳೆನೀರು ನಿಂತು ಅಂತರ್ಜಲ ಮಟ್ಟ ಹೆಚ್ಚಲಿದೆ ಎಂದರು. ತಾಪಂ ಇಒ ವಸಂತಕುಮಾರ್, ತಾಲೂಕು ಕೃಷಿ ಸಹಾಯಕ ನಿರ್ದೇಶಕ ರೇವಣ್ಣಪ್ಪ ಮನಗೂಳಿ, ಸುಶೀಲಮ್ಮ ಹಾಗೂ ವಿವಿಧ ಅಧಿಕಾರಿಗಳು ಇದ್ದರು.