Advertisement

ಶೀಲಾ ದೀಕ್ಷಿತ್‌ ಇನ್ನಿಲ್ಲ

02:40 AM Jul 21, 2019 | Team Udayavani |

ನವದೆಹಲಿ: ಹಿರಿಯ ಕಾಂಗ್ರೆಸ್‌ ನಾಯಕಿ ಹಾಗೂ ಮೂರು ಬಾರಿ ದೆಹಲಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್‌ (81) ಶನಿವಾರ ಮಧ್ಯಾಹ್ನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

Advertisement

ದೆಹಲಿಯ ಫೋರ್ಟಿಸ್‌ ಎಸ್ಕಾರ್ಟ್ಸ್ ಹಾರ್ಟ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಮಧ್ಯಾಹ್ನ 3.55 ಕ್ಕೆ ಶೀಲಾ ದೀಕ್ಷಿತ್‌ ಕೊನೆಯುಸಿರೆಳೆದಿದ್ದಾರೆ. ಶನಿವಾರ ಬೆಳಗ್ಗೆಯೇ ಹೃದಯಾಘಾತದಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಶೇಷ ವೈದ್ಯರನ್ನೊಳಗೊಂಡ ತಂಡ ಚಿಕಿತ್ಸೆ ನೀಡಿದ ನಂತರ ಸ್ವಲ್ಪ ಸಮಯ ಚೇತರಿಸಿಕೊಂಡಿದ್ದರಾದರೂ, ನಂತರ ಮತ್ತೂಂದು ಹೃದಯಾಘಾತ ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆ ವಿಫ‌ಲವಾಯಿತು. ದೀಕ್ಷಿತ್‌ ಅವರಿಗೆ ಪುತ್ರ ಸಂದೀಪ್‌ ದೀಕ್ಷಿತ್‌, ಪುತ್ರಿ ಲತಿಕಾ ಇದ್ದಾರೆ. ಪುತ್ರ ಸಂದೀಪ್‌ ಕಾಂಗ್ರೆಸ್‌ ನಾಯಕರಾಗಿದ್ದು, ಲೋಕಸಭೆಯ ಸದಸ್ಯರೂ ಆಗಿದ್ದರು.

ಸಾರ್ವಜನಿಕ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು ಪೂರ್ವ ನಿಜಾಮುದ್ದೀನ್‌ ಪ್ರದೇಶದಲ್ಲಿರುವ ಅವರ ಮನೆಯಲ್ಲಿ ಇಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ನಾಯಕರು ಶೀಲಾ ದೀಕ್ಷಿತ್‌ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಭಾನುವಾರ ನಿಗಮ್‌ಬೋಧ್‌ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಶೀಲಾ ದೀಕ್ಷಿತ್‌ ಗೌರವಾರ್ಥ ಎರಡು ದಿನಗಳ ಕಾಲ ಶೋಕಾಚರಣೆಗೆ ದೆಹಲಿ ಸರ್ಕಾರ ಆದೇಶ ಹೊರಡಿಸಿದೆ.

ಮೂರು ಬಾರಿ ಸಿಎಂ: ಶೀಲಾ ದೀಕ್ಷಿತ್‌ ಅವರು 1998 ರಿಂದ 2013ರವರೆಗೆ 15 ವರ್ಷಗಳ ಕಾಲ ದೆಹಲಿಯ ಸಿಎಂ ಆಗಿದ್ದರು. ನಂತರ 2014ರ ಮಾರ್ಚ್‌ನಲ್ಲಿ ಕೇರಳ ರಾಜ್ಯಪಾಲರಾಗಿ ನೇಮಕಗೊಂಡಿದ್ದರೂ, ಕೆಲವೇ ತಿಂಗಳಲ್ಲಿ ರಾಜೀನಾಮೆ ನೀಡಿದರು.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಇವರ ನೇತೃತ್ವದಲ್ಲೇ ಹೋಗಲಾಗಿತ್ತು. ಕಳೆದ ಬಾರಿ ಈಶಾನ್ಯ ದೆಹಲಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರಾದರೂ ಸೋಲನುಭವಿಸಿದ್ದರು. ಜತೆಗೆ ದೆಹಲಿ ಕಾಂಗ್ರೆಸ್‌ನ ಚುನಾವಣಾ ಉಸ್ತುವಾರಿಯೂ ಆಗಿದ್ದರು.

Advertisement

1984ರಲ್ಲಿ ಪ್ರಥಮ ಬಾರಿಗೆ ಉತ್ತರ ಪ್ರದೇಶದ ಕನೌಜ್‌ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಸಂಸದೆಯಾಗಿದ್ದರು. ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯ ಆಪ್ತೆಯಾಗಿದ್ದ ಶೀಲಾ, ರಾಜೀವ್‌ ಸಂಪುಟದಲ್ಲಿ ಸಚಿವೆಯೂ ಆಗಿದ್ದರು.

ಶೀಲಾ ದೀಕ್ಷಿತ್‌ ನಿಧನದಿಂದಾಗಿ ತುಂಬಾ ಬೇಸರವಾಗಿದೆ. ಆತ್ಮೀಯ ಹಾಗೂ ಸ್ನೇಹಪರ ವ್ಯಕ್ತಿತ್ವ ಅವರದ್ದಾಗಿತ್ತು. ದೆಹಲಿಯ ಅಭಿವೃದ್ಧಿಗೆ ಅವರು ಗಮನಾರ್ಹ ಕೊಡುಗೆ ನೀಡಿದ್ದಾರೆ. ಅವರು ಕುಟುಂಬ ಮತ್ತು ಬೆಂಬಲಿಗರಿಗೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ.
-ನರೇಂದ್ರ ಮೋದಿ, ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next