Advertisement

Sandeshkhali Case: ಸಂದೇಶಖಾಲಿ ಪ್ರಕರಣದ ಪ್ರಮುಖ ಆರೋಪಿ ಶೇಖ್ ಷಹಜಹಾನ್ ತಡರಾತ್ರಿ ಬಂಧನ

07:54 AM Feb 29, 2024 | Team Udayavani |

ಕೋಲ್ಕತ್ತಾ: ಸಂದೇಶಖಾಲಿ ಪ್ರಕರಣದ ಪ್ರಮುಖ ಆರೋಪಿ, ತೃಣಮೂಲ ಕಾಂಗ್ರೆಸ್ ನಾಯಕ ಶೇಖ್ ಷಹಜಹಾನ್ ಅವರನ್ನು ಬುಧವಾರ ತಡರಾತ್ರಿ ಬಂಧಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ನಾಯಕ ಮತ್ತು ಆತನ ಸಹಚರರ ಮೇಲೆ ಸಂದೇಶಖಾಲಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಭೂಹಗರಣದ ಆರೋಪ ಹೊರಿಸಿದ್ದಾರೆ.

Advertisement

55 ದಿನಗಳಿಂದ ತಲೆಮರೆಸಿಕೊಂಡಿದ್ದ ಶೇಖ್ ಷಹಜಹಾನ್ ಅವರನ್ನು ಬಂಗಾಳದ ವಿಶೇಷ ಪೊಲೀಸ್ ತಂಡ ಉತ್ತರ 24 ಪರಗಣ ಜಿಲ್ಲೆಯಲ್ಲಿ ಮಧ್ಯರಾತ್ರಿ ಬಂಧಿಸಿದೆ. ಬಂಧನದ ನಂತರ, ಅವರನ್ನು ಬಸಿರ್ಹತ್ ನ್ಯಾಯಾಲಯಕ್ಕೆ ಕರೆದೊಯ್ಯಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಬಂಧನಕ್ಕೆ ಮುನ್ನ ಹಲವು ದಿನಗಳಿಂದ ನಾಯಕನ ಚಟುವಟಿಕೆಗಳ ಮೇಲೆ ತಂಡ ನಿಗಾ ಇರಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿಯಲ್ಲಿ ತೃಣಮೂಲ ಕಾಂಗ್ರೆಸ್‌ನ ಪ್ರಬಲ ವ್ಯಕ್ತಿಯಾಗಿರುವ ಶಹಜಹಾನ್ ಶೇಖ್ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದ್ದು, ಟಿಎಂಸಿ ನಾಯಕ ಮಾಡಿದ ಆಪಾದಿತ ದೌರ್ಜನ್ಯದ ವಿರುದ್ಧ ಮಹಿಳೆಯರ ಗುಂಪು ಪ್ರತಿಭಟನೆಯನ್ನೂ ನಡೆಸಿತ್ತು ಅಲ್ಲದೆ ಸಂದೇಶ್‌ಖಾಲಿಯಲ್ಲಿ ಆಕ್ರೋಶ ಭುಗಿಲೆದ್ದಿತ್ತು.

ಪ್ರತಿಭಟನೆಗೆ ಇಳಿದ ಮಹಿಳೆಯರು ತೃಣಮೂಲ ಕಾಂಗ್ರೆಸ್‌ನ ಶಾಜಹಾನ್ ಶೇಖ್ ಮತ್ತು ಅವರ ಬೆಂಬಲಿಗರ ಮೇಲೆ “ಭೂ ಕಬಳಿಕೆ ಮತ್ತು ಲೈಂಗಿಕ ದೌರ್ಜನ್ಯ ಎಸಗಿರುವ ಗಂಭೀರ ಆರೋಪ ಮಾಡಿದ್ದಾರೆ. ಜನವರಿ 5 ರಿಂದ ನಾಪತ್ತೆಯಾಗಿದ್ದ ಈ ನಾಯಕ ಈ ಹಿಂದೆ 2019 ರಲ್ಲಿ 3 ಬಿಜೆಪಿ ಕಾರ್ಯಕರ್ತರ ಹತ್ಯೆ ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ ಎನ್ನಲಾಗಿದೆ.

ಇದರ ನಡುವೆ ಪಡಿತರ ಮತ್ತು ಭೂ ಹಗರಣಗಳಲ್ಲಿ ಶೇಖ್ ಷಹಜಹಾನ್ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಪಶ್ಚಿಮ ಬಂಗಾಳದಲ್ಲಿ ವಿದ್ಯುತ್ ಇಲಾಖೆ ನೌಕರರ ವಿರುದ್ಧ ಹಿಂಸಾಚಾರದ ಆರೋಪಗಳೂ ಇದ್ದವು, ಇದರ ಪರಿಣಾಮವಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next