ರಾಜ್ಯ, ರಾಷ್ಟ್ರರಾಜಕಾರಣದಲ್ಲಿ ಆರೋಪ, ಪ್ರತ್ಯಾರೋಪ ಮುಂದುವರಿದಿದ್ದರೆ, ಮತ್ತೊಂದೆಡೆ ಪಶ್ಚಿಮಬಂಗಾಳದ ಸಂದೇಶ್ ಖಾಲಿಯಲ್ಲಿ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಘಟನೆಗೆ ಸಂಬಂಧಿಸಿದಂತೆ ಟಿಎಂಸಿ ಮುಖಂಡ ಶಹಜಹಾನ್ ಮತ್ತು ಆತನ ಸಂಗಡಿಗರ ವಿರುದ್ಧ ಭಾರೀ ಪ್ರತಿಭಟನೆ ನಡೆಯುತ್ತಿದೆ. ಅಷ್ಟೇ ಅಲ್ಲ ಈ ಘಟನೆಯ ಸೂತ್ರಧಾರಿ ಶಹಜಹಾನ್ ಬಂಧನಕ್ಕೆ ಆಗ್ರಹಿಸಲಾಗಿದೆ. ಆದರೆ ಎಲ್ಲೆಡೆ ಚರ್ಚೆಗೆ ಎಡೆ ಮಾಡಿಕೊಟ್ಟಿರುವ ಪ್ರಮುಖ ಆರೋಪಿ ಶಹಜಹಾನ್(46ವರ್ಷ) ಯಾರು, ಆತನ ಹಿನ್ನೆಲೆ ಏನು, ತೃಣಮೂಲ ಕಾಂಗ್ರೆಸ್ ಆತನಿಗೆ ರಕ್ಷಣೆ ನೀಡುತ್ತಿರುವುದೇಕೆ ಎಂಬ ಕುರಿತ ಸ್ಥೂಲ ಚಿತ್ರಣ ಇಲ್ಲಿದೆ…
ಮೀನು ಕೆಲಸಗಾರ, ಟ್ರಕ್ ಡ್ರೈವರ್…ಗೂಂಡಾ ಮಾಫಿಯಾ ಟು ರಾಜಕೀಯ:
ಇಟ್ಟಿಗೆ ಗೂಡಿನಲ್ಲಿ, ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಶಹಜಹಾನ್ ಎಂಬ ಅಪರಿಚಿತ ಯುವಕ ಎರಡು ದಶಕದ ಅವಧಿಯಲ್ಲಿ ಸಾರಿಗೆ ವಹಿವಾಟು ಸೇರಿದಂತೆ ವೆಜಿಟೇಬಲ್ ಸಿಂಡಿಕೇಟ್ಸ್ ನಲ್ಲಿ ಸಂಪೂರ್ಣ ಹಿಡಿತ ಸಾಧಿಸುವ ಮೂಲಕ 24 ಪರಗಣಾಸ್ ನ ಸಂದೇಶ್ ಖಾಲಿಯಲ್ಲಿ ಭಾರೀ ಜನಪ್ರಿಯತೆಗಳಿಸಿಬಿಟ್ಟಿದ್ದ. ಈತ ಈಗ ಪಶ್ಚಿಮಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ, ಶಹಜಹಾನ್ ಶೇಕ್ ಸ್ಥಳೀಯ ಶಾಸಕ, ಸಂಸದರಿಗಿಂತಲೂ ಜನಪ್ರಿಯ ಮುಖಂಡ!
ಸಂದೇಶ್ ಖಾಲಿಯ ಸ್ಥಳೀಯರು, ಗ್ರಾಮಸ್ಥರು, ಪೊಲೀಸರು ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿರುವ ಮಾಹಿತಿ ಪ್ರಕಾರ, ಸುಮಾರು ಎರಡು ದಶಕಗಳ ಹಿಂದೆ ಶಹಜಹಾನ್ ಶೇಕ್ ಲಾರಿ ಚಾಲಕನಾಗಿ ವೃತ್ತಿ ಜೀವನ ಆರಂಭಿಸಿದ್ದ. ಕೆಲವೊಮ್ಮೆ ಕಂಡಕ್ಟರ್ ಆಗಿಯೂ ದುಡಿದಿದ್ದ. ಅಷ್ಟೇ ಅಲ್ಲ ಸಂದೇಶ್ ಖಾಲಿಯ ಸ್ಥಳೀಯ ಮಾರ್ಕೆಟ್ ನಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದನಂತೆ.
2003ರಲ್ಲಿ ತನ್ನ ಚಿಕ್ಕಪ್ಪ ಮೊಸ್ಲೆಮ್ ಶೇಕ್ ಕೃಪಾಕಟಾಕ್ಷದಿಂದ ರಾಜಕೀಯ ಪ್ರವೇಶಿಸಿದ್ದ. ನಂತರ ಸಿಪಿಎಂ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಪಂಚಾಯತ್ ಪ್ರಧಾನ್ ಆಗಿದ್ದ. ರಾಜಕೀಯ ಸೇರ್ಪಡೆ ಬಳಿಕ ಶಹಜಹಾನ್ ಲಾರಿ ಚಾಲಕನ ಕೆಲಸಕ್ಕೆ ಗುಡ್ ಬೈ ಹೇಳಿ, ಗೂಂಡಾಗಿರಿಗೆ ಇಳಿದುಬಿಟ್ಟಿದ್ದ. ಸ್ಥಳೀಯ ಮೀನು ವ್ಯಾಪಾರದ ಮೇಲೆ ಹಿಡಿತ ಸಾಧಿಸಿ, ಭೂ ವ್ಯಾಜ್ಯದ ಮಧ್ಯಸ್ಥಿಕೆ ವಹಿಸುವ ಕಾರ್ಯಕ್ಕೆ ಮುಂದಾಗಿದ್ದ. ಹೀಗೆ ಶೇಕ್ ಉತ್ತರ 24 ಪರಗಣಾಸ್ ನಲ್ಲಿ ಪ್ರಮುಖ ಮುಖಂಡನಾಗಿ ಬೆಳೆಯತೊಡಗಿದ್ದ. ಶೇಕ್ ಮತ್ತು ಆತನ ಚಿಕ್ಕಪ್ಪ ಅದೆಷ್ಟು ಪ್ರಭಾವ ಹೊಂದಿದ್ದರೆಂದರೆ 2009ರಿಂದ ಪ್ರತಿ ಚುನಾವಣೆಯಲ್ಲಿ ಎಡಪಕ್ಷ ಅಸ್ತಿತ್ವ ಕಳೆದುಕೊಳ್ಳುತ್ತಾ ಬಂದಿದ್ದರೂ ಕೂಡಾ ಇವರಿಬ್ಬರು ಸಿಪಿಎಂನಿಂದ ಜಯ ಸಾಧಿಸುವ ಮೂಲಕ ಹಿಡಿತಸಾಧಿಸಿದ್ದರು.
ಈ ಅವಧಿಯಲ್ಲಿ ಶೆಹಜಹಾನ್ ಗ್ರಾಮದ ಜನರಿಗೆ ಉದ್ಯೋಗ, ಮೊಬೈಲ್, ಬೈಕ್ ಗಳನ್ನು ನೀಡುವ ಮುಖೇನ ಅಪಾರ ಜನಪ್ರಿಯತೆ ಪಡೆದುಕೊಂಡುಬಿಟ್ಟಿದ್ದ. ಬಡ ಕುಟುಂಬದ ಹೆಣ್ಣುಮಕ್ಕಳ ಮದುವೆ ಹಾಗೂ ಹಿರಿಯ ವ್ಯಕ್ತಿಗಳ ಅಂತ್ಯಸಂಸ್ಕಾರಕ್ಕೆ ಧನ ಸಹಾಯ ಮಾಡುತ್ತಿದ್ದ.
ಸಂದೇಶ್ ಖಾಲಿ ಮತ್ತು ಸುತ್ತಮುತ್ತ ಪ್ರಭಾವಿಯಾಗಿದ್ದ ಶಹಜಹಾನ್ ಶೇಕ್ ತೃಣಮೂಲ ಕಾಂಗ್ರೆಸ್ ನ ಜ್ಯೋತಿಪ್ರಿಯ ಮಲ್ಲಿಕ್ ಜೊತೆ ನಿಕಟಸಂಪರ್ಕ ಹೊಂದಿದ್ದ. ಅದರ ಪರಿಣಾಮ 2013ರಲ್ಲಿ ಮಲ್ಲಿಕ್ ನೇತೃತ್ವದಲ್ಲಿ ಶೇಕ್ ಟಿಎಂಸಿ ಪಾಳಯಕ್ಕೆ ಸೇರ್ಪಡೆಗೊಂಡಿದ್ದ. ಆದರೆ ಚಿಕ್ಕಪ್ಪ ಸಿಪಿಎಂನಲ್ಲೇ ಉಳಿದುಕೊಂಡಿದ್ದರು. ಕೊನೆಗೆ ಶಹಜಹಾನ್ ತನ್ನದೇ ಸಂಗಡಿಗರನ್ನು ಪ್ರತ್ಯೇಕವಾಗಿ ಬೆಳೆಸತೊಡಗಿದ್ದ.
ಶಹಜಹಾನ್ ವಿವಾಹವಾಗಿದ್ದು, ದಂಪತಿಗೆ ನಾಲ್ವರು ಮಕ್ಕಳು. ಪ್ರಸ್ತುತ ಶೇಕ್ ಉತ್ತರ 24 ಪರಗಣಾಸ್ ಜಿಲ್ಲಾ ಪರಿಷತ್ ನ ಮೀನುಗಾರಿಕೆ ಮತ್ತು ಪಶುಸಂಗೋಪನಾ ಇಲಾಖೆಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದು, ಜೊತೆಗೆ ಸಂದೇಶ್ ಖಾಲಿಯ ಟಿಎಂಸಿ ಬ್ಲಾಕ್ ಅಧ್ಯಕ್ಷನಾಗಿದ್ದಾನೆ. ಕಳೆದ ವರ್ಷದ ಪಂಚಾಯತ್ ಚುನಾವಣೆಯಲ್ಲಿ ಟಿಎಂಸಿ ಗೆಲುವು ಸಾಧಿಸುವಲ್ಲಿ ಶೇಕ್ ಪ್ರಮುಖ ಪಾತ್ರ ವಹಿಸಿದ್ದ.
ತೃಣಮೂಲ ಕಾಂಗ್ರೆಸ್ ಸೇರ್ಪಡೆಗೊಂಡ ನಂತರ ಶಹಜಹಾನ್ ಶೇಕ್, ರಕ್ತದಾನ ಶಿಬಿರ, ಬ್ಲಾಂಕೆಟ್ ವಿತರಣೆ, ಸೋಪು ವಿತರಣೆ ಕಾರ್ಯಕ್ರಮಗಳ ಮೂಲಕ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದ.
ಈತ ಮೇಲಿದೆ ಕೊಲೆ, ಸುಲಿಗೆ ಕೇಸ್:
ಶಹಜಹಾನ್ ಶೇಕ್ ಮೇಲೆ ಹಲವಾರು ಕೊಲೆ, ಸುಲಿಗೆ ಪ್ರಕರಣ ದಾಖಲಾಗಿದೆ. ಆದರೆ ಈತ ಪ್ರತಿ ಬಾರಿಯೂ ತಲೆಮರೆಸಿಕೊಳ್ಳುವ ಮೂಲಕ ಶಿಕ್ಷೆಯಿಂದ ನುಣುಚಿಕೊಳ್ಳುತ್ತಿದ್ದಾನೆ ಎಂಬುದು ಪೊಲೀಸರ ಹೇಳಿಕೆ. ಈತ ಬಾಂಗ್ಲಾ ಗಡಿ ಮೂಲಕ ಅಕ್ರಮ ವ್ಯಾಪಾರ-ವಹಿವಾಟು ನಡೆಸುತ್ತಿದ್ದು, ಬಾಂಗ್ಲಾಕ್ಕೆ ಪರಾರಿಯಾಗಿರುವ ಸಾಧ್ಯತೆ ಇದೆ ಎಂಬುದು ಪೊಲೀಸ್ ಮೂಲಗಳ ಶಂಕೆ. 2020ರಲ್ಲಿ ಬಿಜೆಪಿಯ ಇಬ್ಬರು ಮುಖಂಡರ ಹತ್ಯೆ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದ. ಇಷ್ಟೆಲ್ಲಾ ಆರೋಪಗಳ ನಡುವೆಯೇ ಸರ್ಬೇರಿಯಾ ಅಗರ್ಹಾತಿ ಗ್ರಾಮ ಪಂಚಾಯತ್ ಕೇಂದ್ರ ಸರ್ಕಾರದ ಶಿಶು ಸ್ನೇಹಿ ಗ್ರಾಮಪಂಚಾಯತ್ ಪ್ರಶಸ್ತಿಗೆ ಭಾಜನವಾಗಿತ್ತು. ಇದಕ್ಕೆ ಕಾರಣನಾಗಿದ್ದು, ಶಹಜಹಾನ್, ಈ ಪ್ರದೇಶದಲ್ಲಿನ ಮಕ್ಕಳ ಕಳ್ಳಸಾಗಣೆಯನ್ನು ತಡೆಯಲು ಪ್ರಮುಖ ಪಾತ್ರ ವಹಿಸಿದ್ದನಂತೆ!
ರಾಬಿನ್ ಹುಡ್ ಇಮೇಜ್ ನ ಶೇಕ್ ಮುಖವಾಡ ಕಳಚಿದ್ದು ಹೇಗೆ?
ಸಂದೇಶ್ ಖಾಲಿ ಪ್ರದೇಶದಲ್ಲಿ ತನ್ನದೇ ಪ್ರಭಾವ ಬೆಳೆಸಿಕೊಂಡಿದ್ದ ಶಹಜಹಾನ್ ಶೇಕ್, ಜನರಲ್ಲಿ ಗೌರವ ಹಾಗೂ ಭೀತಿ ಎರಡನ್ನೂ ಹಿಡಿದಿಟ್ಟುಕೊಂಡಿದ್ದ. ಆದರೆ ಕೆಲವು ದಿನದ ಹಿಂದೆ ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ಮಾಡಲು ಹೋದಾಗ, ಶೇಕ್ ಬೆಂಬಲಿಗರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಈ ಘಟನೆ ಬಳಿಕ ಟಿಎಂಸಿ ಗೂಂಡಾಗಳು ಅತ್ಯಾಚಾರ ಎಸಗಿದ್ದರು. ಈ ಶೋಷಣೆ ವಿರುದ್ಧ ಆಕ್ರೋಶಗೊಂಡ ಮಹಿಳೆಯರು ಕಳೆದ ಒಂದು ವಾರದಿಂದ ಶೇಕ್ ಬಂಧನಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ಮುಖಂಡರು ಇದಕ್ಕೆ ಸಾಥ್ ನೀಡಿದ್ದಾರೆ. ಇಷ್ಟೆಲ್ಲಾ ಆದರೂ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂದೇಶ್ ಖಾಲಿ ಘಟನೆ ಬಗ್ಗೆ ತುಟಿಬಿಚ್ಚದೇ, ಶೇಕ್ ಬೆಂಬಲಕ್ಕೆ ನಿಂತಿರುವ ಬಗ್ಗೆ ಗ್ರಾಮಸ್ಥರು ತಿರುಗಿಬಿದಿದ್ದಾರೆ.