ನಿರೂಪಕಿಯಾಗಿದ್ದ ಶೀತಲ್‌ಶೆಟ್ಟಿ ನಟಿಯಾಗಿ ಗುರುತಿಸಿಕೊಂಡರು. ಅಷ್ಟೇ ಅಲ್ಲ, ಇದೀಗ ನಿರ್ದೇಶಕಿ ಎನಿಸಿಕೊಂಡಿದ್ದಾರೆ. ಹೌದು, ಶೀತಲ್‌ಶೆಟ್ಟಿ ಈಗ ಕಿರುಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಜವಾಬ್ದಾರಿ ವಹಿಸಿಕೊಂಡಿರುವ ಶೀತಲ್‌ಶೆಟ್ಟಿ, ಸುಮಾರು ಹದಿನೈದು ನಿಮಿಷದ ಕಿರುಚಿತ್ರ ನಿರ್ದೇಶಿಸುತ್ತಿದ್ದಾರೆ. ಅವರ ಕಿರುಚಿತ್ರಕ್ಕೆ “ಕಾರು’ ಎಂದು ನಾಮಕರಣ ಮಾಡಲಾಗಿದೆ.
ಇದೊಂದು ಬಾಲಕಿಯೊಬ್ಬಳ ಸುತ್ತ ನಡೆಯುವ ಕಥೆ. ಚಿಕ್ಕಂದಿನಲ್ಲಿ ಪ್ರತಿಯೊಬ್ಬರಿಗೂ ಒಂದಷ್ಟು ಕನಸುಗಳು ಇದ್ದೇ ಇರುತ್ತೆ. ಅದರಲ್ಲೂ ಯಾವುದಾದರೊಂದು ವಸ್ತು ಕನಸಾಗಿರುತ್ತೆ. ಅದರಲ್ಲಿ ಕೆಲವು ನಿಜವಾಗಿ ಮತ್ತೆ ಕೆಲವು ಸುಳ್ಳಾಗುವುದೂ ಉಂಟು. ಇನ್ನೂ ಕೆಲವು ಕನಸು ಭ್ರಮೆ ಆಗಲೂಬಹುದು. ಇದೇ ಕಥಾಹಂದರ ಇಟ್ಟುಕೊಂಡು ಶೀತಲ್‌ಶೆಟ್ಟಿ ಹೊಸಬಗೆಯ ಕಿರುಚಿತ್ರ ಕಟ್ಟಿಕೊಡಲು ಹೊರಟಿದ್ದಾರೆ.
ಇದು ಹಳ್ಳಿಯೊಂದರಲ್ಲಿ ನಡೆಯುವ ಈ ಕಥೆ ಆಗಿರುವುದರಿಂದ ಮಧುಗಿರಿಯ ಸುತ್ತಮುತ್ತ ಚಿತ್ರೀಕರಿಸುವ ಯೋಚನೆ ಶೀತಲ್‌ಶೆಟ್ಟಿ ಅವರದು. ಈಗಾಗಲೇ ಶೀತಲ್ “ಸಂಗಾತಿ’ ಎಂಬ ಕಿರುಚಿತ್ರದಲ್ಲಿ ಕೆಲಸ ಮಾಡಿದ್ದರು. ಅದು ಒಂದಷ್ಟು ಅನುಭವ ತಂದುಕೊಟ್ಟಿರುವ ಹಿನ್ನೆಲೆಯಲ್ಲಿ “ಕಾರು’ ಕಿರುಚಿತ್ರಕ್ಕೆ ಕೈ ಹಾಕಿದ್ದಾರೆ. ಈ ಕಿರುಚಿತ್ರಕ್ಕೆ “ನಡುವೆ ಅಂತರವಿರಲಿ’ ಚಿತ್ರದ ಛಾಯಾಗ್ರಾಹಕ ಯೋಗೀಶ್ವರ್ ಛಾಯಾಗ್ರಹಣ ಮಾಡಲಿದ್ದಾರೆ.
ಪ್ರದೀಪ್ ರಾವ್ ಸಂಕಲನವಿದೆ. ಅನಂತ್ ಕಾಮತ್ ಸಂಗೀತವಿದೆ. ಈ ಕಿರುಚಿತ್ರದ ಬಾಲಕಿ ಪಾತ್ರಕ್ಕೆ ಶೀತಲ್ ಆಡಿಷನ್ ನಡೆಸಿದ್ದರು. ಸುಮಾರು 200 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಆ ಪೈಕಿ ಇಬ್ಬರು ಬಾಲಕಿಯರನ್ನು ಆಯ್ಕೆ ಮಾಡಿಕೊಂಡು ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ. ಈಗಾಗಲೇ ಚಿತ್ರೀಕರಣ ನಡೆಯುತ್ತಿದ್ದು, ಆದಷ್ಟು ಬೇಗ ಮುಗಿಸಿ, ಡಿಸೆಂಬರ್‌ನಲ್ಲಿ ನಡೆಯುವ ಗೋವಾ ಶಾರ್ಟ್‌ಫಿಲ್ಮ್ ಫೆಸ್ಟಿವಲ್‍ಗೆ ಕಳುಹಿಸುವ ಯೋಚನೆ ಶೀಲತ್ ಅವರಿಗಿದೆ.