ರಾಯಬಾಗ: ಪಟ್ಟಣದಲ್ಲಿ ಸೋಮವಾರ ನಡೆಯುವ ಕುರಿ ಆಡುಗಳ ಸಂತೆ ಈಗ ಮತ್ತೆ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆಯುತ್ತಿದ್ದು, ಇದು ಬಸ್ ನಿಲ್ದಾಣವೋ? ಇಲ್ಲಾ ಕುರಿ ಆಡುಗಳ ಸಂತೆ ಮಾರುಕಟ್ಟೆಯೋ ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ.
ಪಟ್ಟಣದಲ್ಲಿ ಪ್ರತಿ ಸೋಮವಾರ ಕುರಿ-ಆಡುಗಳ ಸಂತೆ ಜರುಗುತ್ತಿದ್ದು, ಪ್ರಸಿದ್ಧಿ ಪಡೆದ ಈ ಸಂತೆಗೆ ಹಬ್ಬಗಳು ಸಮೀಪಿಸುತ್ತಿದ್ದಂತೆ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ ಮತ್ತು ಆಂಧ್ರ ಪ್ರದೇಶಗಳಿಂದಲೂ ವ್ಯಾಪಾರಸ್ಥರು ಬರುತ್ತಾರೆ.
ಬಸ್ ನಿಲ್ದಾಣದ ಆವರಣದಲ್ಲಿ ನಡೆಯುತ್ತಿದ್ದ ಕುರಿ-ಆಡುಗಳ ಸಂತೆಯಿಂದ ಪ್ರಯಾಣಿಕರಿಗೆ ಆಗುವ ತೊಂದರೆ ಗಮನಿಸಿ ಇತ್ತೀಚಿನ ಕೆಲವು ತಿಂಗಳ ಹಿಂದೆ ಬೇರೆ ಕಡೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಈ ವಾರ ಮತ್ತೆ ಬಸ್ ನಿಲ್ದಾಣದಲ್ಲಿ ಸಂತೆ ಜಮಾಯಿಸಿದ್ದು, ಪ್ರಯಾಣಿಕರು ಮತ್ತೆ ಕಿರಿ ಕಿರಿ ಅನುಭವಿಸುವಂತಾಯಿತು. ಕುರಿ ಆಡುಗಳನ್ನು ತುಂಬಲು ಬಂದ ಖಾಸಗಿ ವಾಹನಗಳು ಬಸ್ ನಿಲ್ದಾಣದಲ್ಲಿ ನಿಂತಿದ್ದರಿಂದ ಸಾರಿಗೆ ವಾಹನಗಳು ನಿಲ್ದಾಣಕ್ಕೆ ಬಂದು ಹೋಗಲು ಹರಸಾಹಸ ಪಡುವಂತಾಯಿತು.
ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸಂತೆ ನಡೆದರೂ ನಂತರ ಬಸ್ ನಿಲ್ದಾಣ ಆವರಣ ಕುರಿ, ಆಡುಗಳ ಹಿಕ್ಕೆ, ಮೂತ್ರ, ಕಸಕಡ್ಡಿಗಳಿಂದ ಗಲೀಜುಗೊಂಡು ಗಬ್ಬೆದ್ದು ನಾರುತ್ತದೆ. ಇದರಿಂದ ಪ್ರಯಾಣಿಕರು ವಾರವಿಡಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಉಂಟಾಗುತ್ತದೆ. ಕೂಡಲೇ ಜಾನುವಾರು ಸಂತೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂಬುದು ಪಟ್ಟಣದ ನಾಗರಿಕರ ಒತ್ತಾಯವಾಗಿದೆ.
ರಾಯಬಾಗ ಪಟ್ಟಣದ ಬಸ್ ನಿಲ್ದಾಣ ಆವರಣದಲ್ಲಿ ಕುರಿ ಆಡುಗಳ ಸಂತೆ ಈಗ ಮತ್ತೆ ಕೂಡಿರುವುದು ತಮಗೂ ಕಂಡು ಬಂದಿದೆ. ಕುರಿ ಆಡುಗಳ ಸಂತೆ ಮಾರುಕಟ್ಟೆಯನ್ನು ಬೇರೆಡೆ ಸ್ಥಳಾಂತರಿಸುವಂತೆ ತಹಶೀಲ್ದಾರ್ ಅವರಿಗೆ ದೂರು ನೀಡಿದ್ದೇನೆ. ಮುಂದಿನ ವಾರ ಬೇರೆಡೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. –
ಎಸ್.ಬಿ. ಹಂಚಿನಾಳಕರ, ವ್ಯವಸ್ಥಾಪಕರು, ಸಾರಿಗೆ ಘಟಕ-ರಾಯಬಾಗ