ದೇವದುರ್ಗ: ಸ್ಥಳೀಯ ಕೃಷಿ ಮಾರುಕಟ್ಟೆಯಲ್ಲಿ ಕುರಿ ಮತ್ತು ಮೇಕೆಗೆ ವೈಜ್ಞಾನಿಕ ಬೆಲೆ ಒದಗಿಸಲು ಅನುಕೂಲವಾಗುವಂತೆ ಅಳವಡಿಸಿರುವ ಕುರಿ-ಮೇಕೆ ಯಂತ್ರವನ್ನು ಬಳಸದ್ದರಿಂದ ತುಕ್ಕು ಹಿಡಿದು ಹಾಳಾಗುತ್ತಿದೆ.
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಪ್ರತಿ ಶನಿವಾರ ಕುರಿ, ಮೇಕೆಗಳ ವ್ಯಾಪಾರ ನಡೆಯುತ್ತದೆ. ಯಾದಗಿರಿ, ಕಲಬುರಗಿ, ರಾಯಚೂರು, ವಿಜಯಪುರು, ಸುರಪುರ, ಶಹಾಪುರ, ಲಿಂಗಸುಗೂರು ಸೇರಿ ರಾಜ್ಯದ ಇತರೆಡೆಯಿಂದ ಕುರಿ, ಮೇಕೆ ಸಾಕಾಣಿಕೆದಾರರು, ವ್ಯಾಪಾರಸ್ಥರು ಇಲ್ಲಿಗೆ ವ್ಯಾಪಾರಕ್ಕೆ ಆಗಮಿಸುತ್ತಾರೆ. ಲಕ್ಷಾಂತರ ರೂ. ವಹಿವಾಟು ಇಲ್ಲಿ ನಡೆಯುತ್ತದೆ.
ಕುರಿ-ಮೇಕೆಗೆ ಅವುಗಳ ತೂಕಕ್ಕೆ ಅನುಸಾರ ವೈಜ್ಞಾನಿಕ ಬೆಲೆ ಒದಗಿಸಲು ಸರ್ಕಾರ ಸುಮಾರು ಒಂದು ವರ್ಷದ ಹಿಂದೆ 44 ಲಕ್ಷ ರೂ. ವೆಚ್ಚದ ಯೋಜನೆ ರೂಪಿಸಿ ತೂಕದಯಂತ್ರ ಅಳವಡಿಸಿದೆ. ಸಂಸದ ಬಿ.ವಿ. ನಾಯಕರು ಉದ್ಘಾಟನೆ ಮಾಡಿ ವರ್ಷವಾದರೂ ಎಪಿಎಂಸಿ ಅಧಿಕಾರಿಗಳು ಇದರ ಸದ್ಬಳಕೆಗೆ ಮುಂದಾಗದ್ದರಿಂದ ಮತ್ತು ನಿರ್ವಹಣೆ ಕೊರತೆಯಿಂದ ಯಂತ್ರ ಮತ್ತು ವಿದ್ಯುತ್ ತಂತಿಗಳು ಹಾಳಾಗುತ್ತಿವೆ.
ಹೀಗಾಗಿ ಈಗಲೂ ಹಿಂದಿನಂತೆಯೇ ಕುರಿ ಮೇಕೆಗಳನ್ನು ತೂಕ ಮಾಡದೇ ಖರೀದಿದಾರರು ಕೇಳುವ ಮನಸೋಇಚ್ಛೆ ದರಕ್ಕೆ ಮಾರಲಾಗುತ್ತಿದೆ. ಇದರಿಂದ ಕುರಿ, ಮೇಕೆ ಸಾಕಾಣಿಕೆದಾರರಿಗೆ ಯೋಗ್ಯ ಬೆಲೆ ದೊರೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಕುರಿ-ಮೇಕೆ ಸಾಕಾಣಿಕೆದಾರರು, ರೈತರು ತೂಕದ ಯಂತ್ರ ಉಪಯೋಗಕ್ಕೆ ಮುಂದಾಗಬೇಕೆಂದು ಹಲವು ಬಾರಿ ಎಪಿಎಂಸಿ ಅಧಿಕಾರಿಗಳು, ಆಡಳಿತ ಮಂಡಳಿ ಗಮನಕ್ಕೆ ತಂದರೂ ಇಂದು-ನಾಳೆ ಎನ್ನುತ್ತಾ ದಿನ ದೂಡುತ್ತಿದ್ದಾರೆ ಎಂದು ರೈತರಾದ ಶಿವಪ್ಪ, ಗನಿಸಾಬ ಆರೋಪಿಸಿದ್ದು, ಕೂಡಲೇ ತೂಕದ ಯಂತ್ರ ಸದ್ಬಳಕೆಗೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.
ಕುರಿ ಮತ್ತು ಮೇಕೆ ಯಂತ್ರಗಳ ಸದ್ಬಳಕೆಗೆ ತಯಾರಿ ಮಾಡಲಾಗುತ್ತಿದೆ.
ತಿಮ್ಮಪ್ಪ ನಾಯಕ, ಮೇಲ್ವಿಚಾರಕ ಎಪಿಎಂಸಿ