ಬೆಂಗಳೂರು: ಆನ್‌ಲೈನ್ ಮೂಲಕ ಮನೆ ಮನೆಗೆ ಕುರಿ ಮತ್ತು ಮೇಕೆ ಮಾಂಸ ಮಾರಾಟ ವ್ಯವಸ್ಥೆಯನ್ನು ಶೀಘ್ರದಲ್ಲಿ ಜಾರಿಗೆ ತರಲಿದ್ದೇವೆ ಎಂದು ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಹಕಾರಿ ಸಂಘದ ಅಧ್ಯಕ್ಷ ಸಿ.ವಿ.ಲೋಕೇಶ್ ಗೌಡ ಮಾಹಿತಿ ನೀಡಿದರು.
ಬಾಗಲಕೋಟೆ, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರದಲ್ಲಿ ಸಂಘದ ವತಿಯಿಂದ ಶೀಘ್ರದಲ್ಲಿ ಕಸಾಯಿಖಾನೆ ಆರಂಭಿಸಲಾಗುತ್ತಿದೆ. ಮನೆ ಮನೆಗೆ ಆನ್‌ಲೈನ್ ಮೂಲಕ ಕುರಿ, ಮೇಕೆ ಮಾಂಸ ತಲುಪಿಸಲು ಬೇಕಾದ ವ್ಯವಸ್ಥೆ ಮಾಡಲಿದ್ದೇವೆ. ಡಯಲ್ ಫಾರ್ ಮಟನ್ ಎಂಬ ಆ್ಯಪ್ ರೂಪಿಸಿ ಮನೆ-ಮನೆಗೆ ಶುದ್ಧ ಮತ್ತು ಗುಣಮಟ್ಟದ ಕುರಿ ಮತ್ತು ಮೇಕೆ ಮಾಂಸ ನೀಡಲಿದ್ದೇವೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಾಯೋಗಿಕವಾಗಿ ಬೆಂಗಳೂರು ನಗರದ ಉತ್ತರ ಭಾಗದಲ್ಲಿ ಮಾಂಸ ವಿತರಣೆ ಮಾಡಲಾಗುತ್ತಿದೆ. ಇದು ಯಶಸ್ವಿಯಾದಲ್ಲಿ, ಆನ್‌ಲೈನ್ ಆಹಾರ ಸರಬರಾಜು ಸಂಸ್ಥೆಗಳಾದ ಸ್ವಿಗಿ, ಜೋಮ್ಯಾಟೋ ಮಾದರಿಯಲ್ಲಿ ರಾಜ್ಯಾದ್ಯಂತ ಗ್ರಾಹಕರಿಂದ ಡಯಲ್ ಫಾರ್ ಮಟನ್ ಆ್ಯಪ್ ಮೂಲಕ ಮಾಂಸದ ಬೇಡಿಕೆ ಪಡೆದು ಮನೆಗೆ ಪೂರೈಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು ಮತ್ತು ಕುರಿ ಸಾಕಾಣಿಕೆದಾರರಿಗೆ ಹೆಚ್ಚಿನ ಲಾಭ ದೊರಕಿಸಿ ಕೊಡಬೇಕೆಂಬ ಉದ್ದೇಶದಿಂದ 24 ಜಿಲ್ಲೆಗಳಲ್ಲಿ ಕುರಿ ಮತ್ತು ಮೇಕೆ ಖರೀದಿ ಕೇಂದ್ರ ಸ್ಥಾಪಿಸಲಾಗುತ್ತಿದೆ. ತೂಕ ಆಧಾರಿತವಾಗಿ ಕುರಿ ಮತ್ತು ಮೇಕೆ ಖರೀದಿ ನಡೆಯಲಿದೆ. ಹೈನುಗಾರಿಕೆಗೆ ಬರುವ ಯುವ ಸಮೂಹಕ್ಕೆ ಪ್ರೋತ್ಸಾಹ ನೀಡುವುದು ಸೇರಿದಂತೆ ಈ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆಲ ಸೌಲಭ್ಯ ನೀಡುವಂತೆ ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಅವರಿಗೆ ಮನವಿ ಮಾಡಿದ್ದೇವೆ ಎಂದರು. ಸಂಘದ ನಿರ್ದೇಶಕರಾದ ಎಚ್.ಕೆ. ಕುರಿ ತಮ್ಮಯ್ಯ, ಧನರಾಜ್, ಮಹಾಲಿಂಗಪ್ಪ ಸುದ್ದಿಗೋಷ್ಠಿಯಲ್ಲಿದ್ದರು.
ಕುರಿಗಾಹಿಗಳಿಗೆ ಬಂದೂಕು ನೀಡಿ: ಇತ್ತೀಚೆಗೆ ಕುರಿ ಕಳವು ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗಾಗಿ ಕುರಿಗಾಹಿಗಳಿಗೆ ಕುರಿಗಳನ್ನು ಕಾಪಾಡಿ ಕೊಳ್ಳುವುದಕ್ಕೆ ಮತ್ತು ಆತ್ಮರಕ್ಷಣೆಗೆ ಬಂದೂಕು ಪರವಾನಿಗೆ ನೀಡುವುದಕ್ಕೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಈ ಬಗ್ಗೆ ಸರ್ಕಾರ ಕೂಡಲೇ ಕ್ರಮ ಕೈಗೊಂಡು, ಕುರಿಗಾಹಿಗಳಿಗೆ ಬಂದೂಕು ಒದಗಿಸಬೇಕು ಎಂದು ಲೋಕೇಶ್ ಗೌಡ ಒತ್ತಾಯಿಸಿದರು.
ಗ್ರಾಮ ವಾಸ್ತವ್ಯ: ಅ.21ರಂದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನೇರಳೆಕೆರೆ ಗ್ರಾಮದ ಕುರಿಗಾಹಿ ಹಟ್ಟಿಯಲ್ಲಿ ಸಂಘದ ಪದಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಲು ನಿರ್ಧರಿಸಿದ್ದಾರೆ. ದಿನವಿಡೀ ಗ್ರಾಮದಲ್ಲಿ ವಾಸ್ತವ್ಯ ಮಾಡಿ ಅಲ್ಲಿನ ಕುರಿ- ಮೇಕೆ ಸಾಕಾಣಿಕೆದಾರರ ಸಮಸ್ಯೆಗಳನ್ನು ತಿಳಿಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.