ಹೆಣ್ಣು ಯಾವಾಗಲೂ ಮೃದು ಸ್ವಭಾವದವಳೇ. ಹಾಗೆಂದ ಮಾತ್ರಕ್ಕೆ ಅವಳೆಂದೂ ಆತ್ಮವಿಶ್ವಾಸ ಕಳೆದುಕೊಂಡು ಧೃತಿಗೆಡುವವಳಲ್ಲವೇ ಅಲ್ಲ. ತನ್ನ ಪ್ರೀತಿ ಪಾತ್ರರಿಗಾಗಿ ಸೋತು ಗೆಲ್ಲುತ್ತಾಳೆ. ಹಾಗೆಯೇ, ತನ್ನನ್ನು ಅದೇ ತನ್ನ ಕಡೆಗಣಿಸುವವರ ಎದುರು ಗೆದ್ದು “ತಾನೇನು’ ಎಂಬುದನ್ನು ತೋರಿಸುತ್ತಾಳೆ.
ಬೆಳಗ್ಗೆ ಏಳುವಾಗಲೇ ಇಡೀ ದಿನ “ನಡೆಯಬಹುದಾದ’ ಆಗುಹೋಗುಗಳ ಚಿತ್ರ ಅವಳ ಕಣ್ಣ ಮುಂದೆ ಇರುತ್ತದೆ. ತನ್ನ ಮನೆ/ ಪರಿವಾರದ ಬಗ್ಗೆ ಯೋಚಿಸುತ್ತಾ, ಹಾಗೆಯೇ ತನ್ನ ಕಚೇರಿಯಲ್ಲಿಯ ಇಂದಿನ ದಿನದ ಮುಖ್ಯವಾದ ಕೆಲಸಗಳನ್ನು ಮೆಲುಕು ಹಾಕುತ್ತ, ಇ¨ªೆರಡು ಕೈಗಳಿಗೆ ಆನೆ ಬಲ ಕೊಟ್ಟು ಎಲ್ಲವನ್ನು ಸರಿಸಮಾನವಾಗಿ ನಿಭಾಯಿಸುವುದು ಅವಳಿಗಲ್ಲದೆ ಇನ್ಯಾರಿಗೆ ಸಾಧ್ಯ ಹೇಳಿ… ನಾನು ಬರೆಯುತ್ತಿರುವ ಅವಳು, ಅವಳ ನಂಬಿಕೆಗೆ, ಅವಳ ಆತ್ಮವಿಶ್ವಾಸಕ್ಕೆ, ಅವಳಿಟ್ಟ ನಂಬಿಕೆಗೆ ಛಲ ಸಾಧಿಸುವ ಹೆಣ್ಣು. ಯಾರಾದರೂ ಅವಳನ್ನು “ನೀನು ಇಷ್ಟು ಸಲೀಸಾಗಿ ಎಲ್ಲವನ್ನು ಹೇಗೆ ನಿಭಾಯಿಸುತ್ತೀಯ?’ ಎಂದು ಕೇಳಿದರೆ ಅವಳು ನಗುತ್ತಲೆ ಉತ್ತರಿಸುತ್ತಾಳೆ, “ನಾನು ಹೆಣ್ಣಾಗಿ ಹುಟ್ಟಿರುವುದೇ ನನ್ನ ಶಕ್ತಿ, ನನ್ನ ಹೆಮ್ಮೆ’ ಎಂದು.
ಮೊದಲು ನಮ್ಮ ಬಗ್ಗೆ ನಮಗೆ ಹೆಮ್ಮೆಯಿರಲಿ, ಕೀಳರಿಮೆ ಬೇಡ… ನಿಮ್ಮ ಬಗ್ಗೆ ನಿಮಗೆ ಪ್ರಶಂಸೆಯಿದ್ದರೆ ನೀವು ಏನು ಬೇಕಾದರೂ ಸಾಧಿಸಬಲ್ಲಿರಿ. ಹಾಗೆಯೇ ಜಗತ್ತು ಕೂಡ… ಆಗ ನಿಮ್ಮನ್ನು ನೋಡುವ ದೃಷ್ಟಿಕೋನವೇ ಬೇರೆ. ಹೆಣ್ಣೆಂದರೆ, ಹೆಮ್ಮೆಯಿಂದ ಹೆಮ್ಮರವಾಗಿ ಬೆಳೆದ ಹಸಿರು ತುಂಬಿದ ಮರದಂತೆ, ಎಲ್ಲವನ್ನೂ ತನ್ನೊಳಗೆ ತುಂಬಿಕೊಂಡು, ಅವುಗಳನ್ನು ಬೆಳೆಸುತ್ತಾ ತಾನೂ ಬೆಳೆಯುತ್ತಿರುತ್ತಾಳೆ. ಮರ ಎಲ್ಲ ಋತುಗಳಲ್ಲೂ ತನ್ನನ್ನು ತಾನು ಉಳಿಸಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ. ಹಾಗೆಯೆ ಹೆಣ್ಣು ಕೂಡಾ… ಯಾವುದೇ ಪರಿಸ್ಥಿತಿಯನ್ನು ಸರಾಗವಾಗಿ ನಿಭಾಯಿಸುವ ಸಾಮರ್ಥ್ಯವನ್ನು ಅವಳು ಹೊಂದಿರುತ್ತಾಳೆ.
ಮರ ಹೆಮ್ಮರವಾಗಿ ಬೆಳೆದರೂ ಅದು ತಾಯಿಬೇರನ್ನು ಎಂದಿಗೂ ಮರೆಯುವುದಿಲ್ಲ, ಹೆಣ್ಣು ಕೂಡ ಹಾಗೆಯೇ… ಅವಳು ಮದುವೆಯಾಗಿ ಬೇರೆ ಮನೆಗೆ ಹೋದರೂ ಕೂಡ ತನ್ನ ತವರನ್ನು ಎಂದಿಗೂ ಬಿಟ್ಟುಕೊಡಲಾರಳು.
ಹೆಣ್ಣಿಗೆ ಒಂದು ಮಗುವಾದಾಗ ಅವಳ ಚರ್ಮ ಸುಕ್ಕಾಗಬಹುದು, ಅವಳ ದೈಹಿಕ ಸೌಂದರ್ಯ ಬದಲಾಗಬಹುದು, ರಕ್ತದ ಕೋಡಿ ಹರಿದಿರಬಹುದು, ಅವಳ ಬಗೆಗೆ ಯೋಚಿಸಲು ಸಮಯವೇ ಇರದಿರಬಹುದು. ಆದರೆ ಅದಕ್ಕಾಗಿ ಅವಳೆಂದೂ ಕೊರಗುವುದಿಲ್ಲ. ಅವಳಿಗೆ ಗೊತ್ತು, ಜಗತ್ತಿನಲ್ಲಿ ಹೆಣ್ಣಿಗಲ್ಲದೆ ಇನ್ಯಾರಿಗೂ ಈ ಅಪೂರ್ವ ಶಕ್ತಿ ಇಲ್ಲವೆಂದು.
“ಅವಳು’ ಎಂದರೆ ಹೀಗೆ ಎಂದು ಬಣ್ಣಿಸಲಾಗದಷ್ಟು, ಹಾಡಿನಲ್ಲಿ- ಅಕ್ಷರದಲ್ಲಿ ಹಿಡಿದಿಡಲು ಆಗದಷ್ಟು, ಎತ್ತರಕ್ಕೆ ಬೆಳೆದಿ¨ªಾಳೆ ಹೆಣ್ಣು. ಅವಳು ಕಥೆಯಂತೆ ಬೆಳೆಯುತ್ತಿರುತ್ತಾಳೆ, ಪ್ರಬುದ್ಧಳಾಗುತ್ತಲೇ ಹೋಗುತ್ತಾಳೆ. ಪ್ರತಿನಿತ್ಯ ಹೆಣ್ಣುಮಕ್ಕಳ ಸಾಧನೆಗಳ ಬಗ್ಗೆ ಓದುವಾಗ “ಕೇಳುವಾಗ’ ತನ್ನನ್ನು ತಾನು ಗುರುತಿಸಿಕೊಳ್ಳುವುದಕ್ಕೆ, ಇನ್ನಷ್ಟು ಎತ್ತರಕ್ಕೆ ಬೆಳೆಯಲು ಹಾಗೂ ತನ್ನವರನ್ನು ಬೆಳೆಸಲು ಯಾವಾಗಲೂ ಉತ್ಸುಕಳಾಗಿರುತ್ತಾಳೆ. ಮುಂದುವರಿದ ಮಾತ್ರಕ್ಕೆ ಹಿಂತಿರುಗಿ ನೋಡದೆ ಹೋಗುವವಳಲ್ಲ ಅವಳು. ಅವಳು ಭಾವನೆಗಳ ಮಹಾಪೂರವಲ್ಲವೆ? ಹಿಂದೊಮ್ಮೆ ನೋಡಿದಾಗ ಅವಳಿಗೆ ಕಾಣುವುದು ಎಷ್ಟೋ ನೋವುಗಳು, ನಲಿವುಗಳು, ತಪ್ಪುಗಳು, ಪ್ರೀತಿ ಪ್ರೇಮದ ತೊಳಲಾಟಗಳು, ಬಾಲಿಶ ಕನಸುಗಳು. ಆದರೆ ಈಗ ಅವಳಿಗೆ ಅದೆಲ್ಲವೂ ಜೀವನದ ಪಾಠಗಳಾಗಿ, ಕಲಿಕೆಯಾಗಿ, ಇವನ್ನೆಲ್ಲ ಗೆದ್ದು ಬಂದ ಹೆಮ್ಮೆಯ ಹೆಣ್ಣಾಗಿ ತೋರುವುದು. ಹೆಣ್ಣು ಯಾವಾಗಲೂ ಮೃದು ಸ್ವಭಾವದವಳೇ. ಹಾಗೆಂದ ಮಾತ್ರಕ್ಕೆ ಅವಳೆಂದೂ ಆತ್ಮವಿಶ್ವಾಸ ಕಳೆದುಕೊಂಡು ಧೃತಿಗೆಡುವವಳಲ್ಲವೇ ಅಲ್ಲ. ತನ್ನ ಪ್ರೀತಿ ಪಾತ್ರರಿಗಾಗಿ ಸೋತು ಗೆಲ್ಲುತ್ತಾಳೆ. ಹಾಗೆಯೇ, ತನ್ನನ್ನು ಅದೇ ತನ್ನ ಕಡೆಗಣಿಸುವವರ ಎದುರು ಗೆದ್ದು “ತಾನೇನು’ ಎಂಬುದನ್ನು ತೋರಿಸುತ್ತಾಳೆ.
– ಅನುಪಮಾ ಹೆಗಡೆ