ರೋಂಡಾ(ಸ್ಪೇನ್): ಒಮ್ಮೊಮ್ಮೆ ಪವಾಡ ನಡೆಯುತ್ತಿರುತ್ತದೆ. ಆದರೆ ಕೆಲವೊಮ್ಮೆ ಅಂತಹ ಪವಾಡಗಳಿಗೆ ಸಾಕ್ಷಿಯಾಗಿದ್ದವರು ಭವಿಷ್ಯದಲ್ಲಿಯೂ ನಡೆಯುವ ಘಟನೆವರೆಗೂ ಬದುಕಿರುವುದು ಕಷ್ಟ. ಅದರಲ್ಲಿಯೂ ಕೋವಿಡ್ 19ನಂತಹ ಮಾರಣಾಂತಿಕ ವೈರಸ್ ಜಗತ್ತನ್ನೇ ಕಂಗೆಡಿಸುತ್ತಿರುವ ಸಂದರ್ಭದಲ್ಲಿ ನೂರು ವರ್ಷಗಳ ಹಿಂದೆ ಭೀಕರ ಸೋಂಕಿಗೆ ಸಾಕ್ಷಿಯಾಗಿದ್ದ ಗಟ್ಟಿಗಿತ್ತಿ ಅಜ್ಜಿ ಕೋವಿಡ್ 19 ಸೋಂಕಿಗೂ ಒಳಗಾಗಿ ಬದುಕಿದ ಕಥೆ ಇಲ್ಲಿದೆ…
ಸ್ಪೇನ್ ಮೂಲದ ಇಂಗ್ಲಿಷ್ ದೈನಿಕ ದ ಆಲಿವ್ ಪ್ರೆಸ್ ವರದಿ ಪ್ರಕಾರ, 1918ರಲ್ಲಿ ಅನಾ ಡೆಲ್ ವ್ಯಾಲೆ ಎಂಬ ಪುಟ್ಟ ಮಗುವಾಗಿತ್ತು. ನಂತರ ಮಗು ಸ್ಪ್ಯಾನಿಶ್ ಫ್ಲೂ(ಸೋಂಕಿಗೆ) ತುತ್ತಾಗಿತ್ತು. ಅಂದು 1918ರ ಜನವರಿಯಲ್ಲಿ ಆರಂಭವಾಗಿದ್ದ ಈ ಮಾರಣಾಂತಿಕ ಸೋಂಕು 1920ರ ಡಿಸೆಂಬರ್ ವರೆಗೆ ಬರೋಬ್ಬರಿ 36 ತಿಂಗಳ ಕಾಲ ಜನರನ್ನು ಕಂಗೆಡಿಸಿತ್ತು. ಅಂದು ಸುಮಾರು 500 ಮಿಲಿಯನ್ ಜನರು ಸೋಂಕಿಗೆ ಒಳಗಾಗಿದ್ದರು ಎಂದು ವರದಿ ವಿವರಿಸಿದೆ.
ಇದೀಗ 102 ವರ್ಷಗಳ ನಂತರ ಅಂದು 5ವರ್ಷದ ಮಗುವಾಗಿದ್ದಾಗ ಸ್ಪ್ಯಾನಿಶ್ ಫ್ಲೂಗೆ ಗುರಿಯಾಗಿ ಬದುಕುಳಿದಿದ್ದಾಕೆ ಇಂದು ಮಾರಣಾಂತಿಕ ಕೋವಿಡ್ 19 ವೈರಸ್ ಅನ್ನು ಗೆದ್ದಿರುವ ಘಟನೆ ಸ್ಪೇನ್ ನ ರೋಂಡಾದಲ್ಲಿ ನಡೆದಿದೆ. ರೋಂಡಾ ಸ್ಪೇನ್ ನ ಪರ್ವತಶ್ರೇಣಿಯಲ್ಲಿರುವ ನಗರವಾಗಿದೆ.
ಮಾಧ್ಯಮದ ವರದಿ ಪ್ರಕಾರ, ವ್ಯಾಲೆ ಅವರು ಅಲ್ಕಾಲಾ ಡೆಲ್ ವ್ಯಾಲೆಯಲ್ಲಿರುವ ನರ್ಸಿಂಗ್ ಹೋಮ್ ನಲ್ಲಿ ವಾಸವಾಗಿದ್ದರು. ಇವರು ಇತರ 60 ಮಂದಿ ಜತೆಗಿದ್ದ ವೇಳೆ ಸೋಂಕು ತಗುಲಿತ್ತು ಎಂದು ತಿಳಿಸಿದೆ. ನಂತರ ಅಜ್ಜಿಯನ್ನು ಲಾ ಲಿನೇಯಾ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಕೆಲವು ದಿನಗಳ ಹಿಂದೆ ಕೋವಿಡ್ 19 ಸೋಂಕಿನಿಂದ ಗುಣಮುಖರಾದ ನಂತರ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡಿದ್ದರು.
ಅನಾ ಅವರು 1913ರ ಅಕ್ಟೋಬರ್ ನಲ್ಲಿ ಜನಿಸಿದ್ದರು. ಇನ್ನು ಆರು ತಿಂಗಳು ಕಳೆದರೆ ಈ ಅಜ್ಜಿಗೆ ಬರೋಬ್ಬರಿ 107 ತುಂಬಲಿದೆ. ಅಷ್ಟೇ ಅಲ್ಲ ಸ್ಪೇನ್ ನಲ್ಲಿ ಕೋವಿಡ್ 19 ಸೋಂಕಿಗೆ ಒಳಗಾಗಿ ಬದುಕುಳಿದ ಅತೀ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೇ ಡಚ್ ನ ಕೋರ್ನೆಲಿಯಾ ರಾಸ್ (107) ಎಂಬ ಅಜ್ಜಿ ಕೂಡಾ ಮಹಾಮಾರಿಯಿಂದ ಗುಣಮುಖರಾಗಿದ್ದಾರೆ ಎಂದು ವರದಿ ವಿವರಿಸಿದೆ.
ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳ ಕೆಲಸಕ್ಕೆ ಶ್ಲಾಘಿಸುವುದಾಗಿ ಅಜ್ಜಿಯ ಸೊಸೆ ಪ್ಯಾಕ್ವಿ ಸ್ಯಾಂಚೆ ತಿಳಿಸಿದ್ದಾರೆ. ತಮ್ಮ ಅತ್ತೆಗೆ ತುಂಬಾ ವಯಸ್ಸಾಗಿದ್ದರಿಂದ ಅಧಿಕಾರಿಗಳು ತುಂಬಾ ನಿಧಾನವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಆರೋಗ್ಯ ಚೇತರಿಕೆಗೆ ಸಹಕರಿಸಿದ್ದರು ಎಂದು ತಿಳಿಸಿದ್ದಾರೆ. ಅವರು ಈಗಲೂ ತಾವೇ ಊಟ ಮಾಡುತ್ತಾರೆ. ಕೆಲವು ದಿನ ಸ್ವಲ್ಪ, ಕೆಲವೊಮ್ಮೆ ಕಡಿಮೆ ಹೀಗೆ ಆಹಾರ ಕ್ರಮ ಇಟ್ಟುಕೊಂಡಿದ್ದಾರೆ. ವಾಕರ್ ಹಿಡಿದು ಸ್ವಲ್ಪ ದೂರದವರೆಗೂ ನಡೆಯುತ್ತಾರೆ ಎಂದು ವಿವರಿಸಿದ್ದಾರೆ.
ಸ್ಪೇನ್ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕೋವಿಡ್ 19 ವೈರಸ್ ಗೆ 22,524 ಮಂದಿ ಸಾವನ್ನಪ್ಪಿದ್ದು, ಈವರೆಗೆ 92,355 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದಾರೆ. ಸ್ಪೇನ್ ನಲ್ಲಿ ದಿನಂಪ್ರತಿ ಕೋವಿಡ್ ಗೆ 367 ಮಂದಿ ಸಾವನ್ನಪ್ಪುತ್ತಿದ್ದು, ಮಾರ್ಚ್ 21ರ ಬಳಿಕ ಅದು 324ಕ್ಕೆ ಇಳಿದಿದೆ ಎಂದು ತಿಳಿಸಿದೆ.