Advertisement

ಆಕೆ ತೆಲುಗು ಪಿಲ್ಲ, ಈತ ಕನ್ನಡ ಕುವರ

03:45 AM Jan 24, 2017 | |

‘Is language a barricade for love, friend?’ ಎಂದು ಅವಳು ಅಂದಾಗ ನನಗೆ ಅರ್ಥವಾಗಿದ್ದು ಎಷ್ಟೋ ಕಾಣೆ! ಇಬ್ಬರಿಗೂ ಮತ್ತೂಬ್ಬರ ಪರಸ್ಪರ ಭಾಷೆ ಗೊತ್ತಿಲ್ಲದಾಗ ಹರಕು ಇಂಗ್ಲಿಷ್‌ನ ಮೊರೆ ಹೋಗಿದ್ದೆವು! ಅದೇ ಕೊನೆ ಮತ್ತೆ ಯಾವತ್ತೂ ಇಂಗ್ಲಿಷ್‌ ಬಳಿ ಸಾರಲಿಲ್ಲ. ನಾನು ಕನ್ನಡಿಗ. ಅವಳು ತೆಲುಗು ಪಿಲ್ಲ. ಅವಳಿಗೆ ಕನ್ನಡ ಗೊತ್ತಿಲ್ಲ, ನನಗೆ ತೆಲುಗು ಬರಲ್ಲ. ಆದರೂ ಲವ್ವಾಗಿತ್ತು.

Advertisement

ನಮ್ಮದು ಬರೀ ಭಾಷೆ ಗೊತ್ತಿಲ್ಲದ ಮೌನವಲ್ಲ. ಬಾಯಿ ಒಣಗುವಷ್ಟು ಮಾತು. ನನ್ನದು ಕನ್ನಡದಲ್ಲಿ, ಅವಳದು ತೆಲುಗಿನಲ್ಲಿ. ಇಬ್ಬರೂ ಪರಸ್ಪರ ಮುಖ ನೋಡಿಕೊಳ್ಳುತ್ತಾ, ತುಟಿ ಅಲುಗುವುದನ್ನೇ ಗಮನಿಸುತ್ತಾ, ಕಣ್‌ಗಳ ತುಂಟತನವನ್ನು ತಾಗಿಸಿಕೊಳ್ಳುತ್ತಾ ಕೈ ಹಿಡಿದು ಕೂರುತ್ತಿದ್ದೆವು. ನಮಗೆ ಯಾವತ್ತೂ ಭಾಷೆ ಬೇರೆ ಅನಿಸಲಿಲ್ಲ. ಅದೊಂದು ಅಡ್ಡಿ ಅನಿಸಲೇ ಇಲ್ಲ. ಭಾವ ಒಂದಾದ ಭಾಷೆ ಏನಕ್ಕೆ? ಪ್ರೀತಿ ಒಂದಾಗಿರುವಾಗ ಅದಕ್ಕೆ ಮಾತಿನ ಮೈಲಿಗೆ ಏನಕ್ಕೆ ಅಂದುಕೊಂಡೆವು. 

“ಪ್ರೀತಿ’ ಆಗಿದ್ದು ಮಾತ್ರ ಅನನ್ಯ ಕ್ಷಣ. ನಾಡಿನ ಗಡಿಯಲ್ಲಿ ಚಂದವಾಗಿ ಮಲಗಿದ್ದ ಲೇಪಾಕ್ಷಿ ಬೆಟ್ಟಗಳ ಮಧ್ಯೆದ ದೇವಸ್ಥಾನದಲ್ಲಿ ತಿರುಗುತ್ತಿದ್ದ ನನಗೆ ಕಂಡಿದ್ದು ಈ ಚಂದ್ರ ಚಕೋರಿ. ಹಸಿರು ಲಂಗದ ಅವಳು ಅಮ್ಮನ ಜೊತೆ ಬಂದಿದ್ದಳು. ದೇವಸ್ಥಾನ ಸುತ್ತಾ ಪ್ರದಕ್ಷಣೆ ಹಾಕುವಾಗ ನನ್ನ ಹಿಂದೆಯೇ ಇದ್ದರು. ನಾನು ತಿರುಗಿ ತಿರುಗಿ ನೋಡುತ್ತಲೇ ಇದ್ದೆ. ನೆಟ್ಟ ನೋಟವನ್ನು ತೆಗೆಯಲಾಗುತ್ತಿರಲಿಲ್ಲ. ದೇವರ ದರ್ಶನವೇ ಗೌಣ ಎನಿಸತೊಡಗಿತು ಅವಳ ಮುಂದೆ. ದೇವರೇ ನಿನ್ನ ಸನ್ನಿಧಿಯಲ್ಲಿ ಏನಿದು ನಿನ್ನ ಮಾಯೆ ಅಂದುಕೊಂಡೆ. 

ನಾನು ತಿರುಗಿ ನೋಡಿದಾಗಲೆಲ್ಲಾ ಗುರಾಯಿಸುವಂತೆ ನೋಡುತ್ತಿದ್ದಳು. ಮನಸ್ಸಿನಲ್ಲಿ ಪ್ರೀತಿಯ ಅಮೃತದ ಸೋನೆ ಆರಂಭವಾಗತೊಡಗಿತು. ಇನ್ನೂ ನಿಧಾನಿಸಿ ನಿಧಾನಿಸಿ ಅವರ ಹಿಂದೆ ಬಂದು ಬಿಟ್ಟೆ! ಅವರು ಮುಂದೆ ಆಗಿಬಿಟ್ಟರು. ಈಗ ತಿರುಗಿ ನೋಡುತ್ತಾಳಾ ನೋಡೋಣ ಎಂದು ಹೃದಯ ಹಠ ಹಿಡಿದಿತ್ತು. ನಾನಿನ್ನು ಲೆಕ್ಕಚಾರದಲ್ಲಿ ತೊಡಗಿರುವಾಗಲೇ ಕೋಲಿ¾ಂಚು ಸುಳಿಯಿತು. ತಿರುಗೇ ಬಿಟ್ಟಳು. 

ಒಮ್ಮೆ ಅಲ್ಲ ಕ್ಷಣಕೊಮ್ಮೆ. ಹಸಿರು ಲಂಗ, ಕಾಲ್ಗೆಜ್ಜೆಯ ಕಿಣಿ ಕಿಣಿ, ಮುಂಗುರುಳ ಜೀಕು, ತುಂಬಿದ ಗಲ್ಲ, ಚೆಂದದ ಮೂಗುತಿಗೆ ನನ್ನ ಮನಸ್ಸು ಪ್ರೀತಿಯ ಬೆಲೆಗೆ ಮಾರಾಟವಾಗಿತ್ತು. ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ನೆಲವೇ ನಾಚುವಂತೆ ಅವಳು ನಡೆಯುತ್ತಿದ್ದರೂ ಪ್ರೀತಿಯ ಕೊಂಡಿ ಬೆಸೆಯಲೋ ಅನ್ನುವಂತೆ ಅವಳ ಕಾಲಿನಲ್ಲಿ ಕಾಲ್ಗೆಜ್ಜೆಯ ಕೊಂಡಿ ಕಳಚಿತ್ತು. ಕಳಚಿ ಬಿದ್ದು ನನ್ನೆದುರಿಗೆ ಕಾಣಿಸಿತ್ತು. ಅವರು ಮುಂದೆ ಹೋದಂತೆ ಅದನ್ನು ಎತ್ತಿಕೊಂಡು ಅವರ ಹಿಂದೆಯೇ ಸಾಗಿದೆ. 

Advertisement

ಆದರೆ ಕಾಣಿಸದೆ ಎಲ್ಲೋ ಮರೆಯಾಗಿಬಿಟ್ಟರು. ಗೆಜ್ಜೆಯನ್ನು ಎತ್ತಿಕೊಳ್ಳುವ ಕ್ಷಣದೊಳಗೆ ಎಲ್ಲೋ ಮರೆಗೆ ಸರಿದು ಬಿಟ್ಟಿದ್ದರು. ಮನಸ್ಸು ಒದ್ದಾಡತೊಡಗಿತು. ದೇವಸ್ಥಾನ ಒಂದು ಸುತ್ತು ತಿರುಗಿ ಬಂದ ನನಗೆ ಅಲ್ಲೆಲ್ಲೋ ದೂರದಲ್ಲಿ ಅದೇ ಹುಡುಗಿ ಏನನ್ನೋ ಹುಡುಕುತ್ತಿರುವುದು ಕಾಣಿಸಿತು. ಅರ್ಥವಾಗಲು ತಡವಾಗಲಿಲ್ಲ.

ಮುಂದೆ ನಿಂತು ಕಾಲ್ಗೆಜ್ಜೆ ನೀಡಿದೆ. ಅದೇನೋ ಅಂದಳು. ಅದು ಕನ್ನಡ ಅಲ್ಲ ಅಂತ ಮಾತ್ರ ಗೊತ್ತಾಯ್ತು. ಪಕ್ಕದಲ್ಲೇ
 ಆಂಧ್ರ ಇರುವುದರಿಂದ ತೆಲುಗು ಅಂದುಕೊಂಡೆ. ನಾನು ಕನ್ನಡದಲ್ಲಿ ಈ ಹಿಂದೆ ನಡೆದ ಎಲ್ಲವನ್ನು ಹೇಳಿದೆ. ಅವಳ ಕಣ್ಣುಗಳನ್ನು ನೋಡಿದೆ. ಅವಳು ಕೂಡ ಹಾಗೆಯೇ ನೋಡುತ್ತಿದ್ದಳು. ನೋಟಗಳು ದೀರ್ಘ‌ವಾಗಿ ಬೆರೆತವು. ಹಾಗೆ ಮಾತಾಡುತ್ತಾ ದೇವಸ್ಥಾನದ ಇನ್ನರ್ಧ ಭಾಗ ಸುತ್ತಿ ಬಂದೆವು. ಪೂಜೆಗೆಂದು ಪಡೆದಿದ್ದ ಚೀಟಿಯ ಹಿಂಬದಿಯಲ್ಲಿ ನನ್ನ ಮೊಬೈಲ್‌ ನಂಬರ್‌ ಬರೆದುಕೊಟ್ಟು, ಕಾಲ್‌ ಮಾಡಿ ಅಂತ ಸನ್ನೆ ಮಾಡಿದೆ. ಅವಳ ಚೀಟಿ ತಗೊಂಡು ಕೊಟ್ಟ ಲುಕ್‌ ಅಬ್ಟಾ ಸಾವಿರಾರು ವೋಲ್ಟೆàಜ್‌ ವಿದ್ಯುತ್‌ ಮೈಯಲ್ಲಿ ಹರಿದಂತೆ! 

ಊರಿಗೆ ಬಂದ ಎರಡೇ ದಿನಕ್ಕೆ ಕರೆ ಬಂತು. ಭಾಷೆ ಗೊತ್ತಿಲ್ಲ. ಕೊನೆಗೆ ಇಂಗ್ಲಿಷ್‌ ಮೊರೆಹೋದೆ. ಅವಳು ಕೂಡ ಇಂಗ್ಲಿಷ್‌ನಲ್ಲಿ ಏನೇನೋ ಹೇಳಿದಳು. ಭೇಟಿಯಾಗುವ ನಿರ್ಧಾರಕ್ಕೆ ಬಂದೆವು. ಮತ್ತದೇ ದೇವಸ್ಥಾನ. ಲೆಹಂಗ ಧರಿಸಿ ಬಂದವಳನ್ನು ತುಂಬಿಕೊಳ್ಳಲು ಕಣ್ಣಿನ ಮೆಗಾ ಪಿಕ್ಸಲ್‌ಗೆ ಸಾಕಾಗಲಿಲ್ಲ! ಇಬ್ಬರೂ ಒಂದೆಡೆ ಕುಳಿತು ನಾನು ಕನ್ನಡದಲ್ಲಿ ಅವಳು ತೆಲುಗಿನಲ್ಲಿ ಮಾತಾಡಿದ್ದು ಆಯ್ತು. ಆದರೆ ಇಬ್ಬರಿಗೂ ಅರ್ಥವಾಗಿದ್ದು ಸೊನ್ನೆ. 

ನಾನೇ ಕನ್ನಡದಲ್ಲಿ ನನ್ನ ಪ್ರೀತಿಯನ್ನು ಹೇಳಿಕೊಂಡೆ. ಅವಳಿಗೆ ಅರ್ಥವಾದರೆ ತಾನೇ. ಏನೋ ಮಾತಾಡಿದಳು ನನಗೇನು ಗೊತ್ತು? ಅರ್ಥವಾಗಲ್ಲ ಅನ್ನೋ ಉದ್ದೇಶಕ್ಕೆ ಧೈರ್ಯವಾಗಿ ಪ್ರೀತಿ ಹೇಳಿಬಿಟ್ಟಿದ್ದೆ. ಪ್ರೀತಿ ಹೇಗೆ ತಿಳಿಸಬೇಕು ಅನ್ನುವುದರೊಳಗೆ ಎದ್ದು ಹಣೆಗೆ ಮುತ್ತಿಟ್ಟು ಹೊರಟೇ ಬಿಟ್ಟಳು. ನನಗಿಂತ ಜಾಣೆ ಅವಳು. ಭಾಷೆಯಲ್ಲಿ ಏನಿದೆಯೋ ಮಂಗ? ಅಂದ ಆಗಿತ್ತು. 

ಅಂದಿನಿಂದ ಪ್ರತಿವಾರ ನಮ್ಮ ಭೇಟಿ. ನಾವು ಪರಸ್ಪರ ಭಾಷೆ ಕಲಿಯಬಾರದೆಂದು ನಿರ್ಧರಿಸಿದ್ದೇವೆ. ಮನಸ್ಸಿನಲ್ಲೇ
 ಸಾವಿರ ಮಾತುಗಳಾಗುತ್ತವೆ. ಹರಕು ಇಂಗ್ಲಿಷ್‌ನ ಸಹಾಯ ಬಿಟ್ಟಿದ್ದೇವೆ. ಕಣ್ಣುಗಳೇ ನಮ್ಮ ಸಾರ್ಥಕ ಭಾಷೆ. ನಮಗೆಂದೂ ಭಾಷೆ ಅಡ್ಡಿಯಾಗಿಲ್ಲ. ಮದುವೆ ನಂತರವಷ್ಟೇ ಭಾಷೆ ಕಲಿಯಬೇಕು ಅಂತ ತೀರ್ಮಾನಿಸಿದ್ದೇವೆ. ಅವಶ್ಯವಿದ್ದರೆ ಮಾತ್ರ! ಪ್ರೀತಿಗೆ ಭಾಷೆ ಇಲ್ಲ ಅಂತ ಓದಿದ್ದೆ. ಆದರೆ ನಾನೇ ಭಾಷೆಗೂ ಮೀರಿದ ಪ್ರೀತಿಗೆ ಸಾಕ್ಷಿಯಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ! 

– ಸದಾಶಿವ್‌ ಸೊರಟೂರು

Advertisement

Udayavani is now on Telegram. Click here to join our channel and stay updated with the latest news.

Next