Advertisement
ಭವಿಷ್ಯದ ಆಸೆಗಳಿಗೆ, ಪೋಷಕರು ಕಟ್ಟಿ ಬೆಳೆಸಿದ್ದ ಕನಸುಗಳಿಗೆ ತಿಲಾಂಜಲಿ ನೀಡಿರಬೇಕು… ಇಲ್ಲವೇ ಮರೀಚಿಕೆಯ ಬದುಕ ಕಟ್ಟಿ ಭ್ರಮೆಯ ಗರ್ಭದಲ್ಲೇ ಹುದುಗಿ ಹೋಗುತ್ತಿರಬೇಕು… ಏನಾದರೊಂದು ಆಗಿಯೇ ಇರಬೇಕು… ಏಕೆಂದರೆ, ಅವಳು ಮೊದಲಿನಂತಿಲ್ಲ…
Related Articles
ಕಾಲೇಜಿನಲ್ಲಾಗೋ ಕಾರ್ಯಕ್ರಮಗಳಲ್ಲಿ ಇವಳದೇ ಓಡಾಟ… ಅಲ್ಲಲ್ಲ, ಕಾರುಬಾರು. ಅದೇನು ಸಜ್ಜನಿಕೆ, ನಯ, ವಿನಯ, ಭಯ- ಭಕ್ತಿ… ಗುರುಹಿರಿಯರೆಂದರೆ!
Advertisement
ಅತಿಥಿಗಳ ಆದರೋಪಚಾರ, ಬೀಳ್ಕೊಡುಗೆ ಜವಾಬ್ದಾರಿಯೆಲ್ಲವನ್ನೂ ಪ್ರಿನ್ಸಿಪಾಲರು ಅವಳಿಗೇ ಒಪ್ಪಿಸಿಬಿಡುತ್ತಿದ್ದರು. ಸ್ವಾಗತದಿಂದ ಹಿಡಿದು ವಂದನಾರ್ಪಣೆವರೆಗೂ ಸ್ಟೇಜ್ ಬಿಟ್ಟು, ಮೈಕ್ ಬಿಟ್ಟು ಬರುತ್ತಲೇ ಇರಲಿಲ್ಲ. ಅಷ್ಟೇ ಯಾಕೆ!? ಕಾಲೇಜಿನ ಎಲ್ಲಾ ಸ್ಪರ್ಧೆಗಳಲ್ಲೂ ಇವಳು ಭಾಗವಹಿಸುತ್ತಿದ್ದಳು. ಬಹುಮಾನದ ಕಂತೆಗಳೂ ಅವಳಿಗೇ… ನಾವೆಲ್ಲಾ ಅದೆಷ್ಟು ಹೊಟ್ಟೆ ಉರ್ಕೊತಿದೊ ಅವಳನ್ನು ನೋಡಿ, ದೇವರೇ ಬಲ್ಲ! ಅವಳೊಂಥರಾ ಹೊಳೆಯೋ ನಕ್ಷತ್ರದಂತೆ. ಹೋದಲೆಲ್ಲಾ ಬೆಳಕ ಪ್ರಭಾವಳಿ..!
ಆದರೆ ಆ ನಕ್ಷತ್ರ ಇತ್ತೀಚಿಗೆ ಹೊಳೆಯುತ್ತಿಲ್ಲ. ಬೆಳಕು ತೋರುತ್ತಿಲ್ಲ.
ಅದ್ಭುತ ನಿರೂಪಕಿಯಾಗಿದ್ದಳಾಕೆ. ಕಾರ್ಯಕ್ರಮದಲ್ಲಿ ಉಪನ್ಯಾಸಕರ ಮನ ನೋಯದಂತೆ ಅವರ ಕಾಲೆಳೆದು, ಅವರ ಮೇಲೆ ಹಾಸ್ಯದ ಚಟಾಕಿ ಹಾರಿಸಿ ಎಲ್ಲರ ನಗುವಿಗೆ ಕಾರಣವಾಗ್ತಿದು. ಈಗ, ಕಾರ್ಯಕ್ರಮದ ನಿರ್ವಾಹಕತ್ವವೂ ಇವಳದಲ್ಲ. ವೇದಿಕೆಯ ಮೆಟ್ಟಿಲೂ ಹತ್ತುತ್ತಿಲ್ಲ. ಕಾರ್ಯಕ್ರಮ ಯಾಕೋ ಬಿಕೋ ಎನಿಸುತ್ತೆ ಅವಳಿಲ್ಲದೆ…!
ಅತ್ತ, ಇಳಿ ಹೊತ್ತಾದರೂ ಮನೆಗೆ ಬರಲಿಲ್ಲವಲ್ಲಾ ಎಂದು ಹೆತ್ತವರ ಚಡಪಡಿಕೆ. ಸ್ಪೆಷಲ್ ಕ್ಲಾಸ್ ಎಂಬ ಕಾರಣ ಹೇಳಿ ತಂದೆ ತಾಯಿಯರ ಬಾಯಿ ಮುಚ್ಚಿಸುತ್ತಾಳೆ. ಎದುರು ರಸ್ತೆಯಲ್ಲೇ ಇರೋ ನಮ್ಮ ಮನೆ ಅವಳ ಪಾಲಿಗೆ ಜ್ವಾಲಾಮುಖೀ ಪರ್ವತವಿದ್ದಂತೆ. ಯಾವಾಗ ಸಿಡಿದು ನಾನು ಅವಳ ಗುಟ್ಟೆಲ್ಲವನ್ನೂ ಅವಳ ಮನೆಯವರಿಗೆ ಹೇಳಿಬಿಡುವೆನೋ ಅನ್ನೋ ಭಯ ಅವಳಿಗೆ. ಅದಕ್ಕೇ ಈಗೀಗ ನನಗೆ ಪೂಸಿ ಹೊಡೆಯೋದು ಜಾಸ್ತಿಯಾಗಿಬಿಟ್ಟಿದೆ. ಅವರಮ್ಮನಿಗೆ ನಾನೋ ಅಚ್ಚುಮೆಚ್ಚು. ಅವರು ಕಾಲೇಜಿನ ಕುರಿತು ಏನಾದರೂ ಕೇಳಿದರೆ ಸಾಕು ಅವಳು ನೀರಿನಿಂದ ಹೊರತೆಗೆದ ಮೀನಿನಂತೆ ವಿಲ ವಿಲನೆ ಒದ್ದಾಡುತ್ತಾಳೆ. ನಿಜ ಹೇಳಬೇಕೆಂದರೆ ಎಷ್ಟೋ ಬಾರಿ ಅವಳ ವಿಚಾರಗಳನ್ನು ಅವರಮ್ಮನಿಗೆ ಹೇಳ್ಳೋ ಪ್ರಯತ್ನ ನಡೆಸಿದ್ದೆ. ಆದರೆ ಅವಳ ಗೋಗರೆತಕ್ಕೆ ಓಗೊಟ್ಟು ಕನಿಕರವಿಟ್ಟು ಸುಮ್ಮನಾಗಿದ್ದೆ.
ಇಷ್ಟು ವರ್ಷಗಳ ಪರಿಶ್ರಮ, ಕನಸು ಎಲ್ಲವನ್ನೂ ಮರೆತು ಪ್ರೀತಿ ಎಂಬ ದೀಪದ ಸುತ್ತ ಸುತ್ತುವ ಹುಳುವಿನಂತಾಗಿರುವ ಅವಳು ಆ ಆಕರ್ಷಣೆಯಿಂದ ಆದಷ್ಟು ಬೇಗನೆ ಹೊರಬರಲಿ ಎಂಬುದಷ್ಟೆ ನನ್ನ ವಿನಂತಿ.
– ಅರ್ಚನಾ ಎಚ್.