Advertisement

ಭತ್ತದ ಜತೆಗೆ ಅಡಿಕೆ, ತೆಂಗು ಕೃಷಿಗಳಲ್ಲಿ ಆದಾಯ ಗಳಿಸಿದ ಮಾದರಿ ಮಹಿಳೆ

09:47 AM Dec 24, 2019 | Team Udayavani |

ಹೆಸರು : ಮೇರಿ ರೋಮನ್‌ ಸೇರಾವೋ
ಏನೇನು ಕೃಷಿ: ಭತ್ತ, ಅಡಿಕೆ, ತೆಂಗು ಹೈನುಗಾರಿಕೆ
ಎಷ್ಟು ವರ್ಷ : 50
ಕೃಷಿ ಪ್ರದೇಶ: 3 ಎಕರೆ

Advertisement

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಬೆಳ್ಮಣ್‌: ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಂಕಲಕರಿಯ 78ರ ಹರೆಯದ ಮೇರಿ ರೋಮನ್‌ ಸೆರಾವೋ ಕೃಷಿ ಬದುಕಿನಲ್ಲಿ ಖುಷಿ ಕಂಡ ಮಾದರಿ ಮಹಿಳೆ.  ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆ ಕ್ಷೀಣಿಸುತ್ತಿರುವ ಕಾಲಘಟ್ಟದಲ್ಲಿ ತಮ್ಮ ಸುಮಾರು ಮೂರು ಎಕರೆ ಕೃಷಿ ಭೂಮಿಯಲ್ಲಿ ವಾರ್ಷಿಕ ಸುಮಾರು 50 ಕ್ವಿಂಟಾಲ್‌ ಭತ್ತ ಬೆಳೆಯುವುದರ ಜತೆಗೆ ಅಡಿಕೆ, ತೆಂಗು ತೋಟಗಳ ಮೂಲಕ ಭಾರೀ ಆದಾಯ ಹೊಂದಿ ಯುವ ಕೃಷಿಕರಿಗೆ ಮಾದರಿಯೆನಿಸಿದ್ದಾರೆ. ಈ ಕಾರಣಕ್ಕಾಗಿಯೇ 2015ರ ಕಾರ್ಕಳ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ
ಇವರಿಗೆ ಲಭಿಸಿದೆ.

ಪತಿಯಿಂದ ಕಲಿತ ಕೃಷಿ ಪಾಠ
ಮೇರಿ ಸೆರಾವೋ ಅವರ ಪತಿ ರೋಮನ್‌ ಸೆರಾವೋ ಏಳಿಂಜೆ ಲಿಟ್ಲ ಫ್ಲವರ್‌ ಹಿ. ಪ್ರಾ.ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದು ಕೃಷಿ ಬಗ್ಗೆಯೂ ಅನುಭವ ಹೊಂದಿದ ಪಂಡಿತರಾಗಿ ದ್ದರು. ಇವರಿಂದ ಕೃಷಿ ಪಾಠ ಕಲಿತ ಮೇರಿ ಸೆರಾವೋ ರೋಮನ್‌ ಸೆರಾವೋ ಅವರ ನಿಧನದ ಅನಂತರ ತಾನು ಕೃಷಿಯ ಸಂಪೂರ್ಣ ಜವಾಬ್ದಾರಿ ಹೊತ್ತು ಯಶಸ್ವಿ ಕೃಷಿಕ ರಾದರು. ತೆಂಗು ಹಾಗೂ ಅಡಿಕೆ ಕೃಷಿಯತ್ತವೂ ಗಮನ ನೀಡುತ್ತಿದ್ದಾರೆ. ಕೂಲಿಯಾಳುಗಳ ಜತೆ ತಾನೂ ತೊಡಗಿಸಿಕೊಂಡಿದ್ದಾರೆ.

ಹೈನುಗಾರಿಕೆ
ಭತ್ತದ ಕೃಷಿಯ ಜತೆ ಅಡಿಕೆ, ತೆಂಗು ಕೃಷಿ ಮಾಡಿ ತನ್ನ ಮನೆಯ ಕೊಟ್ಟಿಗೆಯಲ್ಲಿ 5-6 ದನಗಳನ್ನು ಕಟ್ಟಿ ಹೈನುಗಾರಿಕೆ ನಡೆಸಿ ಲಾಭ ಪಡೆದು ಸಾವಯವ ಕೃಷಿಗೂ ಒತ್ತು ಕೊಡುತ್ತಿದ್ದಾರೆ. ಸಂಕಲಕರಿಯ ಹಾಲು ಉತ್ಪಾದಕರ ಸಂಘದ ಮಹಿಳಾ ನಿರ್ದೇಶಕಿಯಾಗಿ ಸಂಘದ ಅಭಿವೃದ್ಧಿಯಲ್ಲಿ ಸಹಕರಿಸುತ್ತಿದ್ದಾರೆ.

Advertisement

ಸಾಧನೆಗೆ ಪ್ರೇರಣೆ
ಸಂಕಲಕರಿಯ ಶಾಂಭವಿ ನದಿಯ ಬದಿಯಲ್ಲಿ ವರ್ಷದ ಮೂರು ಬೆಳೆ ನಡೆಸಿ ಇಡೀ ವರ್ಷ ಗದ್ದೆಗಳು ಹಸುರಿನಿಂದ ಕಂಗೊಳಿಸುತ್ತಿದೆ. ಸಾಮಾಜಿಕವಾಗಿಯೂ ತನ್ನನ್ನು ತೊಡಗಿಸಿಕೊಂಡಿರುವ ಇವರು
ಸ್ಥಳೀಯ ಖುಷಿ ಮಹಿಳ, ಯುವತಿ ಮಂಡಳದ ಗೌರವಾಧ್ಯಕ್ಷೆಯೂ ಆಗಿದ್ದಾರೆ. ಮೇರಿ ಸೆರಾವೋ ಅವರಿಗೆ ಈ ಕೃಷಿ ಸಾಧನೆಗೆ ಮಕ್ಕಳು, ಸೊಸೆಯಂದಿರು, ಅಳಿಯರ ಪ್ರೇರಣೆ ಇದೆ.

ಇನ್ನೂ ಲವಲವಿಕೆ ಇದೆ
ಕೃಷಿಯಲ್ಲಿ ಶ್ರಮವಹಿಸಿ ಕನಿಷ್ಠ ಮನೆಯ ಓರ್ವ ಸದಸ್ಯರಾದವರು ಸಂಪೂರ್ಣವಾಗಿ ತೊಡಗಸಿಕೊಂಡು
ದುಡಿದರೆ ಖಂಡಿತಾ ಲಾಭವಿದೆ. ಭವಿಷ್ಯದಲ್ಲಿ ಕೃಷಿ ಉದ್ಯಮಕ್ಕೆ ಉತ್ತಮ ಭವಿಷ್ಯವಿದೆ ಹಾಗೂ ಲಕ್ಷಾಂತರ
ಆದಾಯ ಗಳಿಸಲು ಸಾಧ್ಯವಿದೆ. ಕೃಷಿಯಲ್ಲಿ ಯಶಸ್ಸಿಗೆ ಅಧಿಕಾರಿಗಳೊಂದಿಗೆ ಸಂಪರ್ಕ ಅತ್ಯಗತ್ಯ. ಯಾರೂ ಕೂಡ ಭೂಮಿಯನ್ನು ಹಡಿಲು ಬಿಡ‌ಬೇಡಿ. ಭತ್ತ ಕಷ್ಟವಾದರೆ ಪರ್ಯಾಯ ಬೆಳೆಗಳನ್ನು ಬೆಳೆಯುವ ಬಗ್ಗೆ ಲಕ್ಷ್ಯ ವಹಿಸಿ. ಕೃಷಿ ಚಟುವಟಿಕೆ ನನ್ನ ಆರೋಗ್ಯ ಕಾಪಾಡಲು ಕಾರಣವಾಗಿದೆ. ಕೂಲಿಯಾಳುಗಳ ಕೊರತೆಯಿದ್ದರೂ ಕೃಷಿಯಲ್ಲಿ ಇನ್ನೂ ಲವಲವಿಕೆ ಇದೆ. ಕೃಷಿ ಬದುಕು ಖುಷಿ ಕೊಟ್ಟಿದೆ.
-ಮೇರಿ ರೋಮನ್‌ ಸೆರಾವೋ, ಕೃಷಿಕ

ಶರತ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next