Advertisement

ಗೊತ್ತೇನೋ…? ಪ್ರಿಯತಮನಲ್ಲೇ ಅವಳು ಮಗುವನ್ನು ಕಾಣುತ್ತಾಳೆ!

02:50 PM May 30, 2017 | Harsha Rao |

ಜೀವನ್ಮುಖೀ,
ಹೇಗಿದೀಯಾ? ಅಂತೂ ಕಡೆಗೂ ನನ್ನನ್ನು ಮನಸ್ಸಿನಿಂದ ಕಿತ್ತೂಗೆದು ಬಿಟ್ಟೆ ಅಲ್ವಾ? ಮುಂಚೆ ಇದ್ದ ನನ್ನ ಮೇಲಿನ ಆದ್ರìತೆ, ಮಾರ್ದವತೆ ನಿನ್ನಲ್ಲಿ ಈಗ  ಕಾಣುತ್ತಿಲ್ಲ. ವಿಪರೀತ ಎನ್ನುವಷ್ಟು ಕೊಬ್ಬು ನಿನಗೆ. ಅಷ್ಟೆಲ್ಲಾ ಪ್ರೀತಿಯಿಂದ ಸಂದೇಶ ಕಳುಹಿಸಿದರೂ, ಪತ್ರ ಬರೆದರೂ, ಫೋನ್‌ ಮಾಡಿ ಮತ್ತೆ ಮತ್ತೆ ನೆನಪಿಸಿದರೂ ಒಂದೂ ಉತ್ತರವಿಲ್ಲ. ನೆನಪಿರಲಿ ನಿನಗೆ: ನಾವು ಮಧುರವಾದ ಪ್ರೀತಿಯನ್ನು ಕೊಟ್ಟರೂ, ಅದನ್ನು ಪಡೆಯುವ ಹೃದಯಕ್ಕೆ ಆಸ್ವಾದಿಸುವ ಮನಸ್ಸು ಇದ್ದಾಗ ಮಾತ್ರವೇ ಒಲವಿನ ರಸಭಾವವನ್ನು ಮುಗಿಲೆತ್ತರದ ಸಂತಸಕ್ಕೆ ಕೊಂಡೊಯ್ಯಲು ಸಾಧ್ಯವಂತೆ.

Advertisement

ವೈದ್ಯರು ಮದ್ದನ್ನು ರೋಗಿಗೆ ನೀಡಿದಾಗ ಆತನ ದೇಹ ಮದ್ದಿಗೆ ಸ್ಪಂದಿಸಬೇಕು. ಆಗಲೇ ಆತ ಗುಣಮುಖನಾಗಲು ಸಾಧ್ಯ. ಒಂದು ಗಿಡಕ್ಕೆ ಗೊಬ್ಬರವನ್ನು ಹೀರುವ ಸ್ಪಂದನೆ, ಬಯಕೆ ಇರಬೇಕು. ಆಗಲೇ ಅಲ್ಲಿ ಚಿಗುರು ನಳನಳಿಸಲು ಸಾಧ್ಯ. ಇಲ್ಲವಾದರೆ ಸಾವಿರ ಕನಸುಗಳನ್ನು ಹುಟ್ಟು ಹಾಕುವ ಎಲ್ಲ ಭಾವಸ್ಥಾಯಿಗಳೂ ವ್ಯರ್ಥ. ಈ ತರಹದ ಉಪಮೆಗಳನ್ನೇನೋ ಸುಲಭವಾಗಿ ನೀಡಬಹುದು… 

ಗೆಳೆಯಾ, ಇನ್ನೊಂದು ಸೂಕ್ಷ್ಮ ವಿಚಾರ ನಿನಗೆ ನೆನಪಿರಲಿ: ಔಷಧಿಯನ್ನು ಬೇರೊಬ್ಬನಿಗೆ ನೀಡಬಹುದು, ಗಿಡಕ್ಕೆ ಪರ್ಯಾಯ ರಾಸಾಯನಿಕ ಕೊಡಬಹುದು. ಆದ್ರೆ ಈ ಪ್ರೀತೀನ ಏನ್‌ ಮಾಡ್ಲಿ? ನಿನ್ನ ಪ್ರೀತಿಯನ್ನು ತೆಗೆದು ಯಾರ ಮಡಿಲಿಗೆ ಜೇನಿನಂತೆ ಸುರಿಯಲಿ ಹೇಳು? ಅಸಲಿಗೆ ಅದೆಲ್ಲ ನನ್ನ ಹೃದಯಕ್ಕೆ ಸಾಧ್ಯವಾ? ಯೋಚಿಸು. ಇಷ್ಟು ವರ್ಷದ ಬದುಕಿನಲ್ಲಿ ನನಗೂ ಕೆಲವು ನಿಷ್ಠುರ ಸತ್ಯಗಳು ಗೊತ್ತಾಗಿವೆ ಕಣೋ. ಏನೆಂದರೆ, ಪ್ರೀತಿಯೇ ಜೀವನವಲ್ಲ. ಪ್ರೀತಿಯೇ ಎಲ್ಲವೂ ಅಲ್ಲ. ಆದರೆ ದೊರೇ, ನನ್ನ ನಲಿವು, ನನ್ನ ಕನಸು, ನನ್ನ ಸಂತೃಪ್ತಿ, ನನ್ನ ಆಸೆ, ನನ್ನ ನಿರ್ಭಯತೆ, ನನ್ನ ಇಂಧನ, ನನ್ನ ಸ್ಪಂದನ, ನನ್ನ ಬದುಕು ಎಲ್ಲವೂ ನಿನ್ನ ಸನ್ನಿಧಿಯಲ್ಲಿದ್ದಾಗ ಮಾತ್ರ ಸಂಭ್ರಮದಿಂದ, ಸಂತೃಪ್ತಿಯಿಂದ ಇರುತ್ತದೆ. ಇಂಥದ್ದೊಂದು ಫೀಲ್‌ ಬಂದಾಗಲೆಲ್ಲ ಎದೆಯಲ್ಲಿ ಭರಿಸಲಾಗದ ನೋವು, ಯಾತನೆ ಕಣೋ. ಯಾರೋ ಪರಿಚಯವೇ ಇಲ್ಲದ ಜನ ಇದ್ದಕ್ಕಿದ್ದಂತೆಯೇ ಬಂದು ಹೃದಯವನ್ನು ಹೊರತೆಗೆದು ಹಿಂಡಿ, ಕಾಲಿನ ಕೆಳಗೆ ಹಾಕಿಕೊಂಡು ತುಳಿಯುತ್ತಿರುವ ಅನುಭವ ಆಗುತ್ತಿದೆ ನನಗೆ.

ನಾನು ಇಷ್ಟೆಲ್ಲಾ ಹೇಳುತ್ತಿದ್ದರೂ, ನಾವು ಒಟ್ಟಾಗಿದ್ದಾಗ ನಲಿದಾಡಿದ ಮಧುರ ಭಾವನೆಗಳಿಗೆ, ಈವರೆಗೂ ಆಡಿದ ಮಾತುಗಳಿಗೆ, ಮಾಡಿದ ಪ್ರಮಾಣಗಳಿಗೆ ಯಾವ ಅರ್ಥವೂ ಇಲ್ಲ ಅನ್ನುವಂತೆ ನನ್ನನ್ನು ತೊರೆಯುತ್ತಿರುವೆಯಲ್ಲಾ… ಅದನ್ನು ನೆನಪಿಸಿಕೊಂಡರೆ ಸಿಕ್ಕಾಪಟ್ಟೆ ಕೋಪ ಬರುತ್ತೆ. ಪ್ರತಿಯೊಬ್ಬ ಹುಡುಗನೂ ಒಂದು ಹುಡುಗಿಯಲ್ಲಿ ತಾಯಿಯನ್ನು, ಹುಡುಗಿ ತನ್ನ ಹುಡುಗನಲ್ಲಿ ಮಗುವನ್ನು ಕಾಣುತ್ತಾಳಂತೆ. ಎಷ್ಟು ಕರಾರುವಾಕ್ಕು ಅಲ್ಲವಾ, ಈ ಸಾಲುಗಳು? ಅಂತೆಯೇ ಮುಂದೊಮ್ಮೆ ಮಗು ತಾಯಿಯನ್ನು ಯಾವುದೋ ಸಂದರ್ಭಾನುಸಾರ ಮರೆಯಬಹುದು. ಆದರೆ, ತಾಯಿ ಎಂದಿಗೂ ಮಗುವನ್ನು ಮರೆಯುವುದಿಲ್ಲ. ಅವಳದು ನಿರಂತರ ಕರುಳ ಚಡಪಡಿಕೆ.

ನನ್ನ ಮನಸ್ಸಿನ ಸಂಕಟ ಈಗಾದರೂ ಅರ್ಥವಾಯಿತೇನೋ, ಪೆದ್ದು ಹುಡುಗ?

Advertisement

ಇಂತಿ ನಿನ್ನ
ಮಲ್ಲಿಗೆ

Advertisement

Udayavani is now on Telegram. Click here to join our channel and stay updated with the latest news.

Next