Advertisement

Shatavadhani Ganesh: ಅವಧಾನ ಎಂಬ ಬೌದ್ಧಿಕ ವಿಸ್ಮಯ!

11:06 AM Dec 10, 2023 | Team Udayavani |

ಕನ್ನಡದಲ್ಲಿ ಸಾಹಿತ್ಯಾವಧಾನ ಎಂದರೆ ಮೊದಲು ನೆನಪಿಗೆ ಬರುವ ಹೆಸರು ಶತಾವಧಾನಿ  ಡಾ. ಆರ್‌. ಗಣೇಶ್‌. ಅವಧಾನದ ಮೂಲಕ ಕಲೆ, ಕಾವ್ಯ, ಸಾಹಿತ್ಯ ಎಲ್ಲವನ್ನೂ ಉಣಬಡಿಸುತ್ತಿರುವ ಶತಾವಧಾನಿ ಡಾ. ಆರ್‌. ಗಣೇಶ್‌ ಅವರು ಅರವತ್ತರ ಸಂಭ್ರಮದಲ್ಲಿದ್ದಾರೆ. ಈ ಹೊತ್ತಿನಲ್ಲಿ ಅವರು  ಅವಧಾನದ ಮಹತ್ವ, ಅದರ ಆಳ-ಅಗಲಗಳ ಬಗ್ಗೆ  ಒಂದಷ್ಟು ಸಂಗತಿಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

Advertisement

ಲೋಕದ ಕಣ್ಣಿಗೆ ನೀವು ಶತಾವಧಾನಿಗಳು. ನಿಮ್ಮ ಅವಧಾನದ ಬೌದ್ಧಿಕ ಉತ್ಕರ್ಷವನ್ನು ಜನರು ಮೆಚ್ಚಿದ್ದಾರೆ. ಆದರೆ ನಿಮ್ಮೊಳ್ಳಗೊಬ್ಬ ರಸಾದ್ರìವಾದ ಕವಿ ಇದ್ದಾನೆ. ಬಗ್ಗೆ ನಿಮ್ಮ ಅಭಿಪ್ರಾಯವೇನು? 

ನಿಮ್ಮ ಮೊದಲ ಪ್ರಶ್ನೆಗೆ ವಿಸ್ತರಿಸಿ ಉತ್ತರಿಸುತ್ತೇನೆ. ಏಕೆಂದರೆ ಈ ಉತ್ತರವೇ ಮಿಕ್ಕೆಷ್ಟೋ ಪ್ರಶ್ನೆಗಳಿಗೆ ಬೇಕಿರುವ ಹಿನ್ನೆಲೆಯಾಗುತ್ತದೆ. ದಿಟವೇ, ನಾನು ಲೋಕದ ಕಣ್ಣಿನಲ್ಲಿ ಬೌದ್ಧಿಕ ವಿಸ್ಮಯ ಎಂದು ಹೆಸರಾದ ಅವಧಾನಕಲೆಯ ಮೂಲಕವೇ ಹೆಚ್ಚು ಪರಿಚಿತನಾಗಿದ್ದೇನೆ. ಆದರೆ ಅವಧಾನವೂ ಒಂದು ಕಲೆ ಮತ್ತು ಕಾವ್ಯವೇ ಅಲ್ಲಿಯ ಜೀವಾಳ ಎಂಬುದನ್ನು ಬಲ್ಲವರಿಗೆ ನೀವೇ ಹೇಳುವ ರಸಾದ್ರìನಾದ ಕವಿ ನನ್ನೊಳಗಿದ್ದಾನೆಂಬುದನ್ನು ಗುರುತಿಸಿಕೊಳ್ಳಲು ಕಷ್ಟವಾಗದು. ವಸ್ತುತಃ ನಾನು ಮಾಡುವ ಅಷ್ಟಾವಧಾನ-ಶತಾವಧಾನಗಳೆಲ್ಲ ಸಾಹಿತ್ಯಾವಧಾನವೆಂಬ ಪ್ರಕಾರದಲ್ಲಿ ಅಡಕವಾಗುತ್ತವೆ. ಅವಧಾನಗಳಲ್ಲಿ – ವಿಶೇಷತಃ ನನ್ನ ಅವಧಾನಗಳಲ್ಲಿ – ಶುದ್ಧಕವಿತೆಗೆ ಇರುವ ಪ್ರಾಮುಖ್ಯ, ಪ್ರಾಶಸ್ತ್ಯ ಮತ್ತು ಅವಕಾಶಗಳನ್ನು ಗಮನಿಸಿದ ಸಹೃದಯರಿಗೆ ಈ ಪ್ರಶ್ನೆಯೇ ಬರುವುದಿಲ್ಲ. ಆದರೆ ಇಂಥವರ ಸಂಖ್ಯೆ ಕಡಮೆ. ಇದಕ್ಕೆ ಕಾರಣ ಹತ್ತಾರು. ಮುಖ್ಯವಾಗಿ ಅವಧಾನಕವಿತೆಗಳ ಭಾಷೆ, ಬಂಧ, ಭಣಿತಿ ಮುಂತಾದುವೆಲ್ಲ ಅಭಿಜಾತ ಮಾರ್ಗದಲ್ಲಿ ಸಾಗುವ ಕಾರಣ ಎಷ್ಟೋ ಮಂದಿಗೆ ಅವುಗಳ ತಾತ್ಪರ್ಯ ತಿಳಿಯಬಹುದೇ ಹೊರತು ಒಳಗಿನ ವಿವರಗಳು ತಿಳಿಯುವುದಿಲ್ಲ. ಅದೂ ಅಲ್ಲದೆ ಅವೆಲ್ಲ ಸಮಗ್ರವಾಗಿ ಮುದ್ರಿತವಾಗಿ ಪುಸ್ತಕರೂಪದಲ್ಲಿ ಸಿಗುವುದೂ ವಿರಳವಾದ ಕಾರಣ ಮತ್ತೂಹತ್ತಾರು ಬಾರಿ ಸಾವಕಾಶವಾಗಿ ಓದಿಕೊಂಡು ಆಸ್ವಾದಿಸುವ ಅವಕಾಶವೂ ಇರುವುದಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಇಂದಿನ ಅನೇಕ ಸಾಹಿತಿಗಳಿಗೆ, ವಿಶ್ವವಿದ್ಯಾಲಯ, ಅಕಾಡೆಮಿ, ಪರಿಷತ್ತು ಮುಂತಾದ ಸಂಸ್ಥೆಗಳಿಗೆ ಅಭಿಜಾತ ಸಾಹಿತ್ಯವೆಂದರೆ ಹಲವು ಶತಮಾನಗಳ ಹಿಂದಿನ ಕೃತಿಗಳೇ ಹೊರತು ಆ ಜಾಡಿನಲ್ಲಿಯೇ ಹೊಸಹೊಳಹುಗಳನ್ನು ಕಾಣಿಸುವ ಕಂದ-ವೃತ್ತ-

ಷಟ³ದೀ-ಸಾಂಗತ್ಯಗಳಂಥ ಛಂದಸ್ಸುಗಳಲ್ಲಿ, ಹಳಗನ್ನಡ-ನಡುಗನ್ನಡಗಳಲ್ಲಿ ರಚಿತವಾದ ಇಂದಿನ ಅಭಿಜಾತ ಕವಿಗಳ ಸೃಷ್ಟಿಗಳು ಅಲ್ಲವೆಂಬ ಅಭಿಪ್ರಾಯವಿದೆ. ಇದಕ್ಕೆ ಮುಖ್ಯ ಕಾರಣ ಈ ಹೊತ್ತಿನ ಹೆಚ್ಚಿನ ಸಾಹಿತಿಗಳಿಗಾಗಲಿ, ಸಾಹಿತ್ಯಕ ಸಂಸ್ಥೆಗಳಿಗಾಗಲಿ ಮೂಲತಃ ಯಾವುದೇ ಅಭಿಜಾತ ಸಾಹಿತ್ಯದ ಅಧ್ಯಯನ ಮತ್ತು ಅಧ್ಯವಸಾ­ಯಗಳು ಇಲ್ಲದಿರುವುದೇ ಆಗಿದೆ. ಇನ್ನು ಸಾಹಿತ್ಯೇತರ ಕಾರಣಗಳು ತುಂಬ ಇವೆ; ಅವೇ ಹೆಚ್ಚು ಪ್ರಬಲ­ ವಾಗಿಯೂ ಇವೆ. ಅವುಗಳ ಸಂಗತಿ ಸದ್ಯಕ್ಕೆ ಬೇಡ.

ಹೀಗಾಗಿಯೇ ನಾನು ಅವಧಾನದಲ್ಲಿ ಆಶುವಾಗಿ ರಚಿಸುವ ಕವಿತೆಗಳಾಗಲಿ, ಅವುಗಳ ಮುದ್ರಿತ ರೂಪಗಳಾಗಲಿ, ಇವುಗಳ ಆಚೆಗೂ ಬರೆದ ಕಾವ್ಯಗಳಾಗಲಿ ಹೆಚ್ಚಿನ ವ್ಯಾಪ್ತಿಯನ್ನು ಗಳಿಸಿಲ್ಲ. ಕನ್ನಡದಲ್ಲಿ ಮಾತ್ರವಲ್ಲದೆ ಸಂಸ್ಕೃತದಲ್ಲಿಯೂ ಸಾಕಷ್ಟು ಕಾವ್ಯರಚನೆ ಮಾಡಿದ್ದೇನೆ. ಸಹಜವಾ­ಗಿಯೇ ಅವುಗಳ ವಿಷಯದಲ್ಲಿ ಲೋಕಕ್ಕೆ ಅರಿವಿಲ್ಲ. ಇದನ್ನು ಕುರಿತು ಹೆಚ್ಚಿನ ಬೇಸರ ನನಗಿಲ್ಲ. ಏಕೆಂದರೆ ಕವಿತೆಯನ್ನು ರಚಿಸುವಾಗಲೇ ಅದರಿಂದ ಸಿಗಬಹು­ದಾದ ಆನಂದ ದಕ್ಕಿರುತ್ತದೆ. ಮಿಕ್ಕದೇನಿ­ದ್ದರೂ ಬೋನಸ್‌. ಆದುದರಿಂದಲೇ ನನ್ನ ಎಷ್ಟೋ ಕವಿತೆ ಹತ್ತಾರು ವರ್ಷಗಳಿಂದ ಮುದ್ರಣದ ಹಂತಕ್ಕೇ ಹೋಗಿಲ್ಲ.

Advertisement

ಹೀಗೆ ಪದ್ಯಕವಿತೆಯನ್ನಷ್ಟೇ ಅಲ್ಲದೆ ಗೇಯಕವಿತೆಯನ್ನೂ ಸಾಕಷ್ಟು ಬರೆದಿದ್ದೇನೆ. ಗಾನ ಮತ್ತು ನೃತ್ಯಗಳಿಗೆಂದು ನೂರಾರು ಹಾಡುಗಳನ್ನು ಬರೆದಿದ್ದೇನೆ; ಹಲವಾರು ಏಕವ್ಯಕ್ತಿಯಕ್ಷಗಾನ ಮತ್ತು ನೃತ್ಯನಾಟಕಗಳನ್ನೂ ರಚಿಸಿದ್ದೇನೆ. ಇವುಗಳಲ್ಲಿಯೂ ಶುದ್ಧಕಾವ್ಯದ ಭಾಗ ಸಾಕಷ್ಟಿದೆ. ಆದರೆ ಇವು ಗೀತ-ನರ್ತನಗಳ ಅಲಂಕಾರಗಳಲ್ಲಿ ಮರೆಯಾದ ಮೂಲವಿಗ್ರಹದ ಕೆತ್ತನೆಯ ಹಾಗೆ ಕಂಡೂ ಕಾಣದಂತಿವೆ.

ಏನೇ ಇರಲಿ, ಇವನ್ನೆಲ್ಲ ನಾನು ಇಷ್ಟಪಟ್ಟೇ ರಚಿಸಿದ ಕಾರಣ, ಅಭಿಜಾತಶೈಲಿಯ ಕಾವ್ಯಕ್ಕೆ ವರ್ತಮಾನದ ಜಗತ್ತಿನಲ್ಲಿ ಆದರ ಕಡಮೆ ಎಂಬ ವಾಸ್ತವವನ್ನು ತಿಳಿದೇ ಈ ಮಾರ್ಗದಲ್ಲಿ ನಡೆದ ಕಾರಣ ನೋವು-ನಿರಾಶೆಗಳಿಲ್ಲ. ಮಾತ್ರವಲ್ಲ, ಸಾವಿರಾರು ವರ್ಷಗಳ ಭವ್ಯವಾದ ಇತಿಹಾಸವಿರುವ, ದಿವ್ಯವಾದ ರೂಪ-ಸ್ವರೂಪಗಳ ಸೊಗಸಿರುವ ಈ ಆರ್ಷ ಪದ್ಧತಿಯಲ್ಲಿ ಕಾವ್ಯಜೀವನವನ್ನು ನಡಸುತ್ತಿರುವುದಕ್ಕಾಗಿ ಮಿಗಿಲಾದ ಧನ್ಯತೆ-ಸಂತೋಷಗಳೇ ಇವೆ; ನಮ್ಮ ಅಭಿಜಾತಕವಿಗಳ ಪರಂಪರೆಯನ್ನು ಅರ್ಥಪೂರ್ಣವಾಗಿ ಮುಂದುವರಿಸುತ್ತಿರುವ ಹೆಮ್ಮೆಯೂ ಇದೆ.

ಇತ್ತೀಚೆಗೆ ನೀವು ಕತೆ, ಕವನ, ಕಾದಂಬರಿ – ಹೀಗೆ ಸಾಹಿತ್ಯ ಹಾಗೂ ಸಂಗೀತದಂಥ ಕಲಾಪ್ರಕಾರಗಳಲ್ಲಿ ಹೆಚ್ಚು ತೊಡಗಿಕೊಂಡಂತೆ ಕಾಣುತ್ತದೆ…

ಇಲ್ಲ, ಮೊದಲಿನಿಂದಲೂ ನಾನು ಕತೆ, ಕವಿತೆ, ಕಾದಂಬರಿ, ಲಲಿತಪ್ರಬಂಧ ಇತ್ಯಾದಿ ಪ್ರಕಾರಗಳಲ್ಲಿ ದುಡಿಯುತ್ತಲೇ ಇದ್ದೇನೆ. ಆದರೆ ಅವು ಬೆಳಕಿಗೆ ಬಂದಂತೆ ತೋರುವುದು ಮಾತ್ರ ಈಚೆಗೆ. ನನ್ನ ಶಾಲೆ-ಕಾಲೇಜಿನ ದಿನಗಳಿಂದಲೇ ಈ ಕೃಷಿ ಸಾಗಿತ್ತಾದರೂ ಆಗ ಬರೆದದ್ದು ನನಗೆ ತೃಪ್ತಿ ತಾರದ ಕಾರಣ ಪ್ರಕಟಿಸದೆ ಉಳಿಸಿದ್ದೆ; ಹೆಚ್ಚಿನವನ್ನು ಹರಿದೂ ಹಾಕಿದೆ. ಈಚೆಗೆ ಪ್ರಕಟವಾದ ಇಂಥ ಸಾಹಿತ್ಯಪ್ರಕಾರಗಳಲ್ಲಿ ಹೆಚ್ಚಿನ ಭಾಗ ನನ್ನ ಆ ಕಾಲದ ಆಲೋಚನೆಗಳ ಪರಿಣತ ರೂಪವೇ ಇದೆಯೆಂದರೆ ತಪ್ಪಾಗದು. ಸಂಗೀತ, ನೃತ್ಯ ಮತ್ತು ಚಿತ್ರಗಳಂಥ ಲಲಿತಕಲೆಗಳಲ್ಲಿ ನನ್ನ ಆಸಕ್ತಿ ಸಾಹಿತ್ಯಕ್ಕಿಂತ ಮುಂಚಿನದು. ಆದರೆ ಅವುಗಳಲ್ಲಿ ಪ್ರಯೋಗಪರಿಣತಿ ಬರುವಷ್ಟು ದುಡಿಮೆ ಸಾಗಲಿಲ್ಲ. ಅಲ್ಲೇನಿದ್ದರೂ ನನ್ನದು ಭಾವಯಿತ್ರೀ ಪ್ರತಿಭೆ; ಸಾಹಿತ್ಯದ ಮೂಲಕ ಅವುಗಳೊಡನೆ ಎಷ್ಟು ಬೆಸೆದುಕೊಳ್ಳಬಹುದೋ ಅಷ್ಟರ ಮಟ್ಟಿಗೆ ಕಾರಯಿತ್ರೀ ಪ್ರತಿಭೆ. ಹೀಗಾಗಿ ನನ್ನ ಬದುಕಿನಲ್ಲಿ ಯಾವ ಕಲೆಯೂ ಹೊಸತಾಗಿ ಬಂದದ್ದಿಲ್ಲ.

ಸಾಮಾನ್ಯವಾಗಿ ಕಲೆಯನ್ನು ಕರಗುವ ಹಾಗೂ ಕರಗಿಸುವ ಗುಣವುಳ್ಳದ್ದು ಎಂದು ಪರಿಭಾವಿಸಲಾಗುತ್ತದೆ. ಅವಧಾನ ಪೂರ್ತಿಯಾಗಿ ಬೌದ್ಧಿಕ ಸಾಹಚರ್ಯವನ್ನು ಬೇಡುವಂಥದ್ದು. ಅವಧಾನವನ್ನು ಕಲೆ ಎಂದು ಭಾವಿಸುವಲ್ಲಿ ನಿಮ್ಮ ಅಭಿಪ್ರಾಯಗಳೇನು?

ಒಳ್ಳೆಯ ಪ್ರಶ್ನೆ. ಇದಕ್ಕೆ ನಿಮ್ಮ ಮೊದಲ ಪ್ರಶ್ನೆಗೆ ನಾನಿತ್ತ ಉತ್ತರದಲ್ಲಿಯೇ ತಕ್ಕಮಟ್ಟಿನ ವಿವೇಚನೆ ಸಂದಿದೆಯೆನ್ನಬಹುದು. ನನ್ನ ಸಂಶೋಧನಗ್ರಂಥ ಕನ್ನಡಲ್ಲಿ ಅವಧಾನಕಲೆ ಕೂಡ ಈ ಬಗೆಗೆ ವಿಸ್ತ್ರತವಾಗಿ ಚರ್ಚಿಸಿದೆ. ಸಂಕ್ಷೇಪವಾಗಿ ಹೇಳುವುದಾದರೆ ಯಾವುದೇ ಕಲೆಯ ಕೇಂದ್ರ ರಸ. ರಸದ ಸ್ವರೂಪವೇ ಆನಂದ. ಇದು ದ್ರುತಿ (ಮನಸ್ಸಿನ ಕರಗುವಿಕೆ), ದೀಪ್ತಿ (ಮನಸ್ಸಿನ ಉಜ್ಜ$Ìಲತೆ) ಮತ್ತು ವಿಕಾಸ (ಮನಸ್ಸಿನ ಅರಳುವಿಕೆ) ಎಂಬ ರಸಧರ್ಮಗಳ ಮೂಲಕ ಸಂವೇದನೆಗೆ ಎಟುಕುತ್ತದೆ. ಇವು ಮೂರೂ ಕಲೆಗಳಿಗೆ ಮುಖ್ಯ, ಅನಿವಾರ್ಯ. ನೀವು ಹೇಳುವ ಕರಗುವಿಕೆ ದ್ರುತಿ ಎಂಬುದರಲ್ಲಿ ಅಡಗುತ್ತದೆ. ಅವಧಾನದಂಥ ಕಲೆಯಲ್ಲಿ ದೀಪ್ತಿ ಮತ್ತು ವಿಕಾಸಗಳ ಪಾಲು ಹೆಚ್ಚಾಗಿರುತ್ತದೆ. ಆದರೆ ದ್ರುತಿಯ ಪಾತ್ರ ಇಲ್ಲದೆ ಇಲ್ಲ. ಅಲ್ಲದೆ, ಪ್ರತಿಯೊಂದು ಕಲೆಗೂ ಅದರದೇ ಆದ ದ್ರುತಿ-ದೀಪ್ತಿ-ವಿಕಾಸಗಳ ಹದವಿರುತ್ತದೆ. ಇವು ಆಯಾ ಕಲೆಗಳಲ್ಲಿ ಬೇರೆ ಬೇರೆ ಪ್ರಮಾಣಗಳಲ್ಲಿ ಕಲೆತುಕೊಳ್ಳುವ ಕಾರಣ ವೈವಿಧ್ಯ ಉಂಟಾಗುತ್ತದೆ. ವೈಷಮ್ಯಕ್ಕೆ ಎಲ್ಲಿಯೂ ಆಸ್ಪದವಿಲ್ಲ.

ಕಲೆ, ಸಾಹಿತ್ಯ, ವೇದಾಂತ, ಅವಧಾನ – ಹೀಗೆ ಹಲವು ಮುಖಗಳಲ್ಲಿ ನಿಮ್ಮ ಆಸಕ್ತಿ ಚೆಲ್ಲುವರಿದಿದೆ. ನಡುವೆ ನಿಮ್ಮ ವ್ಯಕ್ತಿತ್ವದ ಕೇಂದ್ರವನ್ನು ಹೇಗೆ ಗುರುತಿಸಿಕೊಳ್ಳುವಿರಿ?

ಗೀತ ನೃತ್ಯ, ಚಿತ್ರ, ಶಿಲ್ಪ, ಅವಧಾನಗಳಂಥ ಕಲೆ, ವಿವಿಧ ಭಾಷೆಗಳ ಸಾಹಿತ್ಯ, ವಿಜ್ಞಾನ ಮತ್ತು ದರ್ಶನಶಾಸ್ತ್ರಗಳು – ಎಲ್ಲವೂ ನನಗೆ ಪ್ರೀತಿಯ ಕ್ಷೇತ್ರಗಳೇ. ಆದರೆ ನನ್ನ ಕೃಷಿ ಹೆಚ್ಚಾಗಿ ಸಾಗಿರುವುದು ಭಾಷೆ-ಸಾಹಿತ್ಯಗಳ ಮೂಲಕ. ಇವುಗಳ ರಸಾಸ್ವಾದದ ಮೂಲಕವೇ ನನಗೆ ಸಮಾಜ, ಧರ್ಮ, ಸ್ನೇಹ, ವೇದಾಂತ ಮುಂತಾದುವುಗಳ ದರ್ಶನವಾಯಿತು. ಹೀಗೆ ಸಾಹಿತ್ಯವೇ ನನ್ನ ಆಧಾರಶ್ರುತಿ. ಉಳಿದುವೆಲ್ಲ ಇದಕ್ಕೆ ಸಂವಾದಿಯಾಗಿ ಬರುವ ವಿವಿಧ ಸ್ವರಗಳು. ವಸ್ತುತಃ ವ್ಯಕ್ತಿತ್ವವನ್ನು ಕಳೆದುಕೊಳ್ಳಲೆಂದೇ ಕಲೆ-ದರ್ಶನಗಳಂಥ ಸಾಧನಗಳಿರುವುದು. ಇದು ನನಗೆ ಒದಗಿಬಂದದ್ದು ಸಾಹಿತ್ಯದ ಮೂಲಕ.

ಹಲವು ಭಾಷೆಗಳ ಅಧ್ಯಯನ ಮಾಡಿದವರು ನೀವು. ಭಾರತೀಯ ಭಾಷೆಗಳ ಬಗ್ಗೆ ನಿಮ್ಮ ಅಭಿಪ್ರಾಯ?

ನಿಜವೇ, ನನಗೆ ಹತ್ತಾರು ಭಾಷೆಗಳ ಪರಿಚಯವಿದೆ; ಹಲವು ಭಾಷೆಗಳಲ್ಲಿ ಅಧ್ಯಯನವೂ ಇದೆ; ಕೆಲವು ಭಾಷೆಗಳಲ್ಲಿ ಬರೆವಣಿಗೆಯನ್ನೂ ಮಾಡುತ್ತಿದ್ದೇನೆ. ಆದರೂ ನನಗೆ ಚೆನ್ನಾಗಿ ಬರುತ್ತದೆಂದು ನಾನು ಹೇಳಿಕೊಳ್ಳಬಲ್ಲ ಭಾಷೆಯೆಂದರೆ ಕನ್ನಡ ಮಾತ್ರ. ಈ ಹಿನ್ನೆಲೆಯಲ್ಲಿ ಭಾರತೀಯ ಭಾಷೆಗಳ ಬಾಂಧವ್ಯವನ್ನು ಕಾಣುವುದಾದರೆ ಇವುಗಳಲ್ಲೆಲ್ಲ ಅಸಾಧಾರಣವಾದ ಸಾಮರಸ್ಯವಿದೆ. ಇದಕ್ಕೆ ಮುಖ್ಯ ಕಾರಣ ಸಂಸ್ಕೃತ. ಇದನ್ನು ನಾನು ಕುರುಡಾಗಿ ಹೇಳುತ್ತಿಲ್ಲ; ನಲವತ್ತೆçವತ್ತು ವರ್ಷಗಳ ಗಟ್ಟಿಯಾದ ವ್ಯಾಸಂಗದ ಬಲದಿಂದ ಹೇಳುತ್ತಿದ್ದೇನೆ; ವಿವಿಧ ಮೂಲಗಳನ್ನು ಆಯಾ ಭಾಷೆಗಳಲ್ಲಿಯೇ ನೋಡಿದ ಅಧಿಕೃತತೆಯಿಂದ ಹೇಳುತ್ತಿದ್ದೇನೆ. ನಮ್ಮ ದೇಶದ ಹಲವು ಭಾಷೆಗಳಿಗೆ ಸಂಸ್ಕೃತ ಮೂಲವಲ್ಲದಿರಬಹುದು; ಆದರೆ ಸಂಸ್ಕೃತಿ ಮಾತ್ರ ಅದೇ. ಇದಕ್ಕಿರುವ ಹಲವು ಕಾರಣಗಳ ಪೈಕಿ ಒಂದೆಂದರೆ ಪ್ರತಿಯೊಂದು ಭಾಷೆಯವರೂ ಸಂಸ್ಕೃತದಲ್ಲಿ ಸಾವಿರಾರು ವರ್ಷಗಳಿಂದ ಬರೆಯುತ್ತ ಬಂದಿರುವುದಾಗಿದೆ. ಮತ್ತೂಂದು ಎಲ್ಲ ಭಾಷೆಗಳೂ ತಮ್ಮ ಪದಸಂಪದಕ್ಕಾಗಿ ಸಂಸ್ಕೃತವನ್ನು ಬಗೆಬಗೆಯಾಗಿ ಆಶ್ರಯಿಸಿವೆ. ಇಂಥ ಆಶ್ರಯ ಇಂಗ್ಲಿಷಿನೊಡನೆಯೂ ಉಂಟಲ್ಲವೇ ಎಂಬ ಪ್ರಶ್ನೆ ಬರಬಹುದು. ಆದರೆ ಇಂಗ್ಲಿಷ್‌ ನಮ್ಮ ಜನಗಳ ಅರ್ಥ-ಕಾಮಗಳ ವಲಯದಲ್ಲಿ ಮಾತ್ರ ಸಂದಿದ್ದರೆ ಸಂಸ್ಕೃತವು ಇವುಗಳ ಜೊತೆಗೆ ಧರ್ಮ-ಮೋಕ್ಷಗಳ ಆಯಾಮಗಳಲ್ಲಿಯೂ ವ್ಯಾಪಿಸಿಕೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಂಸ್ಕೃತವು ನಮ್ಮ ನಮ್ಮ ತಾಯ್ನುಡಿಗಳಿಗಿಂತ ಮೌಲ್ಯದ ದೃಷ್ಟಿಯಿಂದ ಬೇರೆಯಾಗಿ ಉಳಿದೇ ಇಲ್ಲ. ಒಳ್ಳೆಯ ಕನ್ನಡ ಬಲ್ಲವನಿಗೆ ಸಂಸ್ಕೃತದ ಸಂವೇದನೆ ಇದ್ದೇ ಇರುತ್ತದೆ. ಇದು ನಮ್ಮ ದೇಶದ ಎಲ್ಲ ಭಾಷೆಗಳಿಗೂ ಅನ್ವಯಿಸುವ ಮಾತು. ಇದಕ್ಕೆ ತಮಿಳೂ ಹೊರತಲ್ಲ.

ಭಾರತೀಯ ಕಲೆಗಳ ಪಾರಮಾರ್ಥಿಕ ಸ್ವರೂಪದ ಬಗ್ಗೆ ಹೇಳಬಹುದೇ?

ಇದಕ್ಕೆ ವ್ಯಾಪಕವಾದ ಉತ್ತರವನ್ನು ಬೇಕಿದೆಯಾದರೂ ಚುಟುಕಾಗಿ ಹೇಳುವುದಾದರೆ, ಎಲ್ಲ ಕಲೆಗಳ ಪಾರಮಾರ್ಥಿಕ ಸ್ವರೂಪ ಮಾತ್ರವಲ್ಲ, ವ್ಯಾವಹಾರಿಕ ಸ್ವರೂಪವೂ ಒಂದೇ. ಅದು ರಸ. ಇದಕ್ಕೆ ಒದಗಿಬರುವಂಥವು ಧ್ವನಿ, ಔಚಿತ್ಯ ಮತ್ತು ವಕ್ರತೆಗಳು. ರಸವು ಆನಂದಸ್ವರೂಪದ್ದು. ಆನಂದ ಸ್ವಾರ್ಥಮೂಲದ ಸುಖ-ದುಃಖ­ ಗಳನ್ನು ಮೀರಿದ ನೆಮ್ಮದಿಯ ಸ್ಥಿತಿ. ಇದು ಭಾರತೀಯ ಕಲಾಮೀಮಾಂಸೆ ಜಗತ್ತಿಗೆ ನೀಡಿದ ಶಾಶ್ವತ ಯೋಗದಾನ.

ನಿಮ್ಮ ಆಧ್ಯಾತ್ಮಿಕ ಉಪಾಸನೆಯ ಪದ್ಧತಿ ಏನು?

ಆಧ್ಯಾತ್ಮಿಕ, ಉಪಾಸನೆ ಮುಂತಾದುವೆಲ್ಲ ದೊಡ್ಡ ಶಬ್ದಗಳು. ಜೀವನದ ಎಲ್ಲ ಪ್ರಾಮಾಣಿಕವಾದ ಆಯಾಮಗಳೂ ಆತೊ¾àಪಾಸನೆಗೆ ಸಾಧನಗಳು. ಈ ಅರ್ಥದಲ್ಲಿ ಚರಂಡಿ ಬಾಚುವುದರಿಂದ ಕಾವ್ಯರಚನೆಯವರೆಗೆ ಎಲ್ಲವೂ ಒದಗಿಬರುತ್ತವೆ. ನನ್ನ ಮಟ್ಟಿಗೆ ರಸೋಪಾಸನೆ ಸುಲಭವಾಗಿದೆ. ಇಷ್ಟಕ್ಕೂ ಆಧ್ಯಾತ್ಮವೆಂದರೆ ಏನು? ನಮ್ಮನ್ನು ಕುರಿತು ನಾವು ಎಂದಲ್ಲವೇ ಅರ್ಥ! ಉಪಾಸನೆ ಎಂದರೆ ನಿಕಟತೆ ಅಥವಾ ಹತ್ತಿರವಾಗುವಿಕೆ ಎಂದರ್ಥ. ಹೀಗಾಗಿ ಆಧ್ಯಾತ್ಮಿಕ ಉಪಾಸನೆ ಎಂದರೆ ನಮ್ಮ ಮೂಲಸ್ವರೂಪಕ್ಕೆ ನಾವು ಹತ್ತಿರವಾಗುವುದು. ಅದು ನಮ್ಮ ರಾಗ-ದ್ವೇಷಮೂಲವಾದ ಲೌಕಿಕ ಸ್ವಂತಿಕೆಯನ್ನು ಸ್ವಲ್ಪ ಮಟ್ಟಿಗಾದರೂ ನೀಗಿಕೊಳ್ಳುವುದರಲ್ಲಿದೆ. ರಸೋಪಾಸನೆಗೆ ಪೂರಕವಾದದ್ದು ಕರ್ಮಯೋಗ ಅಥವಾ ಕಾಯಕ. ಇದು ಸ್ವಧರ್ಮಯೋಗವೂ ಹೌದು. ತಣ್ತೀಚಿಂತನೆ, ಭಗವದ್ಭಕ್ತಿ, ಲೋಕಪ್ರೀತಿ, ಪ್ರಕೃತಿಪ್ರೇಮ – ಇವೂ ಆವಶ್ಯಕ. ರಸ, ಪ್ರೀತಿ ಮತ್ತು ಭಕ್ತಿಗಳಿಗೆ ತಾತ್ತಿ$Ìಕ ಸ್ತರದಲ್ಲಿ ವ್ಯತ್ಯಾಸವಿಲ್ಲ. ವ್ಯತ್ಯಾಸವೇನಿದ್ದರೂ ಅವುಗಳನ್ನು ಪ್ರಚೋದಿಸುವ ಮೂಲಗಳಲ್ಲಿ, ಅವು ಅಭಿವ್ಯಕ್ತವಾಗುವ ಮಾಧ್ಯಮಗಳಲ್ಲಿ ಇದೆ.

ಜ್ಞಾನದ ಬಗ್ಗೆ ನಿಮ್ಮ ಪರಿಕಲ್ಪನೆ ಏನು?

ಇದು ತುಂಬ ಗಂಭೀರವಾದ ಪ್ರಶ್ನೆ. ನಾನರಿತ ಮಟ್ಟಿಗೆ ಯಾವುದೇ ನಿರ್ದಿಷ್ಟ ವಿಷಯವನ್ನು ಕುರಿತ ಜ್ಞಾನ ಮಾಹಿತಿಯ ಮಟ್ಟಕ್ಕೆ ಬಂದು ನಿಲ್ಲುತ್ತದೆ. ಹೀಗಲ್ಲದೆ ನಮ್ಮ ಇರವನ್ನೇ ಕುರಿತಾದದ್ದು ನಿಜವಾದ ಅರ್ಥದಲ್ಲಿ ಜ್ಞಾನ. ಇದು ಕೇವಲ ಅರಿವು. ಈ ಅರಿವು ನಲವು ಅಥವಾ ಆನಂದಕ್ಕಿಂತ ಬೇರೆ ಅಲ್ಲ. ಇದನ್ನು ನಿರ್ವಿಶೇಷ ಸಾರ್ವತ್ರಿಕ ಅನುಭವ ಎಂದು ಶಾಸ್ತ್ರಗಳು ಹೇಳಿವೆ. ಮಿಕ್ಕೆಲ್ಲ ಸವಿಶೇಷ ಜ್ಞಾನಗಳಿಗೆ ನಿಯಂತ್ರಿತವಾದ ಕಲಿಕೆಯ ಪದ್ಧತಿಗಳುಂಟು; ಕಾಲಬಾಹ್ಯತೆಯೂ ಉಂಟು. ಆದರೆ ಈ ಜ್ಞಾನ ಅವರವರಿಗೆ ಒದಗಿಬರುವ ಹಾದಿಯನ್ನು ಹಿಡಿಯುತ್ತದೆ. ಗುರಿ ಮಾತ್ರ ಒಂದೇ. ಮತ್ತಿದಕ್ಕೆ ಕಾಲಬಾಹ್ಯತೆಯ ಭಯವಿಲ್ಲ. ಏಕೆಂದರೆ ಇದು ಕಾಲಾತೀತ.

ಲೋಕ ನಿಮ್ಮನ್ನು ಹೇಗೆ ನೆನಪಿಟ್ಟುಕೊಳ್ಳಬೇಕೆಂದು ಬಯಸುವಿರಿ?

ಈ ಬಗೆಯ ತಳಮಳಗಳೆಲ್ಲ ತುಂಬ ಹಿಂದೆ ಕುದಿಯುತ್ತಿದ್ದವು. ಈಗ ಆ ಕೋಟಲೆ ಇಲ್ಲ. ನಾವುಗಳು ಮಾಡಿದ್ದು ನಮ್ಮ ನೆಮ್ಮದಿಗೂ ಮಿಕ್ಕವರ ಸಂತಸಕ್ಕೂ ಒದಗಿಬಂದರೆ ಸಾಕು.

ನಮ್ಮಲ್ಲಿ ಸಾಹಿತ್ಯ, ಸಂಗೀತ ಮುಂತಾದ ಕಲೆಗಳ ನಡುವೆ ಒಂದು ರೀತಿಯ ಸಾಹಚರ್ಯ ಇತ್ತು. ಈಗ ಆಧುನಿಕತೆ ಬೆಳೆದಂತೆ ಅವೆಲ್ಲವೂ ಪ್ರತ್ಯೇಕ ದ್ವೀಪಗಳಂತಾಗಿಬಿಟ್ಟಿವೆಯಲ್ಲ…

ದಿಟವೇ, ಎಲ್ಲ ಶಾಸ್ತ್ರಗಳಿಗೂ ಕಲೆಗಳಿಗೂ ಮೂಲತಃ ಆತ್ಮೈಕ್ಯ ಉಂಟು. ಇದನ್ನು ನಾಟ್ಯಶಾಸ್ತ್ರದಲ್ಲಿ ಗುರುತಿಸಬಹುದು. ಆನ್ವಯಿಕ ಸೌಲಭ್ಯಕ್ಕಾಗಿ ಕಲೆಗಳು ಬೇರೆ ಬೇರೆಯಾಗಿ ತೋರಿಕೊಂಡರೆ ತಪ್ಪಲ್ಲ. ಆದರೆ ಆನಂದದ ದೃಷ್ಟಿಯಿಂದಲೇ ವಿರುದ್ಧವಾಗಿ ಪರಿಣಮಿಸಿದರೆ ಅಪಾಯವುಂಟು. ಈ ಹೊತ್ತು ಇಂಥ ಪರಿಸ್ಥಿತಿ ಬಂದಿದ್ದಲ್ಲಿ ಅದಕ್ಕೆ ಮುಖ್ಯ ಕಾರಣ ರಸವಿರೋಧವೇ. ರಸವನ್ನೊಪ್ಪದ, ರಸವನ್ನಪ್ಪದ ಯಾವುದೂ ಕಲೆಯಾಗದು.

ಹಿಂದಿನ ಕಾಲದಲ್ಲಿದ್ದ ಪಂಡಿತಪರಂಪರೆ, ಅಂದರೆ ಪ್ರಾಥಮಿಕ ಶಾಲೆಯ ಶಿಕ್ಷಕರ ಮಟ್ಟದಲ್ಲಿಯೇ ಅದ್ಭುತ ಜ್ಞಾನ ಹೊಂದಿರುತಿದ್ದಂಥವರ ಸಂಖ್ಯೆ ಕಡಿಮೆಯಾಗಿದೆ ಎನಿಸುತ್ತದೆ. ಇದಕ್ಕೆ ಕಾರಣ ಏನಿರಬಹುದು?

ಗುಣಕ್ಕೆ ಎಲ್ಲಕ್ಕಿಂತ ಮಿಗಿಲಾದ ಬೆಲೆಯನ್ನು ಸಲ್ಲಿಸದಿದ್ದುದರ ಪರಿಣಾಮ ಹೀಗೆಯೇ ಇರುತ್ತದೆ. ಹಿಂದಿನ ಪಂಡಿತರಲ್ಲಿ ಆಳಕ್ಕೆ ಹೆಚ್ಚಿನ ಬೆಲೆ ಇತ್ತು. ಇದು ಕಲಿಕೆಯ ಹಂತದಲ್ಲಿ ತುಂಬ ಅಪೇಕ್ಷಣೀಯವಾದ ಮೌಲ್ಯ. ವಿಶೇಷತಃ ಭಾಷೆ-ವ್ಯಾಕರಣಗಳನ್ನು, ಗಣಿತ-ತರ್ಕಗಳನ್ನು ಕಲಿಸುವಾಗ ಇಂಥ ಪರಿಷ್ಕಾರ ಬೇಕು. ಮುಂದಿನ ಬೆಳೆವಣಿಗೆಯ ಹಂತದಲ್ಲಿ ವಿಸ್ತರಣಕ್ಕೆ ಹೆಚ್ಚಿನ ಬೆಲೆ ಬರುತ್ತದೆ. ಯಾವುದೂ ಸರಿಯಾದೀತು ಎಂಬ – ತಾತ್ವಿಕವಾಗಿ ಸಲ್ಲಬಹುದಾದ, ಆದರೆ ವ್ಯಾವಹಾರಿಕವಾಗಿ ಅಪಾಯ ಎನಿಸುವ – ಉಡಾಫೆಯ ವರ್ತನೆ ನಮ್ಮ ಪ್ರಾಥಮಿಕ ಶಿಕ್ಷಣವನ್ನು ದುರ್ಬಲಗೊಳಿಸಿದೆ.

ಸಂಸ್ಕೃತ ಭಾಷೆ ಮತ್ತು ಸಾಹಿತ್ಯಗಳಲ್ಲಿ ಮೌಲಿಕ ಕೃತಿಗಳಿದ್ದರೂ ಈಚೆಗೆ ಅವುಗಳ ಬಗೆಗೆ ಆಸಕ್ತಿ ಕಡಿಮೆಯಾಗಲು ಇಂಗ್ಲಿಷ್‌ ವ್ಯಾಮೋಹ ಕಾರಣವೇ?

ಹೀಗೆನ್ನುವಂತಿಲ್ಲ. ಈಚಿನ ಒಂದೆರಡು ದಶಕಗಳಲ್ಲಿ ನಮ್ಮ ತರುಣರ ಆಸಕ್ತಿ ಸಂಸ್ಕೃತ ಮತ್ತು ಭಾರತೀಯ ಸಂಸ್ಕೃತಿಗಳ ಕಡೆಗೆ ಹೆಚ್ಚಾಗಿ ತಿರುಗಿದೆ. ವಿಜ್ಞಾನ-ತಂತ್ರಜ್ಞಾನಗಳನ್ನು ಹೊಟ್ಟೆಪಾಡಿಗಾಗಿ ಓದಿಕೊಂಡು ತಮ್ಮ ಸಂತೋಷಕ್ಕಾಗಿ ಸಾಹಿತ್ಯ-ಸಂಸ್ಕೃತಿಗಳ ಕಡೆಗೆ ಸಾಕಷ್ಟು ಮಂದಿ ವಾಲಿದ್ದಾರೆ. ಅಂತರ್ಜಾಲಮಾಧ್ಯಮ ಪ್ರಬಲವಾದ ಬಳಿಕ ದೇಶ-ಕಾಲಗಳ ಅಡ್ಡಗೋಡೆಗಳಿಲ್ಲದೆ ಈ ಪ್ರವೃತ್ತಿ ಜಾಗತಿಕವಾಗಿ ಹಬ್ಬಿದೆ. ಕಾವ್ಯ-ಶಾಸ್ತ್ರಗಳ ಮೂಲಗ್ರಂಥಗಳನ್ನು ಪಾಠ ಹೇಳಿಸಿಕೊಳ್ಳುವ ಹಾಗೂ ಇಂಥ ಕಲಿಕೆಯನ್ನು ಸುಲಭ ಮಾಡುವ ವಿಧಾನಗಳು ಅಂತರ್ಜಾಲದಲ್ಲಿ ಹೇರಳವಾಗಿವೆ. ಇಂಥ ತರುಣರಲ್ಲಿ ಕೆಲವರಾದರೂ ಒಳ್ಳೆಯ ಗುಣಮಟ್ಟವನ್ನು ಹೊಂದಿದ್ದಾರೆ. ಮಿಕ್ಕವರಿಗೆ ಉತ್ಸಾಹ ಚೆನ್ನಾಗಿಯೇ ಇದೆ. ವಿವೇಕ ಉಜ್ಜಲಿಸಬೇಕಿದೆ. ಒಟ್ಟಿನಲ್ಲಿ ಸಂಸ್ಕೃತದ ಮಟ್ಟಿಗೆ ನಾವು ಕೆಟ್ಟ ಕಾಲದಲ್ಲಿಲ್ಲ!

ಪಾಶ್ಚಾತ್ಯ ಸಾಹಿತ್ಯ ಮತ್ತು ಸಂಸ್ಕೃತಿಗಳ ಕಡೆಗೆ ವಾಲುತ್ತಿರುವ ಯುವಜನಾಂಗವನ್ನು ಮತ್ತೆ ಭಾರತೀಯ ಸಂಸ್ಕೃತಿಯ ಕಡೆಗೆ ಆಕರ್ಷಿಸುವ ಉಪಾಯಗಳು ಯಾವುವು?

ಇದಕ್ಕೆ ಉತ್ತರ ಹೇಳುವುದು ಕಷ್ಟ. ಮೊದಲು ನಮ್ಮೊಳಗೆ ನಮ್ಮ ಮೌಲ್ಯಗಳನ್ನು ತುಂಬಿಕೊಳ್ಳೋಣ. ಹಾಗೆ ತುಂಬಿ ಕೋಡಿವರಿಯುವ ಸತ್ತೂ$Ìàನ್ನತಿ ತನ್ನಂತೆಯೇ ತನ್ನ ಪ್ರಸಾರಮಾಧ್ಯಮಗಳನ್ನು ಹುಡುಕಿಕೊಳ್ಳುತ್ತದೆ. ವ್ಯಾಟ್ಸ್‌ಆಪ್‌ ಫಾರ್ವರ್ಡ್‌­ ಗಳಂತೆ ಘೋಷಣೆಗಳನ್ನೋ ಹಪಹಪಿಕೆಗಳನ್ನೋ ಸುಮ್ಮನೆ ಹಬ್ಬಿಸುವುದರಿಂದ ಪ್ರಯೋಜನ ಕಡಮೆ. ಮೌಲ್ಯಗಳ ಸಜೀವ ಅನುಸಂಧಾನವೊಂದೇ ತಾರಕ ಮಾರ್ಗ.

ಸಂಸ್ಕೃತ ಮತ್ತು ಕನ್ನಡ ಸಾಹಿತ್ಯಗಳಲ್ಲಿ ನಿಮಗೆ ಇಷ್ಟವಾದ ಕವಿ? ಕೃತಿ?

ಒಬ್ಬೊಬ್ಬನೇ ಕವಿ ಒಂದೊಂದೇ ಕೃತಿಯನ್ನು ಹೇಳಬೇಕಿದ್ದರೆ ಭಗವಾನ್‌ ವೇದವ್ಯಾಸ ಮತ್ತು ಕುಮಾರವ್ಯಾಸ; ಇವರ ಮಹಾಭಾರತ ಮತ್ತು ಕರ್ಣಾಟಭಾರತಕಥಾಮಂಜರಿ ಎನ್ನುತ್ತೇನೆ. ಮತ್ತೂ ಹಲವರು ನನಗೆ ಇಷ್ಟೇ ಪ್ರಿಯ. ಅವರ ಪಂಕ್ತಿ ದೊಡ್ಡದು. ಅಲ್ಲಿ ತುಂಬ ಮುಖ್ಯರು ಆದಿಕವಿ ವಾಲ್ಮೀಕಿ, ಕಾಳಿದಾಸ, ಶೂದ್ರಕ, ಬಾಣ, ವಿಶಾಖದತ್ತ, ಭವಭೂತಿ, ಗೋವಿಂದ ಪೈ, ಡಿ.ವಿ.ಜಿ., ಮಾಸ್ತಿ, ಕುವೆಂಪು, ಭೈರಪ್ಪ ಮುಂತಾದವರು.

ರಸವಿಮರ್ಶೆಯ ಪರಿಕಲ್ಪನೆಯನ್ನು ಕನ್ನಡಸಾಹಿತ್ಯ ನಿರ್ಲಕ್ಷಿಸಿದ್ದಕ್ಕೆ ಜನತೆಗೆ ಸಾಹಿತ್ಯದ ರುಚಿ ಕಡಮೆಯಾಯಿತೇ?

ಹೌದು. ನೀವು ತುಂಬ ಒಳ್ಳೆಯ ಪರಿಶೀಲನೆ ಮಾಡಿದ್ದೀರಿ. ರಸವಿಮರ್ಶೆ ಎಂಬ ಪರಿಭಾಷೆಯನ್ನು ಚಾಲತಿಗೆ ತಂದವರೇ ನವ್ಯರು. ಇದನ್ನವರು ನಿಂದನಾತ್ಮಕ ಅರ್ಥದಲ್ಲಿಯೇ ಬಳಸಿದ್ದಾರೆ. ಅವರ ಪ್ರಕಾರ – ಯಾವುದು ವಸ್ತುನಿಷ್ಠವಲ್ಲದ, ಪ್ರಮಾಣಪುರಸ್ಸರವಲ್ಲದ ವಿಮರ್ಶೆಯೋ ಅದು ರಸವಿಮರ್ಶೆ; ಇಲ್ಲಿ ದೇಶಾವರಿ ಮಾತುಗಳೂ ಮೇಲುಮೇಲಿನ ಕುರುಡುಮೆಚ್ಚುಗೆಯ ನುಡಿಗಳೂ ಹೆಚ್ಚಾಗಿರುತ್ತವೆ. ಹೀಗಾಗಿ ಅಪಾರ್ಥಕ್ಕೊಳಗಾದ ಈ ಪರಿಭಾಷೆಯನ್ನು ನಾವು ಯುಕ್ತವಾದ ಅರ್ಥದಲ್ಲಿ ಬಳಸಿ, ಭಾರತೀಯ ಕಾವ್ಯಮೀಮಾಂಸೆಯ ಅಧಿಷ್ಠಾನದ ಮೇಲೆ ನಿಂತ ರಸ-ಧ್ವನಿ-ಔಚಿತ್ಯ- ವಕ್ರತೆಗಳ ಮಾಪಕಗಳನ್ನು ಒಳಗೊಂಡ ವಿಮರ್ಶನಪದ್ಧತಿಯನ್ನು ಮತ್ತೆ ಆಚರಣೆಗೆ ತರಬೇಕು. ರಸವೈರವೇ ಆಧುನಿಕ ಸಾಹಿತ್ಯ ಮತ್ತು ಕಲೆಗಳ ಅವನತಿಗೆ ಕಾರಣ. ರಸವಿಲ್ಲದ ಕಡೆಗೆ ಸಹೃದಯರಾದರೂ ಏಕೆ ಸುಳಿಯುತ್ತಾರೆ? ಸಹೃದಯತೆ ಸಮೃದ್ಧವಾಗಿರುವುದು ಸಾಮಾನ್ಯರಲ್ಲಿಯೇ. ಇಸಂಗಳ ಕೋಲಾಹಲದಲ್ಲಿ ಸಮಾಜವನ್ನು ಅಡ್ಡದಾರಿಗೆ ಎಳೆಯುತ್ತಿರುವ ಪಟ್ಟಭದ್ರದಲ್ಲಿ ಸಹೃದಯತೆಯೂ ಇಲ್ಲ, ಸೃಷ್ಟಿಶೀಲತೆಯೂ ಇಲ್ಲ.

ನಿಮಗೆ ಹೆಚ್ಚು ತೃಪ್ತಿ ಕೊಟ್ಟದ್ದು ಅವಧಾನವೋ ಇತರ ಕಲಾಪ್ರಕಾರಗಳ್ಳೋ?

ಕಲೆಯ ಸೃಷ್ಟಿಯ ಮೂಲಕ ಸಿಗುವ ಆನಂದವನ್ನು ಕುರಿತು ಈ ಪ್ರಶ್ನೆ ಹುಟ್ಟಿದ್ದಲ್ಲಿ ಅದು ಅವಧಾನದಿಂದ ಎನ್ನಬೇಕು. ಇದಕ್ಕೆ ಕಾರಣ ನನಗೆ ಆ ಮಾಧ್ಯಮದಲ್ಲಿರುವ ಗತಿ. ಹಾಗಲ್ಲದೆ ಕಲೆಯ ಆಸ್ವಾದದಿಂದ ದಕ್ಕುವ ಆನಂದವನ್ನು ಕುರಿತಿದ್ದರೆ, ಎಲ್ಲ ಕಲೆಗಳೂ ಸೇರುತ್ತವೆ – ಒಂದೇ ಸಿಹಿ ಹಲವು ತಿಂಡಿಗಳ ಮೂಲಕ ಸವಿಗೆ ಎಟುಕುವ ಹಾಗೆ.

ಸಂದರ್ಶನ:

ಡಾ. ಸಂಧ್ಯಾ ಹೆಗಡೆ, ದೊಡ್ಡಹೊಂಡ

Advertisement

Udayavani is now on Telegram. Click here to join our channel and stay updated with the latest news.

Next