Advertisement
ವಾರ ದಲ್ಲಿ ಒಂದು ಊಟವನ್ನಾದರೂ ತ್ಯಾಗ ಮಾಡಿ ಎಂದು ಕರೆಕೊಟ್ಟದ್ದಲ್ಲದೆ ಪ್ರತಿನಿತ್ಯ ಇವರೂ, ಇತರ ಸದಸ್ಯರೂ ಮನೆಯಲ್ಲಿಯೇ ಊಟ ವನ್ನು ತ್ಯಾಗ ಮಾಡುತ್ತಿದ್ದರು. ಇದರ ಪರಿಣಾಮವೋ ಎಂಬಂತೆ ದೇಶದ ಮೂಲೆ ಮೂಲೆ ಗಳಲ್ಲಿ ಸೋಮವಾರ ಒಪ್ಪತ್ತು ಊಟ ವನ್ನು ಜನರು ಬಿಟ್ಟಿದ್ದರು. ಕ್ಷೀರ ಕ್ರಾಂತಿಗೂ, ಹಸುರು ಕ್ರಾಂತಿಗೂ ಕಾರಣರಾದ ಇವರು ಗಾಂಧೀಜಿಯ ಅಸಹಕಾರ ಚಳವಳಿಯಲ್ಲಿ ಪಾಲ್ಗೊಂಡಿದ್ದರಲ್ಲದೆ ಕಾಶಿಯ ಮಹಾತ್ಮಾ ಗಾಂಧಿ ವಿದ್ಯಾಪೀಠದಲ್ಲಿ ಓದಿ ಬೆಳೆದವರು. ಅಲ್ಲಿನ ಪದವಿಯನುಸಾರ ಬಂದ “ಶಾಸ್ತ್ರಿ’ ಅಡ್ಡ ಹೆಸರಿಂದ ಅವರನ್ನು ಜಾತೀಯ ದೃಷ್ಟಿಯಿಂದ ಕಂಡವರೇ ಹೆಚ್ಚು ಮಂದಿ. ಇವರ ಮೂಲ ಹೆಸರು ಲಾಲ್ ಬಹದ್ದೂರ್ ಶ್ರೀವಾಸ್ತವ.
ಅಕೌಂಟೆಂಟರನ್ನು ಎಲ್ಲಿಯೋ ನೋಡಿದಂತಿದೆಯಲ್ಲ ಎಂದು ಭೈರಪ್ಪರಿಗೆ ಅನಿಸಿತು. ಒಂದು ದಿನ ಭೈರಪ್ಪ ಬ್ಯಾಂಕ್‌ಗೆ ಬೆಳಗ್ಗೆ 10 ಗಂಟೆಗೆ ಹೋದಾಗ ಗ್ರಾಹಕರ ಸಾಲು ದೊಡ್ಡ ದಿತ್ತು. ಕೌಂಟರ್ ತೆರೆದಿರಲಿಲ್ಲ. ಅಕೌಂಟೆಂಟ್ ಬಂದಿರಲಿಲ್ಲ. “ಅಕೌಂಟೆಂಟ್ ಬರುವವರೆಗೆ ಕಾಯಬೇಕು’ ಎಂದು ಮೆನೇಜರ್ ಕೇಳಿ ಕೊಂಡರು. ಅಕೌಂಟೆಂಟ್ 12 ನಿಮಿಷ ತಡವಾಗಿ ಬಂದರು. ಬಂದ ತತ್‌ಕ್ಷಣ ಎಲ್ಲರ ಮುಂದೆ ಬಂದು “ಕ್ಷಮಿಸಬೇಕು’ ಎಂದು ಹೇಳಿ ಗಡಿಬಿಡಿಯಲ್ಲಿ ಖಜಾನೆಯ ಬಾಗಿಲು ತೆರೆದರು.
Related Articles
Advertisement
ಮಕ್ಕಳು ಓದುವಾಗ ತಂದೆ ಕೇಂದ್ರ ಸರಕಾ ರದಲ್ಲಿ ಸಚಿವರಾಗಿದ್ದರು. ಒಂದೇ ಒಂದು ದಿನ ಸರಕಾರಿ ಕಾರು ಹತ್ತಲು ಅವರು ಮಕ್ಕಳಿಗೆ ಬಿಟ್ಟಿರಲಿಲ್ಲ. ಮಕ್ಕಳು ನಗರ ಸಾರಿಗೆ ಬಸ್‌ನಲ್ಲಿ ಶಾಲಾ ಕಾಲೇಜಿಗೆ ಹೋಗುತ್ತಿದ್ದರು. ಶಾಲಾ ಕಾಲೇಜುಗಳಲ್ಲಿ ಹೆಸರಿನ ಮುಂದೆ ಶಾಸ್ತ್ರಿ ಎಂದು ಸೇರಿಸಲಿಲ್ಲವಂತೆ. ನಿಮ್ಮ ಓದು ಮುಗಿದ ಮೇಲೆ ನೀವೇ ಪತ್ರಿಕೆಗಳಲ್ಲಿ ಜಾಹೀರಾತು ನೋಡಿ ನೌಕರಿಗೆ ಅರ್ಜಿ ಹಾಕಿಕೊಳ್ಳಿ. ನನ್ನ ಹೆಸರು ಉದ್ಯೋಗದಾತನಿಗೆ ತಿಳಿಯ ಬಾರದು ಎಂದು ಹೇಳಿದ್ದರಂತೆ. ಈತ ಬಿಕಾಂ ಮಾಡಿದ ಮೇಲೆ ಇದೇ ಬ್ಯಾಂಕ್‌ನಲ್ಲಿ ಕ್ಲರ್ಕ್ ಕೆಲಸ ಸಿಕ್ಕಿತು.
ಬ್ಯಾಂಕ್‌ನ ಪರೀಕ್ಷೆಗಳನ್ನು ಪಾಸು ಮಾಡಿ ಐದು ವರ್ಷ ಸೇವೆ ಸಲ್ಲಿಸಿದ ಬಳಿಕ ಅಕೌಂಟೆಂಟ್ ಆಗಿ ಭಡ್ತಿ ಸಿಕ್ಕಿತ್ತು ಎಂದು ಭೈರಪ್ಪನವರು “ಭಿತ್ತಿ’ ಕಾದಂಬರಿಯಲ್ಲಿ (1996) ಉಲ್ಲೇಖೀಸಿದ ಬಳಿಕ “ಶಾಸ್ತ್ರಿಗಳಂಥವರು ಬದುಕಿ ಪ್ರಧಾನಿಯಾಗಿ ಮುಂದುವರಿದಿದ್ದರೆ ನಮ್ಮ ರಾಷ್ಟ್ರದ ರಾಜಕೀಯ ಮತ್ತು ಪರಿಣಾಮವಾಗಿ ಸಾಮಾಜಿಕ ಮತ್ತು ವ್ಯಕ್ತಿಗತ ನೈತಿಕ ಮೌಲ್ಯಗಳು ಪ್ರಪಾತಕ್ಕೆ ಇಳಿಯುತ್ತಿರಲಿಲ್ಲವೆಂದು ಹಲವು ಬಾರಿ ಯೋಚಿಸಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
“ಪ್ರಧಾನಿಯಾಗಿ ದ್ದವರ ಮಗ ತನ್ನ ತಂದೆಯ ವರ್ಚಸ್ಸನ್ನು ಒಂದು ಸ್ಕೂಟರ್ ಶೀಘ್ರ ಪಡೆದುಕೊಳ್ಳಲೂ ಬಳಸಲಿಲ್ಲ’ ಎಂದು 1969ರ ಘಟನೆಯನ್ನು ಈಗಲೂ 93ರ ಹರೆಯದ ಭೈರಪ್ಪನವರು ಜ್ಞಾಪಕನಿಧಿಯಿಂದ ಹೊರಹಾಕುತ್ತಾರೆ. ಯಾವುದೇ ಕ್ಷೇತ್ರದವರಿಗಾಗಲಿ ಪ್ರಾಮಾಣಿಕತೆ ಜತೆ ಜನಸಾಮಾನ್ಯರ ಸಮಸ್ಯೆ ನಿವಾರಣೆಗೆ ಅತೀವ ಕಾಳಜಿ ಇರಲೇಬೇಕು. ಆ ಸಂಸ್ಕಾರವನ್ನು ಮನೆ, ತಂದೆ, ತಾಯಿ, ಶಿಕ್ಷಕರು, ಹಿರಿಯರು ಕಟ್ಟಿಕೊಡ ಬೇಕಾಗುತ್ತದೆ.
-ಮಟಪಾಡಿ ಕುಮಾರಸ್ವಾಮಿ